ಸಾರಾಂಶ
-ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪ್ರತಿಭಟನಾ ಸಮಾವೇಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಲು ಭಾರತೀಯ ಹಿಂದೂಗಳು ಒಗ್ಗಟ್ಟು ಪ್ರದರ್ಶಿಸುವ ಅಗತ್ಯವಿದೆ ಎಂದು ಕಡೂರು ಎಳನಾಳು ಮಠದ ಶ್ರೀ ಜ್ಞಾನ ಪ್ರಭು ಸಿದ್ದರಾಮ ದೇಶಿಕೇಂದ್ರ ಶ್ರೀಗಳು ಹೇಳಿದರು.
ಹಿಂದೂ ಹಿತರಕ್ಷಣಾ ಸಮಿತಿ ಹಾಗೂ ಸಂಘ ಪರಿವಾರದ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಆಯೋಜಿಸಿದ್ದ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದರು.ಯಾವುದೇ ದೇಶವಾದರೂ, ಯಾವುದೇ ಧರ್ಮದವರಾದರೂ ತಮ್ಮೊಂದಿಗೆ ಬಾಳುತ್ತಿರುವುದು ಮಾನವನೆಂಬುದನ್ನು ಮನಗಂಡು ಬಾಂಗ್ಲಾ ದೇಶಿಗರು ಭಾರತೀಯರ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸಿ ಶಾಂತಿ ಕಾಪಾಡಿಕೊಳ್ಳಬೇಕು ಎಂದು ನುಡಿದರು.
ಬಾಳೆಹೊನ್ನೂರು ಶಾಖಾ ಮಠದ ರುದ್ರ ಮೂರ್ತಿ ಶಿವಾಚಾರ್ಯರು ಮಾತನಾಡಿ, ಪ್ರಪಂಚದಲ್ಲಿಯೇ ಮಾನವ ಧರ್ಮಕ್ಕೆ ಜಯವಾಗಲಿ, ಮಾನವತೆಗೆ ಜಯವಾಗಲಿ ಎಂದು ಸಾರಿದ ಘೋಷಿಸಿದ ದೇಶ ಭಾರತ ಮಾತ್ರ. ಶಾಂತಿಪ್ರಿಯರಾದ ಭಾರತೀ ಯರ ಮೇಲೆ ದೌರ್ಜನ್ಯ ಎಸಗುತ್ತಿರುವವರು ಬಳಸುವ ಅಸ್ತ್ರಗಳಿಗೆ ಪ್ರತಿಯಾಗಿ ನಾವು ಸಹ ಅವರು ಬಳಸುವ ಅಸ್ತ್ರಗಳನ್ನು ಬಳಸಬೇಕು ಎಂದರು.ಮಾನವೀಯತೆ ಮತ್ತು ಮನುಷ್ಯತ್ವವನ್ನೇ ಮರೆತಿರುವವರ ವಿರುದ್ಧ ಶಾಂತಿಮಂತ್ರ ಜಪಿಸಿದರೆ ಅಲ್ಲಿರುವ ಭಾರತೀಯರು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಅವರಿಗೆ ತಕ್ಕ ಉತ್ತರ ನೀಡಲು ಹಿಂದೂ ಧರ್ಮಯರೆಲ್ಲರೂ ಒಂದಾಗ ಬೇಕು. ಬಾಂಗ್ಲಾ ದೇಶ ಎಂಬುದು ಭಾರತ ನೀಡಿದ ಭಿಕ್ಷೆ. ನಮ್ಮಿಂದ ಭಿಕ್ಷೆ ಪಡೆದ ಆ ದೇಶದವರು ನಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದಾರೆ, ಈ ಬಗ್ಗೆ ಬಾಂಗ್ಲಾ ದೇಶದ ಹಿಂದೂಗಳು ಮತ್ತು ಭಾರತೀಯರು ಜಾಗೃತರಾಗಬೇಕು ಎಂದು ಹೇಳಿದರು.
ಕೆ. ಬಿದರಯ್ಯ ವೇಣುಪುರಿ ಮಠದ ಪ್ರಭು ಕುಮಾರ ಶ್ರೀಗಳು ಮಾತನಾಡಿ, ಸಮಾನತೆ ಎಂಬುದು ದೌರ್ಬಲ್ಯವಾಗಿ ಪರಿಣಮಿಸ ಬಾರದು, ಶಾಂತಿ ಮಂತ್ರ ಜಪಿಸಿದ ಕಾರಣಕ್ಕೆ ಬಾಂಗ್ಲಾದ ಭಾರತೀಯರಿಗೆ ಈ ದುಸ್ಥಿತಿ ಒದಗಿದೆ ಈ ಬಗ್ಗೆ ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.ಈ ವೇದಿಕೆಯಲ್ಲಿ ಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಇಸ್ಕಾನ್ ಚಿಕ್ಕಮಗಳೂರು ಘಟಕದ ಮುಖ್ಯಸ್ಥ ಪ್ರಭು ಯಾದವ ಕೃಷ್ಣ ಇದ್ದರು.
ವೇದಿಕೆ ಕಾರ್ಯಕ್ರಮಕ್ಕೆ ಮೊದಲು ನಗರದ ತಾಲೂಕು ಕಚೇರಿ ಆವರಣದಿಂದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಕಾರ್ಯಕರ್ತರು, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಕಾರ್ಯಕರ್ತರು, ಭಜನಾ ಮಂಡಳಿಗಳ ಕಾರ್ಯಕರ್ತರು, ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಬಾಂಗ್ಲಾ ದೇಶದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಘೋಷಣೆಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.4 ಕೆಸಿಕೆಎಂ 7ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಚಿಕ್ಕಮಗಳೂರಿನಲ್ಲಿ ಬುಧವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸ್ವಾಮೀಜಿ ಮಾತನಾಡಿದರು.