ಕೊಪ್ಪಳದ ಹಿರೇಸೂಳಿಕೇರಿ ಏರಿಯಾ ಕರಡಿ ಸಂರಕ್ಷಿತ ಪ್ರದೇಶ- ರಾಜ್ಯ ಸರ್ಕಾರ ಆದೇಶ

| Published : Feb 04 2024, 01:31 AM IST

ಕೊಪ್ಪಳದ ಹಿರೇಸೂಳಿಕೇರಿ ಏರಿಯಾ ಕರಡಿ ಸಂರಕ್ಷಿತ ಪ್ರದೇಶ- ರಾಜ್ಯ ಸರ್ಕಾರ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಕರಡಿಧಾಮ ಮಾಡಬೇಕು ಎನ್ನುವ ಬೇಡಿಕೆಯ ಹಲವು ವರ್ಷಗಳ ಹೋರಾಟಕ್ಕೆ ಈಗ ಅರ್ಧ ಜಯ ದೊರೆತಂತಾಗಿದೆ. ಈಗ ಹೊರಡಿಸಿರುವ ನೋಟಿಫಿಕೇಶನ್‌ನಂತೆ ಹಿರೇಸೂಳಿಕೇರಿ ಬ್ಲಾಕ್, ಹಾಸಗಲ್, ಚಿಲಕಮುಕ್ಕಿ, ಅರಸನಕೇರಿ ಬ್ಲಾಕ್ ವ್ಯಾಪ್ತಿಯ ಪ್ರದೇಶವನ್ನು ಕರಡಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ತಾಲೂಕಿನ ಹಿರೇಸೂಳಿಕೇರಿ ತಾಂಡಾ ವ್ಯಾಪ್ತಿಯ ಪ್ರದೇಶವನ್ನು ಕರಡಿ ಸಂರಕ್ಷಿಕ ಪ್ರದೇಶವೆಂದು ರಾಜ್ಯ ಸರ್ಕಾರ ಘೋಷಿಸಿದೆ.

ಕರಡಿಧಾಮ ಮಾಡಬೇಕು ಎನ್ನುವ ಬೇಡಿಕೆಯ ಹಲವು ವರ್ಷಗಳ ಹೋರಾಟಕ್ಕೆ ಈಗ ಅರ್ಧ ಜಯ ದೊರೆತಂತಾಗಿದೆ. ಈಗ ಹೊರಡಿಸಿರುವ ನೋಟಿಫಿಕೇಶನ್‌ನಂತೆ ಹಿರೇಸೂಳಿಕೇರಿ ಬ್ಲಾಕ್, ಹಾಸಗಲ್, ಚಿಲಕಮುಕ್ಕಿ, ಅರಸನಕೇರಿ ಬ್ಲಾಕ್ ವ್ಯಾಪ್ತಿಯ ಪ್ರದೇಶವನ್ನು ಕರಡಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.ಕರಡಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿರುವುದರಿಂದ ಈ ಭಾಗದಲ್ಲಿ ಕರಡಿ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಯೋಜನೆಗಳನ್ನು ರೂಪಿಸಲಿದೆ. ಕರಡಿ ಮತ್ತು ಮಾನವ ಸಂಘರ್ಷ ತಡೆ ಸೇರಿದಂತೆ ಇನ್ಮುಂದೆ ಅವುಗಳ ಮೇಲೆ ಯಾವುದೇ ರೀತಿಯ ತೊಂದರೆ ಆಗದಂತೆ ಕಟ್ಟೆಚ್ಚರ ವಹಿಸಲಾಗುತ್ತದೆ. ಅರಣ್ಯ ಪ್ರದೇಶದಲ್ಲಿ ಕರಡಿಗೆ ನೀರು ಕುಡಿಯಲು ಮತ್ತು ಆಹಾರಕ್ಕೂ ಪ್ರತ್ಯೇಕ ವ್ಯವಸ್ಥೆಯನ್ನು ಅರಣ್ಯ ಇಲಾಖೆಯಿಂದ ಮಾಡಲಾಗುತ್ತದೆ.ಕರಡಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯನ್ನು ತಂತಿಬೇಲಿ ಹಾಕಲಾಗುತ್ತದೆ. ಈ ಮೂಲಕ ಕರಡಿಗಳು ರೈತರ ಭೂಮಿಗೆ ನುಗ್ಗದಂತೆಯೂ ಕಟ್ಟುನಿಟ್ಟಿನ ಕ್ರಮ ವಹಿಸುತ್ತಾರೆ.ಕ್ರಷರ್‌ಗೆ ಬ್ರೇಕ್:ಕರಡಿ ವಾಸಸ್ಥಾನ ಎಂದು ಘೋಷಣೆ ಮಾಡುವ ಪ್ರದೇಶದಲ್ಲಿ ಯಾವುದೇ ಕ್ರಷರ್‌ಗೆ ಅನುಮತಿ ನೀಡುವುದು ಮತ್ತು ಮಾನವ ಅಭಿವೃದ್ಧಿ ಕಾರ್ಯಗಳಿಗೆ ಬ್ರೇಕ್ ಹಾಕಿ, ಪ್ರಶಾಂತತೆ ಕಾಪಾಡಲಾಗುತ್ತದೆ. ಈ ಮೂಲಕ ಈ ಭಾಗದಲ್ಲಿರುವ ಕ್ರಷರ್ ಗಳನ್ನು ಬಂದ್ ಮಾಡಿಸಲಾಗುತ್ತದೆ.

ಅರ್ಧ ಜಯ:ಕರಡಿ ಸಂತತಿ ವಿಪರೀತ ಹೆಚ್ಚಳವಾಗಿದೆ. ಹೀಗಾಗಿಯೇ ಕರಡಿಗಳು ಊರೊಳಗೆ ಮತ್ತು ರೈತರ ಭೂಮಿಗೆ ನುಗ್ಗುತ್ತಿವೆ. ಇದರಿಂದ ಅನೇಕ ರೈತರು ಗಾಯಗೊಂಡಿದ್ದಾರೆ ಮತ್ತು ಕೆಲವರು ಮೃತಪಟ್ಟಿದ್ದಾರೆ. ಹೀಗಾಗಿ, ಇಲ್ಲೊಂದು ಕರಡಿಧಾಮ ನಿರ್ಮಾಣ ಮಾಡಿ, ಕರಡಿಗಳು ರೈತರ ಭೂಮಿಗೆ ನುಗ್ಗದಂತೆ ಮಾಡಬೇಕು ಎನ್ನುವುದು ಈ ಭಾಗದ ರೈತರ ಬಹು ವರ್ಷಗಳ ಹೋರಾಟದ ಫಲ. ಈಗ ಅದಕ್ಕೆ ಅರ್ಧ ಜಯ ದೊರೆತಂತಾಗಿದೆ. ಕರಡಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಕರಡಿಧಾಮ ಮಾಡುವ ಬೇಡಿಕೆ ಈಡೇರಿಸುವ ಭರವಸೆ ರೈತರಲ್ಲಿ ಮೂಡಿದೆ.ಸದನದಲ್ಲಿ ಪ್ರಸ್ತಾಪ:ಕರಡಿ ದಾಳಿಯಿಂದಾದ ಹಾನಿಗೆ ಸಂಬಂಧಿಸಿ ಶಾಸಕ ಜನಾರ್ದನ ರೆಡ್ಡಿ ವಿಧಾನಸಭೆಯಲ್ಲಿ ಪ್ರಸ್ತಾಪಿಸಿ ಕರಡಿಧಾಮ ಸ್ಥಾಪಿಸುವ ಕುರಿತು ಕಳೆದ ವರ್ಷ ಆಗ್ರಹಿಸಿದ್ದರು.ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ರೈತರನ್ನೊಳಗೊಂಡು ಕರಡಿಧಾಮ ಸ್ಥಾಪಿಸುವಂತೆ ಆಗ್ರಹಿಸಿ ಸಾಲು ಸಾಲು ಹೋರಾಟಗಳನ್ನು ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.ರೈತರ ಮೇಲೆ ದಾಳಿ:ಹಿರೇಸೂಳಿಕೇರಿ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪದೇಪದೇ ಕರಡಿಗಳು ದಾಳಿ ಮಾಡುತ್ತಲೇ ಇವೆ. ತಿಂಗಳಲ್ಲಿ ಒಂದು ಬಾರಿಯಾದರೂ ಕರಡಿ ದಾಳಿ ಮಾಡಿ, ರೈತರನ್ನು ಗಾಯಗೊಳಿಸುತ್ತದೆ. ಇಲ್ಲಿ ರೈತರು ಬೆಳೆ ಬೆಳೆದುಕೊಳ್ಳಲು ಹಗಲು- ರಾತ್ರಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲದಿದ್ದರೆ ಬೆಳೆಯನ್ನು ಕರಡಿ ಹಾಳು ಮಾಡುತ್ತದೆ.ಪ್ರಾಣಿಪ್ರಿಯರ ಪ್ರಯತ್ನದ ಫಲ: ಹಿರೇಸೂಳಿಕೇರಿ ವ್ಯಾಪ್ತಿಯ ಪ್ರದೇಶವನ್ನು ರಾಜ್ಯ ಸರ್ಕಾರ ಅರಣ್ಯ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಪ್ರಾಣಿಪ್ರಿಯರ ಪ್ರಯತ್ನದ ಫಲವಾಗಿದೆ ಎನ್ನುತ್ತಾರೆ ಕೊಪ್ಪಳ ಡಿಎಫ್ಒ ಚಂದ್ರಣ್ಣ.

ಹೋರಾಟ ಮುಂದುವರಿಸುತ್ತೇವೆ: ನಾವು ಕರಡಿಧಾಮ ಮಾಡುವಂತೆ ಆಗ್ರಹಿಸಿ ಹೋರಾಟ ಮಾಡಿದ್ದೇವೆ, ಆದರೆ, ಈಗ ಕೇವಲ ಕರಡಿ ಸಂರಕ್ಷಿತ ಪ್ರದೇಶ ಎಂದಷ್ಟೇ ಘೋಷಣೆಯಾಗಿದೆ. ಹೋರಾಟವನ್ನು ಮುಂದುವರೆಸುತ್ತೇವೆ ಎನ್ನುತ್ತಾರೆ ವಿಪ ಮಾಜಿ ಸದಸ್ಯ ಕರಿಯಣ್ಣ ಸಂಗಟಿ.