ಈ ಬಾರಿ ಹಿಂದಿನ ಯಶಸ್ಸನ್ನು ಮೀರಿಸುವ ಸಂಕಲ್ಪದೊಂದಿಗೆ ಗ್ರಾಮಸ್ಥರು, ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಮಿತಿಗಳ ಸದಸ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ

ಕುಷ್ಟಗಿ: ಕಲೆ, ಸಾಹಿತ್ಯ, ಸಂಗೀತ, ಜನಪದ ಸಂಸ್ಕೃತಿಯ ತವರೂರು ಎಂದು ಗುರುತಿಸಿಕೊಂಡಿರುವ ತಾಲೂಕಿನ ಹಿರೇಮನ್ನಾಪುರ ಗ್ರಾಮ ಮತ್ತೊಮ್ಮೆ ಇತಿಹಾಸ ನಿರ್ಮಿಸಲು ಸಜ್ಜಾಗಿದೆ.

14ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯ ವಹಿಸುತ್ತಿರುವ ಗ್ರಾಮದಲ್ಲಿ ಅಕ್ಷರ ಜಾತ್ರೆಯ ಸಂಭ್ರಮ ಮನೆಮಾಡಿದ್ದು, ಬೀದಿಬೀದಿಗಳಲ್ಲಿ ಕನ್ನಡದ ಕಂಪು ಹರಡಿದೆ. ಗ್ರಾಮದ ಪ್ರತಿಯೊಂದು ಮನೆ, ಪ್ರತಿಯೊಂದು ಬೀದಿ, ಪ್ರತಿಯೊಬ್ಬರ ಮುಖದಲ್ಲೂ ಸಾಹಿತ್ಯ ಸಮ್ಮೇಳನದ ಉತ್ಸಾಹವೇ ಕಾಣಿಸುತ್ತಿದೆ.

2006ರಲ್ಲಿ ಕುಷ್ಟಗಿ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟ ಹಿರೇಮನ್ನಾಪುರ, ಸುಮಾರು ಎರಡು ದಶಕಗಳ ಬಳಿಕ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವ ಅವಕಾಶ ಪಡೆದಿದೆ.

ಈ ಬಾರಿ ಹಿಂದಿನ ಯಶಸ್ಸನ್ನು ಮೀರಿಸುವ ಸಂಕಲ್ಪದೊಂದಿಗೆ ಗ್ರಾಮಸ್ಥರು, ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಮಿತಿಗಳ ಸದಸ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ.

ಸಮ್ಮೇಳನದ ಹಿನ್ನೆಲೆಯಲ್ಲಿ ಹಿರೇಮನ್ನಾಪುರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಸ್ವಾಗತ ಕಮಾನುಗಳು ತಲೆ ಎತ್ತಿವೆ. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಕನ್ನಡ ಧ್ವಜಗಳು ರಾರಾಜಿಸುತ್ತಿದ್ದು, ವಿದ್ಯುತ್ ದೀಪಾಲಂಕಾರದಿಂದ ಗ್ರಾಮ ರಾತ್ರಿ ವೇಳೆಯಲ್ಲೂ ಮಿಂಚುತ್ತಿದೆ. ಸ್ವಾಗತ ಫಲಕಗಳು, ಸಾಹಿತ್ಯ ಮಹನೀಯರ ಭಾವಚಿತ್ರಗಳು, ಕನ್ನಡ ನುಡಿಮುತ್ತುಗಳು ಗ್ರಾಮಕ್ಕೆ ಹೊಸ ಕಳೆ ತಂದಿವೆ.

14ನೇ ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತ್ಯ, ಸಂಸ್ಕೃತಿ ಮತ್ತು ಕನ್ನಡದ ಅಸ್ಮಿತೆಯನ್ನು ಬಿಂಬಿಸುವ ಮಹತ್ವದ ವೇದಿಕೆಯಾಗಿದೆ. ಗ್ರಾಮಸ್ಥರ ಸಹಕಾರ, ಕಸಾಪ ಪದಾಧಿಕಾರಿಗಳ ಪರಿಶ್ರಮದಿಂದ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಆಗಮಿಸುವ ಸಾಹಿತಿಗಳು, ಕಲಾವಿದರು, ಕನ್ನಡಾಭಿಮಾನಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ ತಿಳಿಸಿದ್ದಾರೆ.

ಹಿರೇಮನ್ನಾಪುರದ ಸಾಹಿತ್ಯ ಪ್ರೀತಿ ಮತ್ತು ಗ್ರಾಮಸ್ಥರ ಒಗ್ಗಟ್ಟು ಈ ಸಮ್ಮೇಳನದ ಯಶಸ್ಸಿನ ಹಿಂದಿನ ದೊಡ್ಡ ಶಕ್ತಿಯಾಗಿದೆ. ಜಿಲ್ಲೆಯ ಎಲ್ಲ ಕನ್ನಡಾಭಿಮಾನಿಗಳು ಭಾಗವಹಿಸಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲೆಂಕಪ್ಪ ವಾಲಿಕಾರ ತಿಳಿಸಿದ್ದಾರೆ.