ಮಾಜಿ ಸಚಿವ ಡಿ.ಸುಧಾಕರ್ ನುಡಿನಮನ ಕಾರ್ಯಕ್ರಮ ಮುಗಿದ ನಂತರ ಹಿರಿಯೂರು ಉಪಚುನಾವಣೆಯ ಕಾವು ದಿಢೀರ್ ತಣ್ಣಗಾದಂತೆ ಕಾಣುತ್ತಿದೆ.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ಮಾಜಿ ಸಚಿವ ಡಿ.ಸುಧಾಕರ್ ನುಡಿನಮನ ಕಾರ್ಯಕ್ರಮ ಮುಗಿದ ನಂತರ ಹಿರಿಯೂರು ಉಪಚುನಾವಣೆಯ ಕಾವು ದಿಢೀರ್ ತಣ್ಣಗಾದಂತೆ ಕಾಣುತ್ತಿದೆ.

ಕಳೆದ ಒಂದೂವರೆ ತಿಂಗಳಿನಿಂದ ಕೆಲವು ಆಕಾಂಕ್ಷಿಗಳು ಹಳ್ಳಿಗಳ ಜಾತ್ರೆ, ಹಬ್ಬ, ದೇವಸ್ಥಾನ, ಶುಭಕಾರ್ಯಗಳಿಗೆ ಹಾಜರಾಗುತ್ತ ಒಂದರ್ಥದಲ್ಲಿ ಚುನಾವಣೆ ಘೋಷಣೆ ಆಗಿದೆ ಎಂಬಂತೆ ಪ್ರಚಾರವನ್ನೇ ಆರಂಭಿಸಿದ್ದರು. ಆದರೆ ಡಿ ಸುಧಾಕರ್ ನುಡಿನಮನ ಕಾರ್ಯಕ್ರಮ ಜು.26 ರಂದು ಮುಗಿದ ಮೇಲೆ ಮೂರ್ನಾಲ್ಕು ಆಕಾಂಕ್ಷಿಗಳ ಸುಳಿವೇ ಇಲ್ಲ. ನುಡಿನಮನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವಾಗ ಸುಹಾಸ್ ಸುಧಾಕರ್ ಅವರಿಗೆ ಟಿಕೆಟ್ ನೀಡಬೇಕು ಎಂದು ಅವರ ಅಭಿಮಾನಿಗಳು ಕೂಗಿದಾಗ ನಿಮ್ಮ ಬೇಡಿಕೆಯನ್ನು ಹೈಕಮಾಂಡ್‌ನಲ್ಲಿ ಬಲವಾಗಿ ಮಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು.

ಸುಹಾಸ್ ಸುಧಾಕರ್ ಅವರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಸಿದ್ದರಾಮಯ್ಯ ಗಟ್ಟಿದನಿಯಲ್ಲಿ ಹೇಳುತ್ತಾರೆ ಎಂಬ ಅನುಮಾನ ಈಗ ಎಲ್ಲರದ್ದು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಎಂದು ಹೇಳಿಕೊಂಡು ಕ್ಷೇತ್ರ ಸುತ್ತುತ್ತಿದ್ದ ಕೆಲವರು ಕಳೆದ ಹತ್ತನ್ನೆರಡು ದಿನಗಳಿಂದ ಕ್ಷೇತ್ರದಲ್ಲಿ ಎಲ್ಲೂ ಕಾಣಿಸಿಕೊಂಡಿಲ್ಲ. ಇತ್ತ ಅದ್ಯಾವ ಸೂಚನೆ ಸಿಕ್ಕಿದೆಯೋ ಏನೋ ಸುಹಾಸ್ ಸುಧಾಕರ್ ನಗರದ ವಾರ್ಡ್‌ಗಳ ಜತೆಗೆ ದಿನಕ್ಕೆರಡು ಗ್ರಾಮ ಪಂಚಾಯ್ತಿ ಓಡಾಡುತ್ತಿದ್ದಾರೆ. ಅವರ ಜೊತೆಯಲ್ಲಿ ಪ್ರಾಮಾಣಿಕ ಯುವಕರ ಒಂದು ಪಡೆ ಇದ್ದು ಹಳೆಯ ಮುಖಗಳು ಯಾವುವು ಕಾಣುತ್ತಿಲ್ಲ. ಡಿ.ಸುಧಾಕರ್ ಅವರನ್ನು ನಿಯಂತ್ರಿಸಿದ್ದ ಒಂದಷ್ಟು ಮಂದಿಯೇ ಈಗಲೂ ಸುಹಾಸ್ ಸುತ್ತಲೂ ಇದ್ದಾರೆ ಎಂದು ಪಕ್ಷದ ಬಹಳಷ್ಟು ಕಾರ್ಯಕರ್ತರು ಅನುಮಾನ ವ್ಯಕ್ತಪಡಿಸುತ್ತಿರುವುದು ತೀರಾ ಸುಳ್ಳೇನಲ್ಲ.

ರಾಜಕೀಯ ಅನುಭವ ಕಡಿಮೆ ಇರುವ ಸುಹಾಸ್ ಅವರನ್ನು ನಿಯಂತ್ರಿಸಲು ಹಲವು ಮುಖಂಡರು ಹರಸಾಹಸ ಮಾಡುತ್ತಿರುವುದನ್ನು ಕ್ಷೇತ್ರದ ಜನತೆ ಗಮನಿಸುತ್ತಿದ್ದಾರೆ. ಎಲ್ಲಾ ನಿರ್ಧಾರಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಕೆಲವರ ಹುನ್ನಾರ ಬಹುಶಃ ಸುಹಾಸ್ ಕಾಲದಲ್ಲಿ ನಡೆಯಲಾರದು. ಯಾರನ್ನು ಯಾವ ಸಂದರ್ಭದಲ್ಲಿ ಎಷ್ಟು ಬಳಸಿಕೊಳ್ಳಬೇಕು ಎಂಬ ಸಾಮಾನ್ಯ ಪ್ರಜ್ಞೆ ಸುಹಾಸ್‌ಗೆ ಇದ್ದಂತಿದೆ.

ಇನ್ನು ಮೈತ್ರಿ ಅಭ್ಯರ್ಥಿ ಎಂದು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗುತ್ತಿರುವ ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ ಅದ್ಭುತ ಪಿಚ್ ತಯಾರಿಯಲ್ಲಿದ್ದಾರೆ. ಹೋಬಳಿವಾರು ಕುರಿ ಹೊಡೆಸಿ ಸಾವಿರಾರು ಜನರಿಗೆ ಅನ್ನದಾನ ಮಾಡುತ್ತಿದ್ದಾರೆ. ಕಚೇರಿಗೆ ಬಂದವರಿಗೆಲ್ಲಾ ಹಾರ ಹಾಕಿ ಶಾಲು ಹೊದೆಸಿ ಸನ್ಮಾನಿಸುತ್ತಿದ್ದಾರೆ. ನಮಗೇನು ಬೇಡ ಗುರ್ತಿಸಿ ಗೌರವ ಕೊಟ್ಟರೆ ಸಾಕು ಎಂಬ ಸಾವಿರಾರು ಮಂದಿಯನ್ನು ರಾಜಣ್ಣ ಸಂತೃಪ್ತರನ್ನಾಗಿಸುತ್ತಿದ್ದಾರೆ. ಪಕ್ಕಾ ಬುದ್ದಿವಂತಿಕೆಯ ರಾಜಕಾರಣಕ್ಕೆ ಇಳಿದಿರುವ ರಾಜಣ್ಣ ಯಾರಿಗೂ ಸುಲಭದ ತುತ್ತು ಆಗಲಾರರು. ಜೆಡಿಎಸ್ ಪಕ್ಷದವರ ಸುಳಿವು ಮತ್ತು ಓಡಾಟ ಎಲ್ಲೂ ಕಾಣುತ್ತಿಲ್ಲ.ಉಪ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೇ ಟಿಕೆಟ್ ನಾನೇ ಅಭ್ಯರ್ಥಿ ಎಂದು ಸಾರ್ವಜನಿಕವಾಗಿ ಯಾವ ಅಭ್ಯರ್ಥಿಯೂ ಘೋಷಣೆ ಮಾಡಿಕೊಂಡಿಲ್ಲ.

ಅಷ್ಟಕ್ಕೂ ಕಳೆದ 6-7 ತಿಂಗಳಿನಿಂದ ತಿಕ್ಕಾಟ ನಡೆಯುತ್ತಿರುವ ಆ ಪಕ್ಷದ ತಾಲೂಕು ಅಧ್ಯಕ್ಷರ ಗೊಂದಲವೇ ಇನ್ನೂ ಬಗೆಹರಿದಿಲ್ಲ.ನಗರ ಭಾಗದಲ್ಲಿ ನಿಶ್ಯಕ್ತವಾಗಿರುವ ಪಕ್ಷವನ್ನು ಮರು ನಿರ್ಮಾಣ ಮಾಡುವ ಉಮ್ಮೇದು ಆ ಪಕ್ಷದ ಯಾರಲ್ಲೂ ಕಾಣುತ್ತಿಲ್ಲ.ಉಪ ಚುನಾವಣೆ ಸನಿಹದಲ್ಲಿರುವ ಹೊತ್ತಲ್ಲಿ ಪಕ್ಷದ ಮುಖಂಡರನ್ನು ಕಾರ್ಯಕರ್ತರನ್ನು ಯುದ್ಧ ಸನ್ನದ್ದ ಮಾಡುವ ಕಾರ್ಯ ನಡೆಯುತ್ತಿಲ್ಲ.

ಟಿಕೆಟ್ ಅವರಿಗೋ ನಮಗೋ ಎಂಬ ಗೊಂದಲದಲ್ಲಿ ತಟಸ್ಥ ಸ್ಥಿತಿಯಲ್ಲಿರುವ ಅವರನ್ನು ಎಬ್ಬಿಸಿ ಕ್ಷೇತ್ರ ಸುತ್ತಿಸಲು ಬಹುಷಃ ಕುಮಾರಸ್ವಾಮಿಯವರೇ ಬರಬೇಕೇನೋ. ಇದೆಲ್ಲದರ ನಡುವೆ ವಾರಕ್ಕೆ ಒಮ್ಮೆ ಕ್ಷೇತ್ರಕ್ಕೆ ಬಂದು ಒಂದೆರಡು ದಿನ ಅಬ್ಬರಿಸಿ ನಾನು ಪಕ್ಷೇತರ ಅಭ್ಯರ್ಥಿ ಎಂದು ಪ್ರಚಾರ ಪಡೆಯುತ್ತಿರುವ ಬೊಮ್ಮನಹಳ್ಳಿ ಬಾಬು ರವರು ಆರಕ್ಕೆ ಹತ್ತುತ್ತಿಲ್ಲ.ಮೂರಕ್ಕೆ ಇಳಿಯುತ್ತಿಲ್ಲ ಎಂಬಂತಿದ್ದಾರೆ.

ಸಮಾಜ ಸೇವಕ ಮಾಗಡಿ ಜಯರಾಮಯ್ಯ ನಾನು ಜೆಡಿಎಸ್ ಟಿಕೆಟ್ ಆಕಾoಕ್ಷಿ ಎಂದು ಪ್ರಚಾರ ಮಾಡುತ್ತಿದ್ದು ಇದೀಗ ಅವರು ಸಹ ಟಿಕೆಟ್ ಬೆನ್ನು ಹತ್ತಿ ಬೆಂಗಳೂರು ಸೇರಿದ್ದು ಕ್ಷೇತ್ರದಲ್ಲಿ ಉಪಚುನಾವಣೆ ಕಾವಿಗೆ ಅಲ್ಪ ವಿರಾಮ ನೀಡಿದಂತಾಗಿದೆ.