ಇಂದು-ನಾಳೆ ಐತಿಹಾಸಿಕ ಬೂದನೂರು ಉತ್ಸವ

| Published : Mar 02 2024, 01:50 AM IST

ಸಾರಾಂಶ

ಹೊಸಬೂದನೂರಿನ ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಾಲಯದ ಹಿಂಭಾಗ ಉತ್ಸವದ ಕಾರ್ಯಕ್ರಮಗಳು ಜರುಗಲಿವೆ.ಮಾ.೨ರಂದು ಸಂಜೆ ೫ ಗಂಟೆಗೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರವಾಸಿಗರಿಂದ ದೂರ ಉಳಿದಿರುವ ಪುರಾತನ ಸ್ಮಾರಕಗಳತ್ತ ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ತಾಲೂಕಿನ ಹೊಸ ಬೂದನೂರು ಗ್ರಾಮದಲ್ಲಿ ಬೂದನೂರು ಉತ್ಸವ ಕಾರ್ಯಕ್ರಮವನ್ನು ಇದೇ ಮೊದಲ ಬಾರಿಗೆ ಮಾ.೨ ಮತ್ತು ೩ರಂದು ಆಯೋಜಿಸಲಾಗಿದೆ. ಈ ಮೂಲಕ ಶಾಸಕ ಪಿ.ರವಿಕುಮಾರ್ ಅವರು ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ.

೬೫ ಲಕ್ಷ ರು. ವೆಚ್ಚದಲ್ಲಿ ಇದೇ ಮೊದಲ ಬಾರಿಗೆ ಬೂದನೂರು ಉತ್ಸವವನ್ನು ನಡೆಸಲಾಗುತ್ತಿದ್ದು, ಇದನ್ನು ಪ್ರತಿ ವರ್ಷವೂ ಮುಂದುವರೆಸಿಕೊಂಡು ಹೋಗುವುದಕ್ಕೆ ನಿರ್ಧರಿಸಲಾಗಿದೆ. ಹೊಸಬೂದನೂರಿನ ಶ್ರೀ ಕಾಶಿ ವಿಶ್ವನಾಥಸ್ವಾಮಿ ದೇವಾಲಯದ ಹಿಂಭಾಗ ಉತ್ಸವದ ಕಾರ್ಯಕ್ರಮಗಳು ಜರುಗಲಿವೆ.

ಮಾ.೨ರಂದು ಸಂಜೆ ೫ ಗಂಟೆಗೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು. ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ, ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ಎ.ಬಿ.ರಮೇಶ್ ಬಂಡಿಸಿದ್ದೇಗೌಡ ಹಾಗೂ ಸಂಸದರು, ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರು ಪಾಲ್ಗೊಳ್ಳುವರು.

ಕಾರ್ಯಕ್ರಮಗಳ ವಿವರ:

ಮಾ.೨ ರಂದು ಸಂಜೆ ೫ ಗಂಟೆಗೆ ಹೊಸಬೂದನೂರು ಗ್ರಾಮದ ಪ್ರವೇಶ ದ್ವಾರದಿಂದ ಶ್ರೀ ಕಾಶಿವಿಶ್ವನಾಥ ಮತ್ತು ಶ್ರೀ ಅನಂತಪದ್ಮನಾಭ ದೇವಾಲಯದವರೆಗೆ ಮೆರವಣಿಗೆ ನಡೆಯಲಿದೆ. ೬ ಗಂಟೆಗೆ ಶ್ರೀ ಕಾಶಿವಿಶ್ವನಾಥ ಮತ್ತು ಶ್ರೀ ಅನಂತಪದ್ಮನಾಭ ದೇವಾಲಯದಲ್ಲಿ ಪೂಜೆ ನಡೆಯಲಿದೆ. ೬.೧೫ಕ್ಕೆ ಮುಖ್ಯ ವೇದಿಕೆ ಬಳಿ ಗಂಗಾರತಿ ನಡೆಯಲಿದೆ. ೬.೩೦ ಕ್ಕೆ ಬೂದನೂರು ಉತ್ಸವ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮಗಳು ನಡೆಯಲಿವೆ. ೭.೩೦ಕ್ಕೆ ಸಾಧುಕೋಕಿಲಾ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಮಾ.೩ ರಂದು ಸಂಜೆ ೫ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ. ೬ ಗಂಟೆಗೆ ಶಾಲಾ ಮಕ್ಕಳು, ೬.೧೫ ಕ್ಕೆ ಸ್ಥಳೀಯ ಕಲಾ ತಂಡದವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವರು. ೭.೩೦ ಗಂಟೆಗೆ ಅರ್ಜುನ್ ಜನ್ಯ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.