ಐತಿಹಾಸಿಕ ಅಂಬಟ್ಟಿ ಮಖಾಂ ಉರೂಸ್ ಗೆ ಚಾಲನೆ

| Published : Feb 19 2024, 01:32 AM IST

ಸಾರಾಂಶ

ಇತಿಹಾಸ ಪ್ರಸಿದ್ಧ ಅಂಬಟ್ಟಿ ಮಖಾಂ ಉರೂಸ್ ಗೆ ಶುಕ್ರವಾರದಂದು ವಿದ್ಯುಕ್ತ ಚಾಲನೆ ದೊರೆಯಿತು.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಇತಿಹಾಸ ಪ್ರಸಿದ್ಧ ಅಂಬಟ್ಟಿ ಮಖಾಂ ಉರೂಸ್ ಗೆ ಶುಕ್ರವಾರದಂದು ವಿದ್ಯುಕ್ತ ಚಾಲನೆ ದೊರೆಯಿತು. ವಿರಾಜಪೇಟೆ ಸಮೀಪದ ಅಂಬಟ್ಟಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಶೇಕ್ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ಜಾತಿ, ಮತ, ಭೇದವಿಲ್ಲದೆ ವರ್ಷಂಪ್ರತಿ ನಡೆಯುವ ಅಂಬಟ್ಟಿ ಮಖಾಂ ಉರೂಸ್ ಇದೇ ತಿಂಗಳ 20ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಶುಕ್ರವಾರದ ಜುಮಾ ನಮಾಜಿನ ಬಳಿಕ ಅಂಬಟ್ಟಿ ಮಖಾಂ ಆವರಣದಲ್ಲಿ ಅಂಬಟ್ಟಿ ಜಮಾಅತಿನ ಅಧ್ಯಕ್ಷ ಎ.ಎಚ್. ಶಾದುಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಪ್ರಸಕ್ತ ವರ್ಷದ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಖಾಂನಲ್ಲಿ ಅಂಬಟ್ಟಿ ಜುಮ್ಮಾ ಮಸೀದಿಯ ಖತೀಬ ರಫೀಕ್ ಸಅದಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.ಮಖಾಂ ಆವರಣದಲ್ಲಿ ನಡೆದ ಜಮಾಅತಿನ ಅಧ್ಯಕ್ಷರಾದ ಎ.ಎಚ್. ಶಾದುಲಿ ಅಧ್ಯಕ್ಷತೆಯಲ್ಲಿ ನಡೆದ ಉರೂಸ್ ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂಬಟ್ಟಿ ಜಮಾಅತ್ತಿನ ಉಪಾಧ್ಯಕ್ಷರಾದ ಎಂ. ಕೆ. ಹ್ಯಾರಿಸ್, ಕೋಶಾಧಿಕಾರಿ ಖಾಲಿದ್ ಫೈಜಿ, ಉರೂಸ್ ಆಯೋಜನ ಸಮಿತಿ ಅಧ್ಯಕ್ಷರಾದ ಎಚ್. ತೌಸೀಫ್, ಕಾರ್ಯದರ್ಶಿ ಜುಬೇರ್ ಅಹಮದ್, ಜಮಾಅತ್ತಿನ ಮಾಜಿ ಅಧ್ಯಕ್ಷರಾದ ಕೆ.ಎ. ಯುಸೂಫ್, ಮಾಜಿ ಕಾರ್ಯದರ್ಶಿ ಎಂ. ಕೆ. ಮುಸ್ತಫ, ಜಮಾಅತ್ತಿನ ಆಡಳಿತ ಮಂಡಳಿ ಪದಾಧಿಕಾರಿಗಳಾದ ಪಿ. ಎ. ಖಾಲಿದ್, ರಜಾಕ್, ಹುಸೇನಾರ್, ಸುಹೀರ್ ಮೊದಲಾದವರು ಪಾಲ್ಗೊಂಡಿದ್ದರು.

ಅಂಬಟ್ಟಿ ಜುಮಾ ಮಸೀದಿಯ ಸದರ್ ಉಸ್ತಾದ್ ಅಶ್ರಫ್ ಹಳ್ರಮಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸಂಜೆ ವೇಳೆ ಅಲಂಕೃತ ಅಂಬಟ್ಟಿ ಮಖಾಂನಲ್ಲಿ ಸಂದಲ್ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ವಿವಿಧ ಪ್ರದೇಶಗಳಿಂದ ಆಗಮಿಸಿದ್ದ ನೂರಾರು ವಿಶ್ವಾಸಿಗಳು ಕಣ್ತುಂಬಿಕೊಂಡರು.