ಸಾರಾಂಶ
ರಮೇಶ್ ಬಿದರಕೆರೆ
ಕನ್ನಡಪ್ರಭ ವಾರ್ತೆ ಹಿರಿಯೂರುತಾಲೂಕಿನ ಹಳ್ಳಿಗಳು ಅಕ್ರಮ ಮದ್ಯದ ಅಡ್ಡೆಗಳಾಗಿದ್ದು, ಬಾರುಗಳಿಂದ ನಿರಂತರವಾಗಿ ಹಳ್ಳಿಗಳಿಗೆ ಅಕ್ರಮ ಮದ್ಯ ಸರಬರಾಜು ಆಗುತ್ತಿದೆ. ಭಾನುವಾರವೂ ಸಹ ತಾಲೂಕಿನ ಕೂನಿಕೆರೆಯ ಮಹಿಳೆಯರು ಬೆಳಗ್ಗೆಯೇ ಅಕ್ರಮ ಮದ್ಯ ಸಾಗಿಸುವ ಬೈಕ್ ಸವಾರನನ್ನು ತಡೆಹಿಡಿದು ಮಾಲು ಸಮೇತ ಗ್ರಾಮಾತರ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ.
ದುರಂತ ಎಂದರೆ ಈ ಕೆಲಸ ಮಾಡಬೇಕಾದ ಅಬಕಾರಿ ಅಧಿಕಾರಿಗಳಿಗೆ ಜಾಣ ಕುರುಡು. ಹಳ್ಳಿಯ ಮಹಿಳೆಯರು ಅಕ್ರಮ ಮದ್ಯ ತಡೆಗಟ್ಟಿ ಎಂದು ತಿರುಗದ ಕಚೇರಿಯೇ ಇಲ್ಲದಂತಾಗಿದೆ. ಕೂಲಿ ಕೆಲಸವನ್ನೂ ಸಹ ಬದಿಗಿಟ್ಟು ಅಬಕಾರಿ ಇಲಾಖೆಗೆ ಎರಡು ದಿನ, ಪೊಲೀಸ್ ಇಲಾಖೆಗೆ ಒಮ್ಮೆ, ತಹಸೀಲ್ದಾರ್ ಕಚೇರಿಗೆ ಒಮ್ಮೆ ಭೇಟಿ ನೀಡಿ ಮನವಿ ನೀಡಿದ್ದರು.ಕೊನೆಗೆ ಅಬಕಾರಿಯವರ ನೀವೇ ಹಿಡಿದು ಕರೆ ಮಾಡಿ ಎಂಬ ಉಡಾಫೆ ಉತ್ತರಕ್ಕೆ ಬೇಸತ್ತ ಗ್ರಾಮದ ಮಹಿಳೆಯರು ಭಾನುವಾರ ಅಕ್ರಮ ಮದ್ಯ ಸರಬರಾಜು ಮಾಡುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಳ್ಳಿಯ ಮಹಿಳೆಯರಿಗೆ ಸಿಗುವ ಅಕ್ರಮ ಮದ್ಯ ಮಾರಾಟಗಾರರು, ಸರಬರಾಜುದಾರರು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಯಾಕೆ ಸಿಗುವುದಿಲ್ಲ ಎಂಬುದೇನು ಯಕ್ಷ ಪ್ರಶ್ನೆಯಲ್ಲ. ಹಳ್ಳಿಗಳಿಗೆ ಅಕ್ರಮವಾಗಿ ಬಾರುಗಳಿಂದ ಮದ್ಯ ಸರಬರಾಜು ಮಾಡುವ ತಂಡವೇ ಇದೆ ಎಂಬ ಸತ್ಯವೂ ಸಹ ಹಳೆಯದು. ಆದರೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪುರುಸೊತ್ತು ಇಲ್ಲ. ವಾರದ ಹಿಂದೆ ಇದೇ ಅಬಕಾರಿ ಇಲಾಖೆ ಮುಂಭಾಗ ಕೂನಿಕೆರೆ ಗ್ರಾಮದ ಮಹಿಳೆಯರು ಎರಡನೇ ಬಾರಿ ಬಂದು ಅಕ್ರಮ ಮದ್ಯ ಮಾರಾಟ ನಿಲ್ಲಿಸುವುದು ಆಗುತ್ತದೋ ಇಲ್ಲವೋ ಹೇಳಿ ಎಂದು ಕುಳಿತಾಗ ಒಂದೆರಡು ದಿನ ಸಮಯ ಕೊಡಿ ಎಂದು ಕೇಳಿದ್ದರಂತೆ. ಆನಂತರ ಒಂದೆರಡು ಬಾರಿ ಹಳ್ಳಿಗೆ ಭೇಟಿ ನೀಡಿದ್ದಾರೆ. ಆದರೆ ಅಕ್ರಮ ಮದ್ಯ ಮಾರುವವರು ಬುದ್ದಿವಂತರಾಗಿದ್ದಾರೆ. ಕೇಸು ಜಡಿಯುವಷ್ಟು ಪ್ರಮಾಣದ ಮದ್ಯವನ್ನು ಅವರೆಂದೂ ಮಾರುವ ಜಾಗದಲ್ಲಿ ಸಂಗ್ರಹಿಸುವುದಿಲ್ಲ. 3-4 ಪೌಚ್, ಬಾಟಲ್ ತಂದು ಮಾರುವುದು, ಮತ್ತೆ ತರುವುದನ್ನು ಅವರು ಕಲಿತಿದ್ದಾರೆ. ದಾಳಿ ನಡೆದು ಅಕ್ರಮ ಮದ್ಯ ಸಿಕ್ಕರೂ ಸಹ ಅದು ಕೇಸು ದಾಖಲಿಸುವಷ್ಟು ಪ್ರಮಾಣದಲ್ಲಿ ಸಿಗುವುದಿಲ್ಲ. ಹಾಗಾಗಿ ತಾಲೂಕಿನ ಹಳ್ಳಿಗಳ ಅಕ್ರಮ ಮದ್ಯ ಮಾರಾಟಗಾರರಿಗೆ ಯಾವ ಭಯವೂ ಇಲ್ಲದಂತಾಗಿ ಹಳ್ಳಿಗಳೆಲ್ಲಾ ಅನಾರೋಗ್ಯದ, ಅಶಾಂತಿಯ ಅಡ್ಡೆಗಳಾಗುತ್ತಿವೆ. ಪೊಲೀಸರು ತಮ್ಮ ಕೆಲಸವಲ್ಲದಿದ್ದರೂ ಸಹ ಕೆಲವೊಮ್ಮೆ ಗ್ರಾಮಸ್ಥರ ಮನವಿ ಮೇರೆಗೆ ದಾಳಿ ಮಾಡುತ್ತಿರುವುದು ಬಿಟ್ಟರೆ ಅಬಕಾರಿ ಇಲಾಖೆಯ ಕಾರ್ಯವೈಖರಿ ಬಗ್ಗೆಯೇ ಅನುಮಾನಗಳೇಳುತ್ತಿವೆ.
ಇತ್ತೀಚಿಗೆ ಹಳ್ಳಿಗಳಿಗೆ ಅಕ್ರಮ ಮದ್ಯ ಸಾಗಿಸುವುದನ್ನೇ ಕಾಯಕ ಮಾಡಿಕೊಂಡಿರುವ ಕೆಲವರು ಕುಗ್ರಾಮಗಳಿಗೂ ಮದ್ಯ ಮುಟ್ಟಿಸುತ್ತಿದ್ದಾರೆ. ಸಾರ್ವಜನಿಕರ ದೂರುಗಳು ದೂರುಗಳಾಗಿ ಉಳಿಯುತ್ತಿವೆಯೇ ಹೊರತು ಪರಿಹಾರ ಕಾಣುತ್ತಿಲ್ಲ. ಮಹಿಳೆಯರ ಕಣ್ಣೀರ ಕಥೆಯತ್ತ ಈಗಲಾದರೂ ಜಿಲ್ಲಾ ಉಸ್ತುವಾರಿ ಸಚಿವರು ಗಮನ ಹರಿಸಬೇಕು.ಕೆಲಸ ಮಾಡದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ: ಕೂನಿಕೆರೆ ಗ್ರಾಮದ ಮಹಿಳೆಯರ ಸಂಕಟಕ್ಕೆ ಜೊತೆಯಾಗಿ ನಮ್ಮ ಸಂಘಟನೆಯವರು ಹೋಗಿ ತಹಸೀಲ್ದಾರ್, ಅಬಕಾರಿ ಇಲಾಖೆಯವರಿಗೆ ಮನವಿ ಸಲ್ಲಿಸಿದ್ದೆವು. ಆದರೆ ಆ ಗ್ರಾಮದ ಮಹಿಳೆಯರ ಕೋರಿಕೆಯನ್ನು ಅಬಕಾರಿ ಇಲಾಖೆಯವರ ಕೈಲಿ ಈಡೇರಿಸಲಾಗಿಲ್ಲ. ಇಲಾಖೆಗೆ ಕಪ್ಪುಚುಕ್ಕೆಯಂತಿರುವ ಕೆಲ ಅಧಿಕಾರಿಗಳನ್ನು ಬದಲಿಸದಿದ್ದರೆ ತಾಲೂಕಿನ ಹಳ್ಳಿಗಳ ಸ್ಥಿತಿ ಹದಗೆಡುವುದಂತೂ ನಿಜ. ಕೂಡಲೇ ಸಚಿವರು ಕೆಲಸ ಮಾಡದ ಅಬಕಾರಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷರಾದ ಆರ್. ರಾಘವೇಂದ್ರ ತಿಳಿಸಿದ್ದಾರೆ.
ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದ ಮಹಿಳೆಯರು ಭಾನುವಾರ ಬೆಳಗ್ಗೆ ಅಕ್ರಮ ಮದ್ಯ ಸಾಗಿಸುವವರನ್ನು ಪೊಲೀಸರಿಗೆ ಒಪ್ಪಿಸಿದರು.