ಇತಿಹಾಸ ನಿರ್ಮಿಸಿದ ಇತಿಹಾಸಕಾರ ಪಾದೂರು ಗುರುರಾಜ ಭಟ್ : ಪುಂಡಿಕಾಯ್ ಗಣಪಯ್ಯ ಭಟ್

| Published : Jun 07 2024, 12:32 AM IST

ಇತಿಹಾಸ ನಿರ್ಮಿಸಿದ ಇತಿಹಾಸಕಾರ ಪಾದೂರು ಗುರುರಾಜ ಭಟ್ : ಪುಂಡಿಕಾಯ್ ಗಣಪಯ್ಯ ಭಟ್
Share this Article
  • FB
  • TW
  • Linkdin
  • Email

ಸಾರಾಂಶ

ತುಳುನಾಡಿನ ಇತಿಹಾಸ ಸಂಶೋಧನೆಯ ಮಾರ್ಗ ಪ್ರವರ್ತಕ ದಿ. ಡಾ. ಪಾದೂರು ಗುರುರಾಜ ಭಟ್ ನೂರರ ನೆನಪು ಕಾರ್ಯಕ್ರಮದಲ್ಲಿ ಸಂಸ್ಮರಣಾ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ತುಳುನಾಡಿನ ಇತಿಹಾಸ ರೂಪಿಸುವಲ್ಲಿ ತನ್ನ ಬದುಕನ್ನೇ ಸಮರ್ಪಿಸಿಕೊಂಡವರು ಪಾದೂರು ಗುರುರಾಜ ಭಟ್ಟರು ತುಳುನಾಡಿದ ಇತಿಹಾಸದ ವಿಶ್ವಕೋಶವಾಗಿದ್ದರು. ಅವರು ಇತಿಹಾಸವನ್ನೇ ಜನ ಸಾಮಾನ್ಯರತ್ತ ಕೊಂಡೊಯ್ದ ಮಹಾನ್ ಸಾಧಕರು. ಇತಿಹಾಸಕಾರರಾಗಿ ಕ್ಷೇತ್ರಕಾರ್ಯಕ್ಕೆ ಮಹತ್ವ ನೀಡಿದ ಪರಿಶ್ರಮಿ. ಬೆಳ್ಮಣ್ಣಿನಲ್ಲಿ ಕನ್ನಡದ ಮೊದಲ ತಾಮ್ರ ಶಾಸನವನ್ನು ಬೆಳಕಿಗೆ ತಂದು ನಾಡಿನ ಇತಿಹಾಸ ಕಾರರ ಪೈಕಿ ಸಾಧಕರಾಗಿ ಗುರುತಿಸಿಕೊಂಡವರು ಎಂದು ಇತಿಹಾಸ ಸಂಶೋಧಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಹೇಳಿದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ತಾಲೂಕು ಘಟಕ, ಸಮಾಜ ಮಂದಿರ ಸಭಾ ಮೂಡುಬಿದಿರೆ ವತಿಯಿಂದ ತುಳುನಾಡಿನ ಇತಿಹಾಸ ಸಂಶೋಧನೆಯ ಮಾರ್ಗ ಪ್ರವರ್ತಕ ದಿ. ಡಾ. ಪಾದೂರು ಗುರುರಾಜ ಭಟ್ ನೂರರ ನೆನಪು ಕಾರ್ಯಕ್ರಮದಲ್ಲಿ ಸಂಸ್ಮರಣಾ ಉಪನ್ಯಾಸ ನೀಡಿದರು.

ತುಳುನಾಡಿನ ದೇವಾಲಯಗಳು, ಮೂರ್ತಿ ಶಿಲ್ಪಗಳ ಕುರಿತ ಅಧ್ಯಯನಕ್ಕೆ ನಾಂದಿಹಾಡಿದ ಭಟ್ಟರು ಸಂಶೋಧನೆಯನ್ನೇ ಬದುಕಾಗಿಸಿಕೊಂಡ ಮಹಾನುಭಾವ ಎಂದು ಅವರು ವಿವರಿಸಿದರು.

ಅತಿಥಿಯಾಗಿದ್ದ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ ಶೆಟ್ಟಿ ಮಾತನಾಡಿ ಪಾದೂರು ಗುರುರಾಜ ಭಟ್ಟರು ತಾವು ಕೆಲಸ ಮಾಡಿದ ಸಂಸ್ಥೆಗಳಲ್ಲೆಲ್ಲ ಇತಿಹಾಸದ ವಸ್ತು ಸಂಗ್ರಹಾಲಯಗಳನ್ನೂ ಬಿಟ್ಟು ಹೋಗಿದ್ದಾರೆ. ಅವರ ಕೃತಿಗಳ ಸಮಗ್ರ ಅಧ್ಯಯನ ನಡೆಯಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಮಾಜ ಮಂದಿರ ಸಭಾದ ಅಧ್ಯಕ್ಷ , ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಇತಿಹಾಸವೇ ನಮ್ಮ ಶಕ್ತಿ.ಇತಿಹಾಸದ ಕಾಳಜಿಯೊಂದಿಗೆ ಯುವ ಜನತೆ ಗುರುರಾಜ ಭಟ್ಟರ ಸಾಧನೆ ಸಂಶೋಧನೆಗಳಿಂದ ಸ್ಫೂತಿ ಪಡೆದು ಶೈಕ್ಷಣಿಕವಾಗಿ ಸಾಧನೆ, ಸಂಶೋಧನೆಯಲ್ಲಿ ಕೊಡುಗೆ ನೀಡುವಂತಾಗಬೇಕು ಎಂದರು.

ಡಾ. ಪಾದೂರು ಗುರುರಾಜ ಭಟ್ ಅವರ ಪುತ್ರರಾದ ಪಿ.ವಿಶ್ವನಾಥ ಭಟ್, ಪಿ.ಪರಶುರಾಮ ಭಟ್, ಪಿ. ಮಹೇಶ್ ಭಟ್ , ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಪ್ರೊ. ತುಕಾರಾಮ ಪೂಜಾರಿ ಮತ್ತಿತರ ಗಣ್ಯರು ಉಪ ಸ್ಥಿತರಿದ್ದರು.

ಮೂಡುಬಿದಿರೆ ತಾಲೂಕು ಕ.ಸಾ.ಪ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಸ್ವಾಗತಿಸಿದರು. ಕಾರ್ಯದರ್ಶಿ ಸದಾನಂದ ನಾರಾವಿ ವಂದಿಸಿದರು. ಮಹಾದೇವ ಮೂಡುಕೊಣಾಜೆ ಕಾರ್ಯಕ್ರಮ ನಿರೂಪಿಸಿದರು.