ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದ 22ನೇ ಕ್ರಸ್ಟ್‌ಗೇಟ್ ಅಳವಡಿಕೆಗೆ ಪರಿಣಿತರ ತಂಡ ಹರಸಾಹಸಪಡುತ್ತಿದೆ. ಮೂರನೇ ದಿನವಾದ ಗುರುವಾರವೂ ಕ್ರಸ್ಟ್‌ಗೇಟ್ ಅಳವಡಿಕೆ ಸಾಧ್ಯವಾಗಿಲ್ಲ.
ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲೂಕಿನ ಹಿಪ್ಪರಗಿ ಜಲಾಶಯದ 22ನೇ ಕ್ರಸ್ಟ್‌ಗೇಟ್ ಅಳವಡಿಕೆಗೆ ಪರಿಣಿತರ ತಂಡ ಹರಸಾಹಸಪಡುತ್ತಿದೆ. ಮೂರನೇ ದಿನವಾದ ಗುರುವಾರವೂ ಕ್ರಸ್ಟ್‌ಗೇಟ್ ಅಳವಡಿಕೆ ಸಾಧ್ಯವಾಗಿಲ್ಲ. ಬುಧವಾರ ಅಳವಡಿಸಿದ್ದ ಕ್ರಸ್ಟ್‌ಗೇಟ್ ನೀರಿನ ಒತ್ತಡ ತಾಳದೇ ಮುರಿದಿದೆ. 20 ವರ್ಷಗಳಿಂದ ಜಲಾಶಯದ ಕ್ರಸ್ಟ್‌ಗೇಟ್ ನಿರ್ವಹಣೆ ಮಾಡಿಲ್ಲ. ಆದ್ದರಿಂದ ಸಮಸ್ಯೆ ಉಂಟಾಗಿದೆ ಎಂದು ರೈತ ಸಂಘಟನೆಗಳು ಆಕ್ರೊಶ ಹೊರಹಾಕಿವೆ. ಸಮಸ್ಯೆ ಮುಂದುವರಿದರೆ ಹಿಪ್ಪರಗಿ ಜಲಾಶಯ ಬರಿದಾಗುವ ಸಾಧ್ಯತೆ ಇದೆ. ಇದರಿಂದ ಜಲಾಶಯ ಆಶ್ರಯಿಸಿದ ರೈತರು, ಜನ ಜಾನುವಾರುಗಳಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗಲಿದೆ. ಹಿಪ್ಪರಗಿ ಜಲಾಶಯ 2005ರಲ್ಲಿ ಉದ್ಘಾಟನೆಯಾಗಿದ್ದು, 6.04 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದೆ. ಈ ಪೈಕಿ 4.90 ಟಿಎಂಸಿ ನೀರು ಬಳಸಿಕೊಳ್ಳಬಹುದಾಗಿದೆ. ಕ್ರಸ್ಟ್‌ಗೇಟ್ ಮುರಿದಿದ್ದರಿಂದ 24 ಗಂಟೆಗೆ ಸರಾಸರಿ 0.75 ಟಿಎಂಸಿ ನೀರು ಹರಿದು ಹೋಗುತ್ತಿದೆ. ಮೂರು ದಿನಗಳಿಂದ ಸುಮಾರು 2 ಟಿಎಂಸಿ ನೀರು ನದಿಯ ಪಾತ್ರಕ್ಕೆ ಹರಿದು ಹೋಗಿದೆ.ಜಿಲ್ಲಾಧಿಕಾರಿ ಭೇಟಿ: ತಾಲೂಕಿನ ಹಿಪ್ಪರಗಿ ಜಲಾಶಯಕ್ಕೆ ಜಿಲ್ಲಾಧಿಕಾರಿ ಸಂಗಪ್ಪ ಹಾಗೂ ತಂಡದವರು ಗುರುವಾರ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಬುಧವಾರ ಅಳವಡಿಸಿದ್ದ ಗೇಟ್ ನೀರಿನ ರಭಸ ತಾಳದೇ ಕಿತ್ತು ಹೋಗಿದೆ. ತಜ್ಞರ ತಂಡ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಅಗತ್ಯ ಕ್ರಮ ಜರುಗಿಸಲಿದ್ದಾರೆ. ಸುಮಾರು 5 ಅಡಿಯಷ್ಟು ನೀರು ನದಿ ಪಾತ್ರಕ್ಕೆ ಹರಿದು ಹೋಗಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರೈತರ ಸಂಘದ ಉಪಾಧ್ಯಕ್ಷ ಎ.ಬಿ.ಹಳ್ಳೂರ ಮಾತನಾಡಿ, ರಾಯಬಾಗ, ತೇರದಾಳ, ಜಮಖಂಡಿ, ಅಥಣಿ ಕ್ಷೇತ್ರಗಳ ರೈತರಿಗೆ ಅನುಕೂಲ ಕಲ್ಪಿಸುವ ಈ ಜಲಾಶಯದ ಬಗ್ಗೆ ಸರ್ಕಾರ ಹಾಗೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ, ಉತ್ತರ ಕರ್ನಾಟಕದ ರೈತರು ಪ್ರತಿಭಟನೆ ಮಾಡಿಯೇ ಹಕ್ಕು ಪಡೆಯುವ ಅನಿವಾರ್ಯತೆ ತಂದೊಡ್ಡಿದ್ದಾರೆ ಎಂದು ಆರೋಪಿಸಿ ದರು.ಸರ್ಕಾರ ತುಂಗಭದ್ರಾ, ಕೆಆರ್‌ಎಸ್‌ಗಳಿಗೆ ನೀಡುವ ಮಹತ್ವವನ್ನು ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ನೀಡುತ್ತಿಲ್ಲ. ಜಲಾಶಯದ ನಿರ್ವಹಣೆ ಮಾಡದೇ ಇರುವುದರಿಂದ ಸಮಸ್ಯೆಗಳು ಪ್ರಾರಂಭವಾಗಿವೆ. 15 ವರ್ಷಗಳಿಗೊಮ್ಮೆ ಗೇಟ್‌ಗಳನ್ನು ಬದಲಿಸಬೇಕು. ಆದರೆ ಇಲ್ಲಿ 20 ವರ್ಷಗಳಿಂದ ಅದೇ ಗೇಟ್‌ಗಳಿದ್ದು, ಗೇಟ್‌ಗಳು ಸಾಮರ್ಥ್ಯ ಕ್ಷೀಣಿಸಿರುವುದರಿಂದ ಸಮಸ್ಯೆ ಹೆಚ್ಚಾಗಲಿದೆ ಎನ್ನುತ್ತಾರೆ ತಜ್ಞರು.