ಐತಿಹಾಸಿಕ ಲಕ್ಷ್ಮೀವೆಂಕಟೇಶ್ವರ ರಥೋತ್ಸವ

| Published : Oct 13 2024, 01:14 AM IST

ಸಾರಾಂಶ

ಇಲ್ಲಿನ ಐತಿಹಾಸಿಕ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಶುಕ್ರವಾರ ಸಂಜೆ ೯೦ನೇ ವರ್ಷದ ರಥೋತ್ಸವದ ಮೂಲಕ ಶರನ್ನವರಾತ್ರಿ ಉತ್ಸವಗಳಿಗೆ ತೆರೆ ಎಳೆಯಲಾಯಿತು.

ಕನ್ನಡಪ್ರಭ ವಾರ್ತೆ ಕಾರಟಗಿ

ಇಲ್ಲಿನ ಐತಿಹಾಸಿಕ ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ಶುಕ್ರವಾರ ಸಂಜೆ ೯೦ನೇ ವರ್ಷದ ರಥೋತ್ಸವದ ಮೂಲಕ ಶರನ್ನವರಾತ್ರಿ ಉತ್ಸವಗಳಿಗೆ ತೆರೆ ಎಳೆಯಲಾಯಿತು.

ಇಲ್ಲಿನ ತಹಸೀಲ್ದಾರ ಕಚೇರಿ ಅಧೀನದಲ್ಲಿ ಇರುವ ದೇವಾಲಯಕ್ಕೆ ಕಂದಾಯ ಅಧಿಕಾರಿಗಳ ಮತ್ತು ವಿವಿಧ ಮುಖಂಡರ ಸಮ್ಮುಖದಲ್ಲಿ ಲಕ್ಷ್ಮೀ ವೆಂಕಟೇಶ್ವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಡೊಳ್ಳು ಮತ್ತು ತಾಷಾ ಸಹಿತ ಸಕಲ ವಾದ್ಯಮೇಳಗಳೊಂದಿಗೆ ರಥೋತ್ಸವ ಪ್ರಾರಂಭವಾಯಿತು. ಬೆಳಗ್ಗೆ ದೇವಸ್ಥಾನದ ಮುಂದೆ ನಿಲ್ಲಿಸಲಾಗಿದ್ದ ರಥಕ್ಕೆ ಭಕ್ತರು ಅಲಂಕಾರ ಮಾಡಿದ್ದರು. ಅರ್ಚಕ ಭೋಗೇಶ ಇನಾಂದಾರ ಮೂರ್ತಿಗೆ ಪೂಜೆ ಸಲ್ಲಿಸಿ ನಿಗದಿ ಪಡಿಸಿದ್ದ ಮುಹೂರ್ತಕ್ಕೆ ರಥದಲ್ಲಿ ಮೂರ್ತಿ ಪ್ರತಿಷ್ಠಾಪಿಸಿದರು. ನೆರೆದಿದ್ದ ಭಕ್ತರು ಜಯಘೋಷಣೆಗಳನ್ನು ಹಾಕುವ ನಡುವೆ ರಥ ನಿಧಾನವಾಗಿ ಚೆಲಿಸಿತು. ಈ ಬಾರಿ ಎರಡನೇ ವಾರ್ಡಿನ ಉಪ್ಪಾರ ಓಣಿಯ ಮಹಿಳೆಯರ ತಂಡದ ಕೋಲಾಟ ರಥಕ್ಕೆ ಮತ್ತಷ್ಟು ಮೆರಗೂ ನೀಡಿತು. ರಥ ಹಳೇ ಬಜಾರ್‌ದಲ್ಲಿನ ಮುಖ್ಯ ರಸ್ತೆಯಲ್ಲಿ ಸಾಗಿ ಜಾಮೀಯಾ ಮಸೀದಿ ಬಳಿಯ ಎದುರು ಪಾದಗಟ್ಟೆಯವರೆಗೆ ತಲುಪಿ ಪುನಃ ದೇವಾಲಯದ ಮುಂದಿನ ಸ್ವಸ್ಥಳಕ್ಕೆ ಆಗಮಿಸಿತು. ಈ ವೇಳೆ ನೆರೆದ ಭಕ್ತರು ದಾರಿಯೂದ್ದಕ್ಕೂ ರಥಕ್ಕೆ ಪೂಜೆ ಹರಿಕೆ ಸಲ್ಲಿಸಿದರು. ಭಕ್ತರು ದಾರಿಯೂದಕ್ಕೂ ಗೋವಿಂದ ನಾಮಸ್ಮರಣೆ ಮಾಡಿದರು.

ನಂತರ ರಾತ್ರಿ ವರದರಾಜ್ ಜೋಶಿ ನೇತೃತ್ವದಲ್ಲಿ ೯ ದಿನಗಳ ಕಾಲ ವೆಂಕಟೇಶ್ವರ ಮಹಿಮೆ ಪುರಾಣ ಪ್ರವಚನ ನಡೆದು ೧೦ನೇ ದಿನ ಶನಿವಾರದಂದು ಶ್ರೀನಿವಾಸ ಕಲ್ಯಾಣದೊಂದಿಗೆ ಪ್ರವಚನ ಸಂಪನ್ನಗೊಂಡಿತು.

ಬೆಳಗ್ಗೆಯಿಂದ ದೇವಾಯದಲ್ಲಿ ಅರ್ಚಕ ಭೋಗೇಶಾಚಾರ್ಯ ಇನಾಮದಾರ ನೇತೃತ್ವದಲ್ಲಿ ವಿಶೇಷ ಪೂಜೆ, ಅಲಂಕಾರ, ಅರ್ಚನೆ, ಪಂಚಾಮೃತಾಭಿಷೇಕ, ಮಹಾ ನೈವೇದ್ಯ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಜೆಯವರೆಗೆ ನಡೆದವು.

ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ ಇಲಾಖೆ ಉಸ್ತುವಾರಿ ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ, ಗ್ರಾಮ ಲೆಕ್ಕಾಧಿಕಾರಿ ದೊಡ್ಡನಗೌಡ, ಸೇವಾ ಸಮಿತಿ ಪ್ರಮುಖರಾದ ನಾರಾಯಣಪ್ಪ ಈಡಿಗೇರ್, ಸಂಜೀವಪ್ಪ ಸಾಲೋಣಿ, ರಾಘವೇಂದ್ರ ರೇವಣಕರ್, ತಿಪ್ಪಣ್ಣ ಮೂಲಿಮನಿ, ಕಾಶಿನಾಥ ಕಂಪ್ಲಿ, ಶ್ರೀನಿವಾಸ ಗೋಮರ್ಸಿ, ಪ್ರಹ್ಲಾದ ಜೋಶಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸಹಿತ ನೂರಾರು ಭಕ್ತರು ಪಾಲ್ಗೊಂಡಿದ್ದರು. ಕಂದಾಯ ಇಲಾಖೆ ಅಧೀನದಲ್ಲಿ ದೇವಾಲಯ ಇರುವುದರಿಂದ ಸರ್ಕಾರದ ನೀತಿ ನಿಯಮದಲ್ಲಿ ಉತ್ಸವಗಳು ನಡೆದವು.

೧೨ಕೆಆರ್‌ಟಿ೧: ಕಾರಟಗಿಯ ಐತಿಹಾಸಿಕ ಲಕ್ಷ್ಮೀವೆಂಕಟೇಶ್ವರ ದೇವಾಲಯದ ರಥೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.