ಹಿರೇಕೆರೂರು ದುರ್ಗಾದೇವಿ ಕೆರೆ ಕಾಲುವೆ ತುಂಬ ದುರ್ವಾಸನೆ

| Published : Nov 14 2025, 03:15 AM IST

ಹಿರೇಕೆರೂರು ದುರ್ಗಾದೇವಿ ಕೆರೆ ಕಾಲುವೆ ತುಂಬ ದುರ್ವಾಸನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿರೇಕೆರೂರು ಪಟ್ಟಣದ ದುರ್ಗಾದೇವಿ ಕೆರೆಗೆ ನೀರು ಹರಿಸುವ ಕಾಲುವೆಯಲ್ಲಿ ಕೊಳಕು ಬೀರುತ್ತಿದೆ. ಕಸ, ಹುಲ್ಲು, ಗಿಡ ಗಂಟೆಗಳು ಬೆಳೆದು ಸುತ್ತಮುತ್ತಲಿನ ನಿವಾಸಿಗಳಿಗೆ ದಿನ ನಿತ್ಯ ಹಾವು, ಚೇಳು, ವಿಷಜಂತು ವಿಪರೀತ ಕಾಡತೊಡಗಿವೆ ಹಾಗೂ ಕೆಟ್ಟ ದುರ್ವಾಸನೆ ಬರುತ್ತಿದೆ.

ರವಿ ಮೇಗಳಮನಿಕನ್ನಡಪ್ರಭ ವಾರ್ತೆ ಹಿರೇಕೆರೂರು

ಪಟ್ಟಣದ ದುರ್ಗಾದೇವಿ ಕೆರೆಗೆ ನೀರು ಹರಿಸುವ ಕಾಲುವೆಯಲ್ಲಿ ಕೊಳಕು ಬೀರುತ್ತಿದೆ. ಕಸ, ಹುಲ್ಲು, ಗಿಡ ಗಂಟೆಗಳು ಬೆಳೆದು ಸುತ್ತಮುತ್ತಲಿನ ನಿವಾಸಿಗಳಿಗೆ ದಿನ ನಿತ್ಯ ಹಾವು, ಚೇಳು, ವಿಷಜಂತು ವಿಪರೀತ ಕಾಡತೊಡಗಿವೆ ಹಾಗೂ ಕೆಟ್ಟ ದುರ್ವಾಸನೆ ಬರುತ್ತಿದೆ.

ಸುಣ್ಣದ ಕಾಲುವೆ ಮೂಲಕ ದುರ್ಗಾದೇವಿ ಕೆರೆಗೆ ನೀರು ಹರಿದು ಹೋಗುವ ಕಾಲುವೆ ತುಂಬಿಲ್ಲ. ಕಸ ಗಿಡಗಂಟಿಗಳು ಬೆಳೆದಿವೆ. ಪಟ್ಟಣದ ಕೊಳಕು ನೀರು ಸೋರಿ ತ್ಯಾಜ್ಯಗಳು ಬಂದು ಸೇರುತ್ತಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಕೊಳಚೆ ನಿರ್ಮಾಣವಾಗಿದೆ. ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸೊಳ್ಳೆಗಳ ಕಾಟವಂತೂ ವಿಪರೀತವಾಗಿದ್ದು, ಸಾರ್ವಜನಿಕರು ರೋಸಿ ಹೋಗಿದ್ದಾರೆ. ಪಪಂ ಅಧಿಕಾರಿಗಳು, ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಇತ್ತ ಕಾಲುವೆ ನಿರ್ವಹಣೆ ಹೊಣೆ ಹೊತ್ತಿರುವ ಸಣ್ಣ ನೀರಾವರಿ ಇಲಾಖೆಯವರೂ ಮೌನ ವಹಿಸಿದ್ದಾರೆ.

650 ಎಕರೆ ವಿಸ್ತೀರ್ಣ ಹೊಂದಿರುವ ದುರ್ಗಾದೇವಿ ಕೆರೆಗೆ ಈ ಕಾಲುವೆ ಮೂಲಕ ನೀರು ಬಂದು ಸೇರುತ್ತದೆ. ಜಲಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆಗೆ ಸಂಬಂಧಿಸಿದ ಕಾಲುವೆಗೆ ಸುಣ್ಣದ ಕಾಲುವೆ ಎಂದು ಕರೆಯುತ್ತಾರೆ. ಕಾಲ್ವಿಹಳ್ಳಿಯ ರಾಮನಕೆರೆ ಮೂಲಕ ದುರ್ಗಾದೇವಿ ಕೆರೆಗೆ ಮಳೆಗಾಲದಲ್ಲಿ ನೀರು ಹರಿದು ಬರುತ್ತದೆ. ಹಳ್ಳದ ರೂಪದಲ್ಲಿದ್ದ ಕಾಲುವೆಯನ್ನು 2014-15ರಲ್ಲಿ ಕೆರೆ ಅಭಿವೃದ್ಧಿಪಡಿಸಿ ನಾಡಿನ ಶ್ರೇಯೋಭಿವೃದ್ಧಿ ಯೋಜನೆಯಡಿ 2.80 ಕೋಟಿ ರು. ಅನುದಾನದಲ್ಲಿ 1.6 ಕಿ.ಮೀ. ಉದ್ದದವರೆಗೆ ಕಾಂಕ್ರೀಟಿಕರಣ ಮಾಡಲಾಗಿದೆ. ಇನ್ನು 1 ಕಿ.ಮೀ. ಕಾಲುವೆ ನಿರ್ಮಾಣ ಬಾಕಿ ಇದೆ. ತುಂಗಭದ್ರಾ, ಕುಮದ್ವತಿ ನದಿ ಮೂಲದಿಂದ ದುರ್ಗಾದೇವಿ ಏತ ನೀರಾವರಿ ಮಾಡಲಾಗಿದೆ. ಅಲ್ಲದೆ, ಪಟ್ಟಣದ ಚರಂಡಿ ನೀರು, ಇಲ್ಲಿ ಸೇರುತ್ತಿದೆ. ಸ್ವಚ್ಛಗೊಳಿಸಲು ಯಾವ ಇಲಾಖೆಯೂ ಮುಂದಾಗುತ್ತಿಲ್ಲ. ರೋಗ ರುಜಿನಗಳು ಹೆಚ್ಚಾಗಿವೆ. ವಿಷ ಜಂತುಗಳ ಕಾಟ, ಸೊಳ್ಳೆ ಕಾಟ ವಿಪರೀತವಾಗಿದೆ. ಒಟ್ಟಾರೆ ರೋಗ ಹರಡುವ ಮೊದಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಾಲುವೆಯನ್ನು ಸ್ವಚ್ಛಗೊಳಿಸಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಹಿರೇಕೆರೂರಿನ ಬಯಲು ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಸುಣ್ಣದ ಕಾಲುವೆಯಲ್ಲಿ ಗಿಡ ಗಂಟಿಗಳು ಬೆಳೆದಿದ್ದು ಪದೇ ಪದೆ ಕಾಲುವೆಯಲ್ಲಿ ಕಸ ಸಂಗ್ರಹಗೊಳ್ಳುತ್ತಿದೆ. ಕಾಲುವೆಯನ್ನು ಸ್ವಚ್ಛಗೊಳಿಸಬೇಕು, ಕೆಟ್ಟ ವಾಸನೆಯನ್ನು ತಪ್ಪಿಸಬೇಕು ಎಂದು ಸ್ಥಳೀಯ ನಿವಾಸಿ ಶುಭಾಕರ ಹಂಪಾಳಿ ಹೇಳಿದರು.