ಕೊಪ್ಪಳ: ಶಾಸಕರೇ, ನಾವು ಬದುಕುವುದಾದರೂ ಹೇಗೆ? ಧೂಳಿನಿಂದ ನಾನಾ ರೋಗದಿಂದ ನಾನು ಬಳಲುತ್ತಿದ್ದೇವೆ. ನಮ್ಮೂರಲ್ಲಿ ಒಂದ್ಸಲಾ ನೋಡಿಕೊಂಡು ಬರೋಣ ಬನ್ನಿ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಎದುರು ಗ್ರಾಮಸ್ಥರು ಹಠ ಹಿಡಿದ ಘಟನೆ ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ನಡೆದಿದೆ.
ಸರ್, ನಮ್ಮೂರಲ್ಲಿ ಸಮಸ್ಯೆ ನೋಡ ಬನ್ನಿ, ಓಡಿ ಹೋಗಬೇಡಿ ಎಂದು ಗ್ರಾಮಸ್ಥರು ಶಾಸಕ ರಾಘವೇಂದ್ರ ಹಿಟ್ನಾಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿವಿಧ ಕಾರ್ಯಕ್ರಮ ನಿಮಿತ್ತ ಕಾರ್ಖಾನೆ ಬಾಧಿತ ತಾಲೂಕಿನ ಹಿರೇ ಬಗನಾಳ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಸ್ಥಳೀಯ ನೂರಾರು ರೈತರು ಧೂಳಿನಿಂದ ಆಗುವ ಗೋಳು ಹೇಳಿಕೊಂಡು, ಇಲ್ಲಿ ನಾವು ಜೀವನ ಮಾಡುವುದು ಹೇಗೆ? ಎಂದು ನೋವು ತೋಡಿಕೊಂಡರು.
ಹಿರೇಬಗನಾಳ ಗ್ರಾಮದ ರಸ್ತೆ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಗ್ರಾಮಕ್ಕೆ ಬುಧವಾರ ಶಾಸಕ ರಾಘವೇಂದ್ರ ಹಿಟ್ನಾಳ ಆಗಮಿಸಿದ ವೇಳೆ, ಶಾಸಕರ ಮುಂದೆ ಹಲವು ರೈತರು ತಮ್ಮ ವೇದನೆ ವ್ಯಕ್ತಪಡಿಸಿ, ನಮ್ಮೂರಿನಲ್ಲಿ ಮಿತಿ ಮೀರಿದ ಧೂಳು ನಮ್ಮ ಜೀವ ಕೊಲ್ಲುತ್ತಿದೆ. ಜೀವನ ಮಾಡುವುದೇ ಕಷ್ಟವಾಗಿದೆ. ಇಂಥ ಧೂಳಿನಲ್ಲಿ ನಾವು ಹೇಗೆ ತಾನೆ ಬದುಕುವುದು? ಹಿರೇಬಗನಾಳ, ಅಲ್ಲಾನಗರದ ಜನರ ಸ್ಥಿತಿ ನಿಜಕ್ಕೂ ಹೇಳ ತೀರದಾಗಿದೆ. ಧೂಳು ಹೊರ ಸೂಸುವ ಕಾರ್ಖಾನೆಗಳು ನಮಗೆ ಬೇಡವೇ ಬೇಡ. ನಮಗೆ ಅಟೋಮೊಬೈಲ್ ಉತ್ಪಾದನೆ ಕಾರ್ಖಾನೆಗಳನ್ನು ತನ್ನಿ, ಅದಕ್ಕೆ ನಮ್ಮದೇನೂ ವಿರೋಧವಿಲ್ಲ. ಆದರೆ ವಿಷಾನಿಲ ಹೊರ ಸೂಸುವ ಕಾರ್ಖಾನೆಗಳು ಬೇಡ ಎಂದರು.ಗ್ರಾಮಕ್ಕೆ ಸಿಎಂ ಕರೆ ತಂದು ಧೂಳು ತೋರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಲ್ಲಿಗೆ ಕರೆತಂದು ಇಲ್ಲಿನ ಪರಿಸ್ಥಿತಿಯನ್ನೊಮ್ಮೆ ತೋರಿಸಿ. ಬಜೆಟ್ ನಂತರವಾದರೂ ಮುಖ್ಯಮಂತ್ರಿ ಅವರನ್ನು ಇಲ್ಲಿಗೆ ಕರೆ ತರಲೇಬೇಕು. ನಾವೇ ಅವರಿಗೆ ಗ್ರಾಮ ಸುತ್ತಾಡಿಸಿ ಪರಿಸ್ಥಿತಿ ತೋರಿಸುತ್ತೇವೆ. ಈಗಾಗಲೇ ಸ್ಪಾಂಜ್ ಐರಾನ್ ಕಾರ್ಖಾನೆಗಳು ನಿಯಮ ಉಲ್ಲಂಘಿಸಿವೆ ಎಂದು ತಜ್ಞರ ಸಮಿತಿಯೇ ವರದಿ ಮಾಡಿದೆ. ಅಂತಹ ಕಾರ್ಖಾನೆಗಳನ್ನು ಮುಚ್ಚಬೇಕು ಎಂದು ವರದಿ ಕೊಟ್ಟಿದ್ದರೂ ಅವುಗಳನ್ನು ಮುಚ್ಚಲು ಆಗುತ್ತಿಲ್ಲ ಎಂದು ಜನರು ಶಾಸಕರ ಮುಂದೆ ಅಸಮಾಧಾನ ವ್ಯಕ್ತಪಡಿಸಿದರು.
ಈ ವೇಳೆ ಶಾಸಕ ಹಿಟ್ನಾಳ ಮಾತನಾಡಿ, ಹಿಂದೆ ರೈತರೇ ಕಾರ್ಖಾನೆಗಳಿಗೆ ಭೂಮಿ ಕೊಟ್ಟಿದ್ದಾರೆ. ಆಗ ಇಷ್ಟೊಂದು ತೊಂದರೆ ಆಗುತ್ತಿದೆ ಎನ್ನುವುದು ನಮಗೂ ಗೊತ್ತಿರಲಿಲ್ಲ. ನಾನೂ ಬಜೆಟ್ ವೇಳೆ ಸದನದಲ್ಲಿ ಕಾರ್ಖಾನೆಗಳ ಕುರಿತು ಪ್ರಶ್ನೆ ಮಾಡುವೆನು. ಸ್ಪಾಂಜ್ ಐರಾನ್ ಕಾರ್ಖಾನೆಗಳ ಮಾಲಿನ್ಯ ತಡೆಯಲು ಸಂಬಂಧಿಸಿದವರ ಜತೆ ಮಾತನಾಡುವೆ. ಜಿಲ್ಲೆಯ ರೈತರು ಬೇಡವೆಂದರೂ ಕಂಪನಿಗೆ ಭೂಮಿ ಕೊಟ್ಟು ಕೈ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದರು.
ದೌರ್ಜನ್ಯದಿಂದ ಭೂಮಿ ಕಿತ್ತುಕೊಂಡಿದೆ: ೨೦೦೩-೦೪ನೇ ಸಾಲಿನಲ್ಲಿ ಈ ಭಾಗದಲ್ಲಿ ಸರ್ಕಾರ ದೌರ್ಜನ್ಯದ ಮೂಲಕ ರೈತರಿಂದ ಭೂಮಿ ಕಿತ್ತುಕೊಂಡು ಕಂಪನಿಗಳಿಗೆ ನೀಡಿದೆ. ಆಗಲೂ ನಾವು ಭೂಮಿ ಕೊಡುವುದಿಲ್ಲ ಎಂದು ವಿರೋಧ ಮಾಡಿದ್ದೇವೆ. ಆದರೆ ನಮ್ಮ ಮೇಲೆಯೇ ದೌರ್ಜನ್ಯ ಮಾಡಿ ಭೂಮಿಯನ್ನು ಕಂಪನಿಗೆ ಕೊಡಲಾಯಿತು ಎಂದು ರೈತ ಮುಖಂಡರು ಹೇಳಿದರು.
ಧೂಳು ನೋಡಬನ್ನಿ ಎಂದರೂ ಬಾರದ ಶಾಸಕರು!: ಊರಲ್ಲಿ ಒಂದು ಬಾರಿ ಸುತ್ತಾಡೋಣ ಎಂದು ಗ್ರಾಮಸ್ಥರು ಕರೆದರೂ ಶಾಸಕ ರಾಘವೇಂದ್ರ ಹಿಟ್ನಾಳ ಬರಲಿಲ್ಲ. ಅಲ್ಲಿಂದ ಕಾರು ಹತ್ತಿ ನಿರ್ಗಮಿಸಿದರು. ಶಾಸಕರ ಈ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ ರೈತರು, ನೀವು ಪಲಾಯನ ಮಾಡಬೇಡಿ. ಇಲ್ಲಿನ ಸಮಸ್ಯೆ ನೋಡಬನ್ನಿ.. ಕಾಲ್ಕೀಳಬೇಡಿ ಎಂದರು. ಶಾಸಕ ಹಿಟ್ನಾಳ ವಿರುದ್ಧ ಧಿಕ್ಕಾರ ಕೂಗಿದರು. ಇದಕ್ಕೆ ಶಾಸಕ ರಾಘವೇಂದ್ರ ಹಿಟ್ನಾಳ ಅವರು, ಕಂಪನಿ ಬರುವ ಮಾಹಿತಿ ನಮಗೆ ಬರುವುದಿಲ್ಲ. ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಬೈಪಾಸ್ ವ್ಯವಸ್ಥೆ ಮಾಡಲಾಗುವುದು. ನಾನು ನಿಮ್ಮೊಂದಿಗೆ ಇದ್ದೇನೆ. ಸದನದಲ್ಲಿ ಇದರ ಬಗ್ಗೆ ಮಾತನಾಡುತ್ತೇನೆ ಎಂದರು.