ಸಾರಾಂಶ
ಶತಮಾನಗಳ ಹಿಂದೆ ಛಿದ್ರವಾಗಿದ್ದ ಹಿಂದೂ ಸಮಾಜವನ್ನು ಏಕತ್ರಗೊಳಿಸಿ ಒಂದೇ ಸೂತ್ರದಡಿ ತರಲು ಸಂಘಟನೆ ಆರಂಭಿಸಲು ಡಾ,ಹೆಡಗೆವಾರ್ ಮುಂದಾದಾಗ ಅಪಹಾಸ್ಯಕ್ಕೀಡಾಗಿದ್ದರು. ಆದರೆ ಇಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೋಟ್ಯಂತರ ಸ್ವಯಂ ಸೇವಕರನ್ನು ಹೊಂದಿರುವ ವಿಶ್ವದ ದೊಡ್ಡ ಸೇವಾ ಸಂಘಟನೆಯಾಗಿದೆ ಆರ್‌ಎಸ್‌ಎಸ್ ಪ್ರಾಂತ ಪ್ರಮುಖ ಡಾ.ಅಜಯ ಕುಲಕರ್ಣಿ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಶತಮಾನಗಳ ಹಿಂದೆ ಛಿದ್ರವಾಗಿದ್ದ ಹಿಂದೂ ಸಮಾಜವನ್ನು ಏಕತ್ರಗೊಳಿಸಿ ಒಂದೇ ಸೂತ್ರದಡಿ ತರಲು ಸಂಘಟನೆ ಆರಂಭಿಸಲು ಡಾ,ಹೆಡಗೆವಾರ್ ಮುಂದಾದಾಗ ಅಪಹಾಸ್ಯಕ್ಕೀಡಾಗಿದ್ದರು. ಆದರೆ ಇಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೋಟ್ಯಂತರ ಸ್ವಯಂ ಸೇವಕರನ್ನು ಹೊಂದಿರುವ ವಿಶ್ವದ ದೊಡ್ಡ ಸೇವಾ ಸಂಘಟನೆಯಾಗಿದೆ ಆರ್‌ಎಸ್‌ಎಸ್ ಪ್ರಾಂತ ಪ್ರಮುಖ ಡಾ.ಅಜಯ ಕುಲಕರ್ಣಿ ಹೇಳಿದರು.ರಬಕವಿ-ರಾಮಪುರ ಮತ್ತು ಬನಹಟ್ಟಿಯ ಸಹಸ್ರಾರು ಗಣವೇಷಧಾರಿ ಸ್ವಯಂಸೇವಕರ, ಅಭಿಮಾನಿಗಳ ಸಮಾವೇಶದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಪೂರ್ವ, ಸ್ವಾತಂತ್ರ್ಯಾನಂತರ ಹಾಗೂ ಇಂದು ಕೂಡ ವಿಘಟಿತ ಮನಸ್ಸುಗಳು ಸಂಘದ ಕ್ರಿಯಾಶೀಲತೆ ಮತ್ತು ಸೇವಾನಿಷ್ಠ ಕಾರ್ಯಕರ್ತರನ್ನು ಕಂಡು ತಲ್ಲಣಗೊಂಡಿದ್ದಾರೆ. ವಿಘಟಿತ ತಂತ್ರಗಳಿಗೆ ಹಿಂದುತ್ವ ಎಂದಿಗೂ ನಾಶವಾಗದು ಎನ್ನುವುದಕ್ಕೆ ನಮ್ಮ ಒಗ್ಗಟ್ಟು ನಿದರ್ಶನವೆಂದು ಹೇಳಿದರು.
ಸ್ವದೇಶಿ ಮಂತ್ರ ಭಾರತೀಯರ ಉಸಿರಾಗಬೇಕು. ಅಮೇರಿಕ, ಚೀನಾದಂಥ ದೇಶಗಳು ತಮ್ಮ ಸ್ವಾರ್ಥ ಸಾಧನೆಗೆ ಭಾರತ ವಿರೋಧಿ ನೀತಿ ತಾಳಿದ್ದರೂ ನಮ್ಮ ಬೆಳವಣಿಗೆಗೆ ಎಷ್ಟೇ ಅಡೆತಡೆ ಒಡ್ಡಿದರೂ ನಾವು ಸ್ವದೇಶಿ ಉತ್ಪನ್ನಗಳ ಬಳಕೆ ಮತ್ತು ಮೇಕ್ ಇನ್ ಇಂಡಿಯಾ ಸೂತ್ರಕ್ಕೆ ಬದ್ಧರಾದಲ್ಲಿ ವಿಶ್ವದ ಯಾವುದೇ ಶಕ್ತಿಯಿಂದ ನಮ್ಮ ಪ್ರಗತಿ ತಡೆಯಲು ಸಾಧ್ಯವಾಗದು. ಹಿಂದೂಗಳ ನಾವೆಲ್ಲರೂ ಒಂದು ಎಂದರಿತು ಏಕ ಸೂತ್ರದಲ್ಲಿ ಸಂಘಟಿತರಾದಲ್ಲಿ ಮಾತ್ರ ನಾವು ನಮ್ಮತನ ಉಳಿಸಿ, ಬೆಳೆಸಲು ಸಾಧ್ಯವಿದೆ ಎಂದರು. ವೇದಿಕೆಯಲ್ಲಿ ಪ್ರಭು ಪಾಟೀಲ ಉಪಸ್ಥಿತರಿದ್ದರು. ಧರೇಶ ಕುಂಬಾರ ವಂದಿಸಿದರು.ಆಕರ್ಷಕ ಪಥಸಂಚಲನ:ಅವಳಿ ನಗರದಲ್ಲಿ ಭಾನುವಾರ ಮಧ್ಯಾಹ್ನ ಆರ್‌ಎಸ್‌ಎಸ್ ಶತಾಬ್ದಿ ವರ್ಷದ ನಿಮಿತ್ತ ಆಕರ್ಷಕ ಪಥ ಸಂಚಲನ ನಡೆಯಿತು.
ರಬಕವಿಯ ಎಂ.ವಿ.ಪಟ್ಟಣ ಪಿಯು ಕಾಲೇಜು ಮೈದಾನದಿಂದ ಹೊರಟ ಮೆರವಣಿಗೆ ಹಳೇ ಬಸ್ ನಿಲ್ದಾಣ, ಔಟ್‌ಪೋಸ್ಟ್, ಹರಿಜನ ಕೇರಿ, ಹೊಸಪೇಟ ಲೇನ್, ಮಾರುಕಟ್ಟೆ ಪ್ರದೇಶ, ಶಂಕರಲಿಂಗ ಸರ್ಕಲ್ ಮಾರ್ಗವಾಗಿ ಸಾಗಿದರೆ, ಹೊಸೂರನ ಗಣವೇಷಧಾರಿಗಳು ನೀರಿನ ಟ್ಯಾಂಕ್, ರಾಜ್ಯ ಹೆದ್ದಾರಿ, ಪೂರ್ಣಿಮಾ ಹಿರೋ ಮೋಟರ್ಸ್ ಮಾರ್ಗವಾಗಿ ಬಂದು ರಾಮಪುರ ಮಸೀದಿ ಮುಂದಿನ ಮುಖ್ಯ ರಸ್ತೆಯಲ್ಲಿ ಸೇರ್ಪಡೆಗೊಂಡು ನೀಲಕಂಠೇಶ್ವರಮಠ, ನಗರಸಭೆ ಕಚೇರಿ, ಬನಹಟ್ಟಿ ಪೊಲೀಸ್ ಠಾಣೆ ಮಾರ್ಗವಾಗಿ ಎಸ್‌ಆರ್‌ಎ ಮೈದಾನದಲ್ಲಿ ಸಮಾವೇಶಗೊಂಡರು. ಬನಹಟ್ಟಿ ನಗರದ ಹಳೆ ನೀರಿನ ಟ್ಯಾಂಕ್ ಹತ್ತಿರದ ಚೌಡಯ್ಯ ಸರ್ಕಲ್ ನಿಂದ ಆರಂಭಗೊಂಡ ಪಥ ಸಂಚಲನ ನಾಮದೇವ ಗಲ್ಲಿ, ಸೋಮವಾರ ಪೇಠೆಯ ಪ್ರಮುಖ ಬೀದಿ, ವೀರಭದ್ರೇಶ್ವರ ದೇವಸ್ಥಾನದ ಮಾರ್ಗ, ಗಾಂಧಿ ವೃತ್ತ, ಮಂಗಳವಾರ ಪೇಟೆ ಮತ್ತು ತಮ್ಮಣ್ಣಪ್ಪ ಚಿಕ್ಕೋಡಿ ಮಾರ್ಗದ ಮೂಲಕ ಸಾಗಿ ರಬಕವಿ-ಹೊಸೂರಿನ ತಂಡದೊಡನೆ ಎಸ್ಆರ್‌ಎ ಮೈದಾನದಲ್ಲಿ ಸಮಾವೇಶಗೊಂಡವು.ಪಥ ಸಂಚಲನದ ಮಾರ್ಗದಲ್ಲಿ ರಸ್ತೆಯ ಬದಿಗೆ ನಿಂತ ಜನರು ಗಣವೇಷಧಾರಿಗಳಿಗೆ ಹೂವಿನ ಮಳೆಗೈದರು. ಭಾರತ ಮಾತಾಕೀ ಜೈ, ಹರ ಹರ ಮಹಾದೇವ, ಜೈ ಶ್ರೀರಾಮ ಘೋಷಣೆಗಳು ಮೊಳಗಿಸಿದರು. ಮಾರ್ಗದ ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರ ನಾಯಕರ ಛದ್ಮ ವೇಷಧಾರಿ ಮಕ್ಕಳು ಗಮನ ಸೆಳೆದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಮೂರು ಜನ ಡಿವೈಎಸ್ಪಿ, ಆರು ಜನ ಸಿಪಿಐ ಸೇರಿದಂತೆ ನಾಲ್ಕು ನೂರು ಜನ ಪೊಲೀಸ್ ರನ್ನು ಬಂದೋಬಸ್ತ್ ಏರ್ಪಡಿಸಲಾಗಿತ್ತು.