ಹಿರಿಯೂರು ನಗರದ ಎ.ಕೃಷ್ಣಪ್ಪ ವೃತ್ತದಲ್ಲಿ ರಂಗಕರ್ಮಿ ಮಂಡ್ಯ ರಮೇಶ್ ನಿರ್ದೇಶನದ ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನ ಹಾಗೂ ರಂಗ ಸನ್ಮಾನ ಕಾರ್ಯಕ್ರಮವನ್ನು ಸಕ್ಕರ ರಂಗಸ್ವಾಮಿ ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ಹಿರಿಯೂರು ತಾಲೂಕು ಸಾಹಿತ್ಯ, ಸಂಗೀತ, ಜಾನಪದ ಹಾಗೂ ರಂಗಕಲೆಗೆ ಅಪಾರವಾದ ಕೊಡುಗೆ ನೀಡಿದ್ದು ಕನ್ನಡ ನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಉಳಿಸಿ ಬೆಳೆಸಿದೆ ಎಂದು ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಎಸ್.ಜಿ. ರಂಗಸ್ವಾಮಿ ಸಕ್ಕರ ಅಭಿಪ್ರಾಯ ಪಟ್ಟರು.ಪಟ್ಟಣದ ವೇದಾವತಿ ನಗರದಲ್ಲಿರುವ ಎ.ಕೃಷ್ಣಪ್ಪ ವೃತ್ತದಲ್ಲಿ ಚಿತ್ರದುರ್ಗ ಬಹುಮುಖಿ ಕಲಾ ಕೇಂದ್ರ, ಶ್ರೀ ಕೃಷ್ಣ ದೇವಸ್ಥಾನ ಸಮಿತಿಯ ಆಶ್ರಯದಲ್ಲಿ ಆಯೋಜಿಸಿದ್ದ ಖ್ಯಾತ ರಂಗಕರ್ಮಿ ಮಂಡ್ಯ ರಮೇಶ್ ನಿರ್ದೇಶನದ ‘ಸಂಸಾರದಲ್ಲಿ ಸನಿದಪ ನಾಟಕ’ ಪ್ರದರ್ಶನ ಹಾಗೂ ರಂಗ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
16ನೇ ಶತಮಾನದ ಆರಂಭದಲ್ಲಿ ಮಾಯಸಂದ್ರದ ದೊರೆ ಕೇಶವ ನಾಯಕನು ಹಿರಿಯೂರನ್ನು ಸ್ಥಾಪನೆ ಮಾಡಿದನು. ಇದಕ್ಕೆ ಘನಪುರಿ, ಹೊನ್ನ ಹಿರಿಯೂರು ಎಂಬ ಹೆಸರು ಇತ್ತು. ಈಗ ಇದು ಹಿರಿಯೂರು ಆಗಿ ಬೆಳೆದು ರಂಗಭೂಮಿಯ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ. 1948ರಲ್ಲಿ ಸ್ಥಾಪನೆಯಾದ ವಿಜಯ ಕಲಾವಿದರು, 1970ರಲ್ಲಿ ಸ್ಥಾಪನೆಯಾದ ಭಾರತಿ ಕಲಾವಿದರು, 1976ರಲ್ಲಿ ಪ್ರಾರಂಭಗೊಂಡ ಲಾವಣ್ಯ ಕಲಾವೃಂದ, 1982 ರಲ್ಲಿ ಆರಂಭವಾದ ದುರ್ಗಿಗುಡಿ ಕಲಾಸಂಘ, ಫ್ರೆಂಡ್ಸ್ ಕಲಾ ವೃಂದ, ಸ್ನೇಹಸಂಪದ ಕಲಾಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳು ಪ್ರಸಿದ್ಧ ರಂಗ ಕಲಾವಿದರಾದ ಮಲ್ಲಪ್ಪನಳ್ಳಿಯ ಎಂ ಆರ್ ಲಕ್ಷ್ಮಣಪ್ಪ, ಹರ್ತಿಕೋಟೆಯ ಸುಬ್ಬರಾಯ, ಜಯಮ್ಮ, ಹನುಮಕ್ಕ, ಓಬೇನಹಳ್ಳಿ ಪಾಂಡುರಂಗ ನಾಯಕ, ಎಂ ಎಸ್ ಅವಧಾನಿ ವೆಂಕಟೇಶಯ್ಯ, ಕೆ.ವಿ.ರಾಮಚಂದ್ರ ರಾವ್, ಪಾಪನಾಯಕ,ಪಟೇಲ್ ತಿಪ್ಪೇಸ್ವಾಮಿ, ರಂಗೇನಹಳ್ಳಿ ಗಿರಿಯಣ್ಣ, ಅಮೀರ್ ಖಾನ್,ಬಿ.ವಿ. ಮಾಧವ, ಜಿ.ಡಿ ತಿಮ್ಮಯ್ಯ, ಭಾಗ್ಯಶ್ರೀ, ವಿಮಲಾಕ್ಷಿ, ರಾಜೇಶ್ವರಿ, ಮಂಜುಳಾ, ವಿಜಯ ಕುಮಾರಿ, ನಿರ್ಮಲ, ನಗೀನ ರಾವ್, ಭಾರತಿ,ಭುವನೇಶ್ವರಿ, ರೇಖಾ, ಮಲ್ಲಪ್ಪನಹಳ್ಳಿ ಮಹಾಲಿಂಗಯ್ಯ, ಜಿ. ಧನಂಜಯ್ ಕುಮಾರ್, ಎಚ್ಆರ್ ಕಣ್ಣಪ್ಪ, ವಿ.ಹೆಚ್. ರಾಜು, ಡಾ. ಎಂ ಎನ್ ಶ್ರೀಪತಿ ಸೇರಿದಂತೆ ಹಲವಾರು ವೃತ್ತಿ ಮತ್ತು ಹವ್ಯಾಸಿ ರಂಗಭೂಮಿ ಕಲಾವಿದರನ್ನು ಹುಟ್ಟು ಹಾಕಿ ರಂಗಭೂಮಿಯ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದರು.
ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎನ್ ಚಿತ್ರಜಿತ್ ಯಾದವ್ ಮಾತನಾಡಿ, ಜಾನಪದ ಕ್ಷೇತ್ರಕ್ಕೆ ನಾಡೋಜ ಸಿರಿಯಜ್ಜಿ, ಬಿದರಕೆರೆ ತೋಪಜ್ಜಿ, ಸಕ್ಕರದ ನಿಂಗಜ್ಜಿ ಅಪಾರ ಕೊಡುಗೆ ನೀಡಿದ್ದು ಹಿರಿಯೂರು ತಾಲೂಕು ಸೋಬಾನೆ,ಗೊರವನ ಕುಣಿತ, ತಮಟೆ ವಾದ್ಯ,ದೇವರ ನಾಮ ವೀರಗಾಸೆ,ಕೋಲಾಟ, ಜಾನಪದ ಕಲೆಗಳು ಸೇರಿದಂತೆ ಸಾಂಸ್ಕೃತಿಕ ವೈವಿದ್ಯತೆಗೆ ಸಾಕ್ಷಿಯಾಗಿದೆ ಎಂದರು.ಕವಿ ಶಿವಶಂಕರ ಸೀಗೆಹಟ್ಟಿ ಮಾತನಾಡಿ ನಾಟಕಗಳು ನಮ್ಮ ಜೀವನದ ಪ್ರತಿಬಿಂಬವಾಗಿದ್ದು ಬದುಕಿನ ಸಂಕಟ,ವೇದನೆ, ಸರಸ ವಿರಸಗಳ ಒಟ್ಟಾರೆ ಸಂವೇದನೆಯಾಗಿದೆ ಎಂದರು.
ಈ ವೇಳೆ ಶ್ರೀ ಕೃಷ್ಣ ದೇವಸ್ಥಾನ ಸಮಿತಿಯ ಅಧ್ಯಕ್ಷ ಡಿ ಪಾಂಡುರಂಗಪ್ಪ, ಯುವ ಮುಖಂಡರಾದ ಸಿ.ಆರ್ ಓಬಳೇಶ್, ಎನ್ ಲಕ್ಷ್ಮಿಕಾಂತ್ಎ . ಜಿ.ತಿಮ್ಮಯ್ಯ,ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಜೆ.ನಿಜಲಿಂಗಪ್ಪ, ಬಹುಮುಖಿ ಕಲಾ ಕೇಂದ್ರ ಕಾರ್ಯದರ್ಶಿಟಿ.ಮಧು, ರಂಗಭೂಮಿ ಕಲಾವಿದ ಟಿ. ಶ್ರೀನಿವಾಸ್, ಧಾತ್ರಿ ರಂಗ ಸಂಸ್ಥೆಯ ಸಂಚಾಲಕ ವಿಜಯ ಕುಮಾರ್, ಎಸ್ ರುದ್ರಯ್ಯ, ಎ.ತಿಮ್ಮಪ್ಪ, ಜಿ.ಎ.ಶ್ರೀನಿವಾಸ್, ಟಿ.ನಿಂಗಣ್ಣ ಮುಂತಾದವರು ಉಪಸ್ಥಿತರಿದ್ದರು. ಬಳ್ಳಾರಿ ಜಿಲ್ಲೆ ಸಿರಿಗೇರಿಯ ಧಾತ್ರಿ ರಂಗ ಸಂಸ್ಥೆ ಕಲಾವಿದರು ಸಂಸಾರದಲ್ಲಿ ಸನಿದಪ ನಾಟಕ ಪ್ರದರ್ಶನ ಮಾಡಿದರು.