ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರಸಕ್ತ ಕಾಲಘಟ್ಟದಲ್ಲಿ ಗೋವು ಆತಂಕದಲ್ಲಿದ್ದು, ಪ್ರತಿಯೊಂದು ಮನೆಯಲ್ಲಿ ಗೋವಿನ ರಕ್ಷಣೆಗೆ ಹಿಂದೂಗಳು ಸಿದ್ಧರಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಪ್ರಾಂತ ಸಹಕಾರ್ಯವಾಹ ಪಿ.ಎಸ್. ಪ್ರಕಾಶ್ ಹೇಳಿದರು.ಕದ್ರಿ ಮೈದಾನದಲ್ಲಿ ಶನಿವಾರ ಗೋಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋಮಂದಿರ ವತಿಯಿಂದ ನಡೆದ ರಾಜ್ಯಮಟ್ಟದ ನಂದಿ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.ಭಾವನೆಗಳಿಗೆ ಘಾಸಿಗೊಳಿಸುವ ಮೂಲಕ ಹಿಂದೂಗಳನ್ನು ದೂರ ಮಾಡುವ ಪ್ರಯತ್ನ ನಡೆಯುತ್ತಿದೆ. ಇದರೊಂದಿಗೆ ಗೋವನ್ನು ಕೂಡ ನಮ್ಮಿಂದ ದೂರ ಮಾಡುವ ಪ್ರಯತ್ನ ನಡೆಯುತ್ತಿದೆ. ನಂದಿ ಉಳಿಯಬೇಕು ಮಾತ್ರವಲ್ಲ ಬೆಳೆಯಬೇಕು. ನಂದಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಆ ಜಾಗೃತಿಗಾಗಿ ಕರ್ನಾಟಕದ ಮೂಲೆ ಮೂಲೆಗೆ ಈ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಭಾರತದ ಸ್ವದೇಶಿ ಗೋವುಗಳು ಆರೋಗ್ಯಕ್ಕೆ ಪೂರಕ. ಸ್ವದೇಶಿ ಗೋ ತಳಿಗಳನ್ನು ಮತ್ತೆ ಬೆಳೆಸಬೇಕಾಗಿದೆ. ಗೋವು ನಮಗೆ ಧಾರ್ಮಿಕತೆಯೂ ಹೌದು, ಅದರ ಜೊತೆಗೆ ಆರ್ಥಿಕ, ಸಾಮಾಜಿಕವಾಗಿಯೂ ಮಹತ್ವವಾದುದು ಎಂದು ಪ್ರಕಾಶ್ ಹೇಳಿದರು.
ಕಾವೂರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಸನಾತನ ಧರ್ಮದ ಸಂಸ್ಕೃತಿಯ ಬೇರು ಆದ ಈ ತಾತ್ವಿಕ ಸಿದ್ಧಾಂತವನ್ನು ಮಕ್ಕಳಿಗೆ ತಿಳಿಸಿಲ್ಲವೆಂದಾದರೆ ಮುಂದಿನ ಜನಮಾನಸಕ್ಕೆ ಇದರ ಮಹತ್ವ ಖಂಡಿತ ತಿಳಿಯಲು ಸಾಧ್ಯವಿಲ್ಲ. ಗೋವಿನ ಉತ್ಪನ್ನಗಳು ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿ ಕಾಣುತ್ತಿದ್ದು, ಅದರ ಮಹತ್ವವನ್ನು ನಾವು ಅರಿತುಕೊಂಡು ಒಪ್ಪಿಕೊಳ್ಳಬೇಕು ಎಂದರು.ನಂದಿ ರಥಯಾತ್ರೆಯ ಸ್ವಾಗತ ಸಮಿತಿ ಅಧ್ಯಕ್ಷ ಗಿರಿಧರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ದ.ಕ. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಅಧ್ಯಕ್ಷ ಭಕ್ತಿಭೂಷಣ್ ದಾಸ್, ಚಿಕ್ಕಬಳ್ಳಾಪುರ ಓಂಕಾರ ಜ್ಯೋತಿ ಆಶ್ರಮದ ಶ್ರೀ ಕಾಳಿತನಯ ಉಮಾಮಹೇಶ್ವರ ಆಚಾರ್ಯ, ಕ್ಷೇತ್ರ ಸಂಘಚಾಲಕ ಡಾ.ಪಿ. ವಾಮನ್ ಶೆಣೈ, ಸಮಿತಿಯ ಗೌರವ ಸಲಹೆಗಾರರಾದ ಪ್ರೊ.ಎಂ.ಬಿ. ಪುರಾಣಿಕ್, ಸುಧಾಕರ ರಾವ್ ಪೇಜಾವರ, ಗೌರವಾಧ್ಯಕ್ಷ ಮಹಾಬಲ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಜಗದೀಶ ಶೇಣವ, ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ್ ಮತ್ತಿತರರು ಇದ್ದರು.ಗೋಸೇವಾ ಗತಿವಿಧಿ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಪ್ರವೀಣ ಸರಳಾಯ ಪ್ರಸ್ತಾವಿಕ ಮಾತನಾಡಿದರು.ಶಾಂತಿ ಮಂತ್ರ ಮೂಲಕ ಕಾರ್ಯಕ್ರಮ ಸಮಾಪನಗೊಂಡಿತು. ಆಶಿಕ್ ಮಾಡೂರು ನಿರೂಪಿಸಿದರು.ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡ ನಂದಿ ರಥಯಾತ್ರೆಗೆ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಮುಖ್ಯಸ್ಥ ಗಣೇಶ್ ರಾವ್ ಚಾಲನೆ ನೀಡಿದರು. ಬಳಿಕ ಬಂಟ್ಸ್ ಹಾಸ್ಟೆಲ್ ಮಾರ್ಗವಾಗಿ ಕದ್ರಿ ಮೈದಾನದವರೆಗೆ ರಥಯಾತ್ರೆ ಸಾಗಿತು. ಬೃಹತ್ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡಿದ್ದರು.