ಸಂಭ್ರಮದಿಂದ ನಡೆದ ಹಿರಿದೇವಿ ಅಮ್ಮನ ಹೂವಿನ ಚಪ್ಪರೋತ್ಸವ

| Published : Nov 16 2025, 01:30 AM IST

ಸಂಭ್ರಮದಿಂದ ನಡೆದ ಹಿರಿದೇವಿ ಅಮ್ಮನ ಹೂವಿನ ಚಪ್ಪರೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದ ಕಾಳಾಚಾರಿ ಗರಡಿ, ಹೊಸಗರಡಿ, ಹಳೆಗರಡಿ, ಹುಚ್ಚಕ್ಕನ ದಾಸೇಗೌಡರ ಗರಡಿ, ಸುಡುಗಾಡೇಗೌಡರ ಗರಡಿ ಸೇರಿದಂತೆ ಎಂಟಕ್ಕೂ ಹೆಚ್ಚು ಗರಡಿಗಳಿಂದ ಒಂದೊಂದರಂತೆ ದೇವಿಗೆ ಬೃಹತ್ ಹೂವಿನ ಹಾರವನ್ನು ಗರಡಿಯ ಕಲೀಪರು ಮತ್ತು ಪೈಲ್ವಾನರು ತಂದು ಸಮರ್ಪಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಬೆಳಗೊಳದ ಗ್ರಾಮದೇವತೆ ಹಿರಿದೇವಿ ಅಮ್ಮನ ಹೂವಿನ ಚಪ್ಪರೋತ್ಸವ ಸಹಸ್ರಾರು ಭಕ್ತರ ನಡುವೆ ಅದ್ಧೂರಿಯಾಗಿ ಸಡಗರ, ಸಂಭ್ರಮದಿಂದ ಜರುಗಿತು.

ನೂರಾರು ವರ್ಷಗಳಿಂದ ಗ್ರಾಮದಲ್ಲಿ ನಡೆಸಿಕೊಂಡು ಬರುತ್ತಿರುವ ಈ ಹೂವಿನ ಚಪ್ಪರೋತ್ಸವಕ್ಕೆ ಹಿರಿಯವಳಾಗಿ ಗ್ರಾಮವನ್ನು ಸಂರಕ್ಷಿಸಿಕೊಂಡು ಬರುವ ಆದಿದೇವತೆಗೆ ಪ್ರತಿ ವರ್ಷದಂತೆ ಈ ಬಾರಿಯೂ ಆಚರಿಸಿ ದೇಗುಲದ ಬಳಿ ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಯಜಮಾನರು ಚಪ್ಪರೋತ್ಸವ ಮೆರವಣಿಗೆಗೆ ಚಾಲನೆ ನೀಡಿದರು.

ಉತ್ಸವದ ದೇವಿಗೆ ಪ್ರತಿ ಮನೆಗಳ ಸುಮಂಗಲಿಯರು ತಮ್ಮ ತಮ್ಮ ಮನೆಗಳ ಮುಂದೆ ಆರತಿ ಎತ್ತಿ ಪೂಜೆ ಸಲ್ಲಿಸಿದರು. ದೇವಿ ಚಪ್ಪರೋತ್ಸವ ಮೆರವಣಿಗೆಯನ್ನು ಗ್ರಾಮದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಿ ರಾತ್ರಿ ಪೂಜೆ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ಗ್ರಾಮದ ಗರಡಿಗಳಲ್ಲಿ ಉತ್ಸಾದ್‌ಗಳು ಮಟ್ಟಿ ಪೂಜೆ ಮಾಡಿ ಮುಸ್ಲಿಂ ಧರ್ಮಗುರುಗಳಿಂದ ಅಂಬಾ ಭವಾನಿಗೆ ಪೂಜೆ ಸಲ್ಲಿಸಿ ಭಾವೈಕ್ಯತೆ ಮೆರೆದರು. ಹಬ್ಬದಲ್ಲಿ ಆಯಾ ಗರಡಿ ಪೈಲ್ವಾನರು ತಮ್ಮ ತಮ್ಮ ಗರಡಿಯಲ್ಲಿ ಪೂಜೆ ಮಾಡಿದ ಅಂಬಾ ಭವಾನಿಯ ದೊಡ್ಡ ಹೂವಿನ ಹಾರಗಳನ್ನು ಟ್ರ್ಯಾಕ್ಟರ್‌ಗಳ ಮೇಲಿರಿಸಿ ಗ್ರಾಮದ ಬೀದಿಯಲ್ಲಿ ದೇವಾಲಯದವರೆಗೂ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ ಚಪ್ಪರೋತ್ಸವದಲ್ಲಿರುವ ದೇವಿಗೆ ಅರ್ಪಿಸುವರು.

ಡಿವೈಎಸ್ಪಿ ಶಾಂತ ಮಲ್ಲಪ್ಪ ಹಾಗೂ ಸಿಪಿಐ ವಿವೇಕಾನಂದ ನೇತೃತ್ವದಲ್ಲಿ ಎಸ್‌ಐ ರಮೇಶ್ ಕರ್ಕಿ ಕಟ್ಟಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. ಬಲಮುರಿ ದೇವಾಲಯಗಳ ಅಭಿವೃದ್ದಿ ಸಮಿತಿ ವತಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಣ್ಣ ಬಣ್ಣವಾಗಿ ವಿದ್ಯುತ್‌ದೀಪಾಲಂಕಾರ ಮಾಡಿಲಾಗಿತ್ತು. ಗ್ರಾಮದ ದೇಗುಲಗಳಿಗೆ ಹೂವು, ದೀಪಾಲಂಕಾರ ಮಾಡಲಾಗಿತ್ತು.

ಗ್ರಾಮದ ಕಾಳಾಚಾರಿ ಗರಡಿ, ಹೊಸಗರಡಿ, ಹಳೆಗರಡಿ, ಹುಚ್ಚಕ್ಕನ ದಾಸೇಗೌಡರ ಗರಡಿ, ಸುಡುಗಾಡೇಗೌಡರ ಗರಡಿ ಸೇರಿದಂತೆ ಎಂಟಕ್ಕೂ ಹೆಚ್ಚು ಗರಡಿಗಳಿಂದ ಒಂದೊಂದರಂತೆ ದೇವಿಗೆ ಬೃಹತ್ ಹೂವಿನ ಹಾರವನ್ನು ಗರಡಿಯ ಕಲೀಪರು ಮತ್ತು ಪೈಲ್ವಾನರು ತಂದು ಸಮರ್ಪಿಸಿದರು.

ದೊಡ್ಡಯಜಮಾನ್ ಶ್ರೀನಿವಾಸೇಗೌಡ, ಚಿಕ್ಕಯಜಮಾನ್ ವಿಷಕಂಠೇಗೌಡ, ನಲ್ಲಿ ಮನೆ ಸ್ವಾಮಿಗೌಡ, ಬಿ.ಟಿ. ಸ್ವಾಮಿಗೌಡ, ತಾಪಂ ಮಾಜಿ ಸದಸ್ಯ ಬಿ.ಎಂ ಸ್ವಾಮೀಗೌಡ, ಗ್ರಾಪಂ ಅಧ್ಯಕ್ಷೆ ಸವಿತಾ ರವಿಕುಮಾರ್, ‘ಬಲಮುರಿ ದೇವಾಲಯಗಳ ಅಭಿವೃದ್ದಿ ಸಮಿತಿ ಅಧ್ಯಕ್ಷರು ಸದಸ್ಯರು, ಗ್ರಾಪಂ ಸದಸ್ಯರು, ಗ್ರಾಮಸ್ಥರು ಸಾವಿರಾರು ಮಂದಿ ಪಾಲ್ಗೊಂಡಿದ್ದರು.