ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಆನೆಗಳಿಗೆ ಹಾಗೂ ಅಶ್ವಪಡೆಗೆ ಮಂಗಳವಾರ ಅಂತಿಮ ಹಂತ ಕುಶಾಲತೋಪು ಸಿಡಿಸುವ ತಾಲೀಮು ಯಶಸ್ವಿ ನಡೆಯಿತು.ನಗರದ ದಸರಾ ವಸ್ತುಪ್ರದರ್ಶನದ ಆವರಣದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಫಿರಂಗಿ ದಳದ ಸಿಎಆರ್ ಪೊಲೀಸರು 7 ಫಿರಂಗಿಗಳ ಮೂಲಕ ಮೂರು ಸುತ್ತಿನಲ್ಲಿ ಒಟ್ಟು 21 ಕುಶಾಲತೋಪು ಸಿಡಿಸಿ ಗಜಪಡೆ ಹಾಗೂ ಅಶ್ವಾರೋಹಿ ಪಡೆಗೆ ಭಾರೀ ಶಬ್ಧದ ತಾಲೀಮು ನೀಡಿದರು.
ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು, ಕುಮ್ಕಿ ಆನೆಗಳಾದ ಲಕ್ಷ್ಮೀ, ಹಿರಣ್ಯಾ, ಮಹೇಂದ್ರ, ಧನಂಜಯ, ಗೋಪಿ, ಭೀಮ, ಕಂಜನ್, ಪ್ರಶಾಂತ, ರೋಹಿತ್, ಏಕಲವ್ಯ, ಸುಗ್ರೀವ ಪಾಲ್ಗೊಂಡಿದ್ದವು. ಅಲ್ಲದೆ, ಅಶ್ವಾರೋಹಿ ದಳದ 37 ಕುದುರೆಗಳು ಭಾಗವಹಿಸಿದ್ದವು. ವರಲಕ್ಷ್ಮೀ ಆನೆಗೆ ವಿಶ್ರಾಂತಿ ನೀಡಲಾಗಿತ್ತು.ವಸ್ತುಪ್ರದರ್ಶನದಲ್ಲಿರುವ ವಾಹನ ನಿಲುಗಡೆ ಸ್ಥಳದಲ್ಲಿ ಮೊದಲ ಹಂತದ ತಾಲೀಮಿನಲ್ಲಿ ಎಲ್ಲಾ 13 ಆನೆಗಳು ಭಾಗವಹಿಸಿದ್ದವು. ಆದರೆ, ಕುಶಲತೋಪು ಸಿಡಿಸುತ್ತಿದ್ದಂತೆ ಭಾರಿ ಶಬ್ದಕ್ಕೆ ರೋಹಿತ್, ಹಿರಣ್ಯಾ ಆನೆಗಳು ಹೆಚ್ಚಾಗಿ ಬೆದರಿ ವಿಚಿಲಿತಗೊಂಡಿದ್ದವು. 2ನೇ ತಾಲೀಲಿನಲ್ಲಿ ಬೆದರದೆ ಧೈರ್ಯ ಪ್ರದರ್ಶಿಸಿದ್ದವು. ಮೂರನೇ ಹಾಗೂ ಅಂತಿಮ ಸುತ್ತಿನ ತಾಲೀಮಿನಲ್ಲಿ ಭಾರೀ ಸದ್ದಿಗೆ ರೋಹಿತ್ ಸ್ವಲ್ಪವೂ ಕದಲಿದೆ ಧೈರ್ಯ ಪ್ರದರ್ಶಿಸಿದ. ಹಿರಣ್ಯಾ ಮೊದಲ ಸುತ್ತಿನಲ್ಲಿ ಕೊಂಚ ಬೆದರಿದರೂ ಉಳಿದೆರಡು ಸುತ್ತಿನಲ್ಲಿ ಬೆಚ್ಚಲಿಲ್ಲ. ಮಾವುತರು, ಕಾವಾಡಿಗಳು ಹಿರಣ್ಯಗಳನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು. ಉಳಿದೆಲ್ಲಾ ಆನೆಗಳು ಭಾರಿ ಶಬ್ಧಕ್ಕೆ ಒಗ್ಗಿಕೊಂಡವು. ಸಿಡಿಮದ್ದು ಸಿಡಿಯುತ್ತಿದ್ದಂತೆ ಮುಂದಡಿ ಇಡುತ್ತಾ ಜಂಬೂಸವಾರಿಗೆ ಸಜ್ಜಾಗಿರುವ ಸಂದೇಶ ರವಾನಿಸಿದವು.
ಕುಶಾಲತೋಪು ಸಿಡಿಸುವ ಮುನ್ನ ಆನೆಗಳ ಮುಂದೆ ಆಟಂ ಬಾಂಬ್ ಪಟಾಕಿ ಸಿಡಿಸಿ ಪ್ರಯೋಗ ಮಾಡಲಾಯಿತು. ಪಟಾಕಿ ಸಿಡಿತದ ಶಬ್ದಕ್ಕೆ ಒಗ್ಗಿಕೊಂಡ ನಂತರ ಕುಶಾಲತೋಪು ಸಿಡಿಸಲಾಯಿತು.ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸಿಎಫ್ ಗಳಾದ ಡಾ. ಮಾಲತಿಪ್ರಿಯ, ಡಾ. ರಮೇಶ್ ಕುಮಾರ್, ಡಿಸಿಎಫ್ ಡಾ.ಐ.ಬಿ. ಪ್ರಭುಗೌಡ, ಡಿಸಿಪಿಗಳಾದ ಎಂ. ಮುತ್ತುರಾಜು, ಮಾರುತಿ, ಅಶ್ವರೋಹಿ ದಳದ ಕಮಾಂಡೆಂಟ್ ಶೈಲೇಂದ್ರ, ಎಸಿಪಿಗಳಾದ ಶಾಂತಮಲ್ಲಪ್ಪ, ಚಂದ್ರಶೇಖರ್, ಸತೀಶ್, ಸ್ನೇಹಾ ರಾಜ್, ಆನೆ ವೈದ್ಯ ಡಾ. ಮುಜೀಬ್, ಆರ್ ಎಫ್ಒ ಸಂತೋಷ್ ಹೂಗಾರ್ ಮೊದಲಾದವರು ಇದ್ದರು.
-----ಕೋಟ್....
ಗಜಪಡೆ, ಅಶ್ವದಳಕ್ಕೆ ಭಾರೀ ಶಬ್ದದ ಪರಿಚಯ ಮಾಡಿಸುವ ಸಲುವಾಗಿ ಮೂರು ಹಂತದ ಸಿಡಿಮದ್ದು ತಾಲೀಮನ್ನು ಯಶಸ್ವಿಯಾಗಿ ನಡೆಸಲಾಗಿದೆ. ಎಲ್ಲಾ ಆನೆಗಳು, ಅಶ್ವಗಳು ಶಬ್ದಕ್ಕೆ ಹೊಂದಿಕೊಂಡಿದ್ದು, ಯಾವುದೇ ತೊಂದರೆಯಿಲ್ಲ. ದಸರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ
----ಗಜಪಡೆ, ಅಶ್ವದಳಕ್ಕೆ ಮೂರು ಹಂತದ ಕುಶಾಲತೋಪು ತಾಲೀಮನ್ನು ಯಶಸ್ವಿಯಾಗಿ ನಡೆಸಲಾಗಿದೆ. ಯಾವ ಆನೆಯೂ ಬೆದರಿಲ್ಲ. ಕುಶಾಲತೋಪು ಶಬ್ದಕ್ಕೆ ಎಲ್ಲಾ ಆನೆಗಳು ಹೊಂದಿಕೊಂಡಿವೆ. ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದ್ದು, ಜಂಬೂಸವಾರಿಯಲ್ಲಿ ಆನೆಗಳ ಕಾರ್ಯದ ಕುರಿತು ಕೆಲವೇ ದಿನಗಳಲ್ಲಿ ತಿಳಿಸಲಾಗುವುದು.
- ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್