ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಆಡಳಿತ ಮಂಡಳಿಯ 2025-28ನೇ ಸಾಲಿನ ಚುನಾವಣೆ ಡಿ.7ರಂದು ನಡೆಯಲಿದ್ದು, ತಮ್ಮ ತಂಡಕ್ಕೆ ನಿಚ್ಚಳ ಗೆಲುವು ಸಿಗಲಿದೆ ಎಂದು ಕೆಎಸ್‌ಸಿಎ ಹಾಲಿ ಅಧ್ಯಕ್ಷ , ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಆಡಳಿತ ಮಂಡಳಿಯ 2025-28ನೇ ಸಾಲಿನ ಚುನಾವಣೆ ಡಿ.7ರಂದು ನಡೆಯಲಿದ್ದು, ತಮ್ಮ ತಂಡಕ್ಕೆ ನಿಚ್ಚಳ ಗೆಲುವು ಸಿಗಲಿದೆ ಎಂದು ಕೆಎಸ್‌ಸಿಎ ಹಾಲಿ ಅಧ್ಯಕ್ಷ , ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದರು.ಬುಧವಾರ ಸಂಜೆ ಪ್ರತಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ತಮ್ಮ ಆಡಳಿತಾವಧಿಯಲ್ಲಿ ಉತ್ತಮ ಕೆಲಸ ಮಾಡಿ ಕೆಎಸ್‌ಸಿಎ ದೇಶಕ್ಕೆ ಮಾದರಿಯಾಗಿದೆ. ಇಲ್ಲಿಯವರೆಗಿನ ತಾವು ನಿರ್ವಹಿಸಿದ ಉತ್ತಮ ಆಡಳಿತಕ್ಕೆ ಯಾರಿಂದಲೂ ಪ್ರಮಾಣಪತ್ರ ಬೇಕಾಗಿಲ್ಲ ಎಂದು ಕುಟುಕಿದರು.
2010 ಮತ್ತು 2013ರಲ್ಲಿ ಏನೂ ಅಭಿವೃದ್ಧಿ ಕೆಲಸಗಳಾಗಿಲ್ಲ ಎಂಬ ತಮ್ಮ ವಿರೋಧಿಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತಮ್ಮ ಆಡಳಿತಾವಧಿಯಲ್ಲಿ ಕೆಪಿಎಲ್, ಮಹಾರಾಜ ಕಪ್, ರಣಜಿಟ್ರೋಫಿ, ವಿಜಯಹಜಾರೆ ಕಪ್, ಮಹಿಳಾ ಕ್ರಿಕೆಟ್ ಪಂದ್ಯಾವಳಿ ಮೊದಲಾದವುಗಳನ್ನು ಗೆದ್ದು ತಮ್ಮ ಅವಧಿಯ ಆಡಳಿತದ ವೈಖರಿಯನ್ನು ಪ್ರದರ್ಶಿಸಿದ್ದೇವೆ ಎಂದು ತಿರುಗೇಟು ನೀಡಿದರು.19 ವರ್ಷದೊಳಗಿನ ಮಹಿಳಾ ಕ್ರಿಕೆಟ್ ತಂಡ ಪ್ರಪ್ರಥಮವಾಗಿ ವಿಜಯ ಸಾಧಿಸಿದ್ದು ತಮ್ಮ ಆಡಳಿತಾವಧಿಯಲ್ಲೇ ಎಂದ ಅವರು, ಇತ್ತೀಚೆಗೆ ನಡೆದ ಮಹಾರಾಜ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಾಖಲೆ ವೀಕ್ಷಕರು ಪಂದ್ಯ ವೀಕ್ಷಿಸಿದ್ದು, ತಮ್ಮ ತತ್ಪರತೆಗೆ ಸಾಕ್ಷಿಯಾಗಿದೆ. ಕಳೆದ ವರ್ಷ 12 ವರ್ಷದೊಳಗಿನ ಪಂದ್ಯಾವಳಿಯನ್ನು ನಡೆಸಿದ್ದು, ಎಲ್ಲರಿಂದ ಮೆಚ್ಚುಗೆ ಪಡೆದಿದ್ದೇವೆ. ಬಿಸಿಸಿಐ ಕೂಡ ತಮ್ಮ ಆಡಳಿತವನ್ನು ಮೆಚ್ಚಿಕೊಂಡಿದೆ ಎಂದರು.
ಕ್ರಿಕೆಟ್ ಆಟದ ಮೈದಾನ, ಅಲ್ಲಿಯ ಮೂಲಭೂತ ಸೌಕರ್ಯ, ವೆಚ್ಚದ ಬಿಲ್‌ಗಳ ಬಗ್ಗೆ ವಿರೋಧಿಗಳು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದು, ಎಲ್ಲಿಯೂ ಹಣಕಾಸಿನ ಅವ್ಯವಹಾರ ನಡೆದಿಲ್ಲ. ಎಲ್ಲವೂ ಕಾನೂನುಬದ್ಧವಾಗಿಯೇ ಮಾಡಿದ್ದೇವೆ. ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆ ೮ ಟರ್ಫ್ ಗ್ರೌಂಡ್‌ಗಳನ್ನು ನಿರ್ಮಿಸಿದ್ದೇವೆ. ತಾಲೂಕು ಮಟ್ಟದಲ್ಲಿಯೂ ಕ್ರಿಕೆಟ್ ಬಗ್ಗೆ ಜಾಗೃತಿಮೂಡಿಸಲು ಕಾರ್ಯನಿರ್ವಹಿಸಿದ್ದೇವೆ ಎಂದರು.ತಾವು ಹಿಂದಿನ ಸೀಟಿನಲ್ಲಿ ಕೂತು ವಾಹನ ಚಾಲನೆ ಮಾಡುತ್ತೀದ್ದೀರಿ ಎಂಬ ಪ್ರಶ್ನೆಗೆ, ಈ ಬಾರಿ ಕ್ರಿಕೆಟ್, ಗಾಲ್ಫ್ ಮೊದಲಾದ ಕ್ರೀಡೆಗಳಲ್ಲಿ ಮತ್ತು ಆಡಳಿತದಲ್ಲಿ ಅನುಭವ ಹೊಂದಿರುವ ಕೆ.ಎನ್. ಶಾಂತಕುಮಾರ್ ಅವರನ್ನು ರಾಜ್ಯಾಧ್ಯಕ್ಷ ಕಣಕ್ಕೆ ಇಳಿಸಲಾಗಿದೆ. ಎಲ್ಲಾ ಆಡಳಿತ ಮಂಡಳಿ ಸದಸ್ಯರು ಮತ್ತು ಸಂಸ್ಥೆಗಳ ಸದಸ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಶಾಂತಕುಮಾರ್ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದರಲ್ಲಿ ಕೆ.ಎಸ್.ಸಿ.ಎ.ಯ ಯಾವ ಪಾತ್ರವೂ ಇಲ್ಲ. ಆದರೂ ಇದರ ಆಡಳಿತ ಮಂಡಳಿಯ ಕೆಲವು ಸದಸ್ಯರೇ ತಮ್ಮ ಸಂಘಟನೆಯ ರಕ್ಷಣೆಯ ಬಗ್ಗೆ ಮಾತನಾಡುವುದನ್ನು ಬಿಟ್ಟು ಸಂಘದ ವಿರುದ್ಧವಾಗಿ ಮಾತನಾಡಿದ್ದು ವಿಷಾಧನೀಯ. ಇಲ್ಲಿಯವರೆಗೆ ೭೫೦ ಪಂದ್ಯಾವಳಿಯನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದು, ಸಧ್ಯದಲ್ಲಿಯೇ ಬೃಹತ್ ಕ್ರಿಕೆಟ್ ಪಂದ್ಯಾವಳಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದರು.ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಕೆ.ಎನ್. ಶಾಂತಕುಮಾರ್ ಮಾತನಾಡಿ, ೯ ದಶಕಗಳ ಕೆ.ಎಸ್.ಸಿ.ಎ.ಗೆ ದೀರ್ಘ ಹಾಗೂ ವೈಭವದ ಇತಿಹಾಸವಿದೆ. ತಮಗೆ ಕ್ರಿಕೆಟ್ ಕ್ಷೇತ್ರದಲ್ಲಿ ಅನುಭವವಿದೆ. ಕ್ರೀಡಾಪಟುವಾಗಿ, ಆಡಳಿತ ನಡೆಸಿದ ಅನುಭವವಿದೆ. ಒಳ್ಳೆಯ ಕೆಲಸ ಮಾಡುವ ವಿಶ್ವಾಸವಿದೆ. ಆದ್ದರಿಂದ ಮಂಡಳಿಯ ಸದಸ್ಯರು ತಮಗೆ ಮತನೀಡಿ ಬಹುಮತದಿಂದ ಗೆಲ್ಲಿಸಬೇಕು ಎಂದು ಕೋರಿದರು.
ಗೋಷ್ಠಿಯಲ್ಲಿ ಜಯರಾಂ, ರಘುರಾಂ ಭಟ್, ಬಿ.ಕೆ. ರವಿ, ತಿಲಕ್ ನಾಯ್ಡು, ಸಂಜಯ್ ಪೌಲ್, ಕುಶಾಲ್ ಪಾಟೀಲ್, ಡಿ.ಆರ್.ನಾಗರಾಜ್, ಐಡಿಯಲ್ ಗೋಪಿ, ಶಿವಪ್ಪ ಮತ್ತಿತರರು ಇದ್ದರು.