ಸಾರಾಂಶ
ವಿಶ್ವ ಹಿಂದು ಪರಿಷತ್ ಮಂಗಳೂರು ವತಿಯಿಂದ ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ಪೇಜಾವರಶ್ರೀಗಳ ಗುರುವಂದನೆ ಕಾರ್ಯಕ್ರಮ ನಡೆಯಿತು. ಈ ವೇಳೆ ರಾಮ ಮಂದಿರವನ್ನು ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರಿಗೂ ಇದೆ. ಮಂದಿರ ಮತ್ತೊಮ್ಮೆ ವಿದೇಶಿಯರ, ವಿಧ್ವಂಸಕರ ಕೈಗೆ ಸಿಲುಕದಂತೆ ನೋಡಿಕೊಳ್ಳಬೇಕಿದೆ ಎಂದು ಶ್ರೀಗಳು ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಅಯೋಧ್ಯೆಯ ರಾಮ ಮಂದಿರದ ಕನಸು ಈಗ ನನಸಾಗಿದೆ. ಆದರೆ ಜವಾಬ್ದಾರಿ ಮುಗಿದಿಲ್ಲ. ರಾಮ ಮಂದಿರ ಮಂದಿರವಾಗಿಯೇ ಉಳಿಯಬೇಕಾದರೆ ಹಿಂದುಗಳು ಈ ದೇಶದಲ್ಲಿ ಬಹುಸಂಖ್ಯಾತರಾಗಿಯೇ ಉಳಿಯಬೇಕು. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.ವಿಶ್ವ ಹಿಂದು ಪರಿಷತ್ ಮಂಗಳೂರು ವತಿಯಿಂದ ನಗರದ ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ಸೋಮವಾರ ಗುರುವಂದನೆ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ರಾಮ ಮಂದಿರವನ್ನು ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳುವ ಹೊಣೆಗಾರಿಕೆ ನಮ್ಮೆಲ್ಲರಿಗೂ ಇದೆ. ಮಂದಿರ ಮತ್ತೊಮ್ಮೆ ವಿದೇಶಿಯರ, ವಿಧ್ವಂಸಕರ ಕೈಗೆ ಸಿಲುಕದಂತೆ ನೋಡಿಕೊಳ್ಳಬೇಕಿದೆ. ಯುಗಗಳು ಸಂದರೂ ರಾಮನ ಬಗೆಗಿನ ನಂಬಿಕೆ ಜನಮಾನಸದಲ್ಲಿ ದೃಢವಾಗಿ ಉಳಿಯಲು ಈ ದೇಶದ ಸಂಸ್ಕೃತಿ ಕಾರಣ ಎಂದರು. ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ, ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರ ಸಾಧನೆಯಂತೆ ಅವರ ಶಿಷ್ಯರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮುನ್ನಡೆಯುತ್ತಿದ್ದಾರೆ ಎಂದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಸಹಕಾರ್ಯವಾಹ ಪಿ.ಎಸ್.ಪ್ರಕಾಶ್ ಅಭಿನಂದನಾ ಭಾಷಣ ಮಾಡಿದರು.
ಕದ್ರಿ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವೇದವ್ಯಾಸ ಕಾಮತ್, ಶ್ರೀ ಕ್ಷೇತ್ರ ಕದ್ರಿಯ ವೇದಮೂರ್ತಿ ವಿಠಲದಾಸ ತಂತ್ರಿ ಮುಖ್ಯ ಅತಿಥಿಗಳಾಗಿದ್ದರು. ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್, ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಸ್ವಾಗತ ಸಮಿತಿ ಸದಸ್ಯ ಕರುಣಾಕರ್, ಗಿರಿಪ್ರಕಾಶ್ ತಂತ್ರಿ, ಶಿವಾನಂದ ಮೆಂಡನ್ ಮತ್ತಿತರರಿದ್ದರು.ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ನಿರೂಪಿಸಿದರು.