ಸಾರಾಂಶ
ಹಿರಿಕರ ಗ್ರಾಮದ ಶ್ರೀ ಮಲ್ಲೇಶ್ವರ ದೇವರ ವಾರ್ಷಿಕ ಪೂಜೆ ಮತ್ತು ಕೆಂಡೋತ್ಸವ ವಿಜೃಂಭಣೆಯಿಂದ ನಡೆಯಿತು.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಇಲ್ಲಿನ ಸಮೀಪದ ಹಿರಿಕರ ಗ್ರಾಮದ ಶ್ರೀ ಮಲ್ಲೇಶ್ವರ ದೇವರ ವಾರ್ಷಿಕ ಪೂಜೆ ಮತ್ತು ಕೆಂಡೋತ್ಸವ ವಿಜೃಂಭಣೆಯಿಂದ ಇತ್ತೀಚೆಗೆ ನಡೆಯಿತು.ಶ್ರೀ ಮಲ್ಲೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆಯಿಂದ ಪೂಜೆ ಆರಂಭವಾದವು. ಗ್ರಾಮದ ಮಧ್ಯಭಾಗದಲ್ಲಿರುವ ಕಟ್ಟೆಯಿಂದ ಮಹಿಳೆಯರು ಪೂರ್ಣ ಕುಂಭ ಕಳಸ ಹಾಗೂ ಆರತಿಯನ್ನು ಹಿಡಿದು ವಾದ್ಯಗೋಷ್ಠಿಯೊಂದಿಗೆ ದೇವಸ್ಥಾನವನ್ನು ಪ್ರವೇಶಿಸಿದರು.
ಮಂಗಳವಾರ ಮುಂಜಾನೆ ಬಸವಣ್ಣ ದೇವರನ್ನು ಅಡ್ಡ ಪಲ್ಲಕ್ಕಿಯೊಂದಿಗೆ ವೆಂಕಟರಮಣ ಸ್ವಾಮಿ, ಗಂಗಾ ಪೂಜೆ ನೆರವೇರಿಸಿ ಹಿರಿಕರ ಗ್ರಾಮದ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ದೇವಸ್ಥಾನದ ಎದುರು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಕೆಂಡೋತ್ಸವದಲ್ಲಿ ಭಾಗವಹಿಸಿದ್ದರು. ಶ್ರೀ ಮಲ್ಲೇಶ್ವರ ದೇವರಿಗೆ ಮಹಾಮಂಗಳಾರತಿ ನೆರವೇರಿಸಿ ಪೂಜೆಯು ಸಂಪನ್ನಗೊಂಡಿತು. ಆಗಮಿಸಿದ ಎಲ್ಲ ಭಕ್ತಾದಿಗಳಿಗೆ ಗ್ರಾಮಸ್ಥರಿಂದ ಅನ್ನದಾನ ವ್ಯವಸ್ಥೆ ಮಾಡಲಾಯಿತು. ಗ್ರಾಮದ ದೇವಸ್ಥಾನದ ಪ್ರಧಾನ ಅರ್ಚಕರಾದ ಬಿ ಎನ್ ರಾಧಾಕೃಷ್ಣ ನೇತೃತ್ವದಲ್ಲಿ ಪೂಜೆಗಳು ನೆರವೇರಿದವು.ಹಿರಿಕರ ಗ್ರಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ. ಎನ್. ವಸಂತ್ ಕುಮಾರ್, ಕಾರ್ಯದರ್ಶಿ ದೇವರಾಜ್, ಪ್ರಮುಖರಾದ ಜಿ ಕೆ ವಿಜಯ್, ಎಚ್. ಎಸ್. ರಕ್ಷಿತ್, ಹಿರಿಯರಾದ ನಿವೃತ್ತ ಶಿಕ್ಷಕ ನಿರ್ವಹಣ್ ಶೆಟ್ಟಿ, ಎಚ್. ಡಿ. ಸುಬ್ರಮಣಿ, ಎಚ್ ಪಿ ರಾಜಪ್ಪ, ಚನ್ನಾಪುರ ಅಶ್ವಥ್ ಭಾಗವಹಿಸಿದ್ದರು .