ಸಾರಾಂಶ
ಸರಿಸುಮಾರು 105 ವರ್ಷಗಳ ಬಳಿಕ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಸಾನ್ನಿಧ್ಯ ವೃದ್ಧಿಗಾಗಿ ಬುಧವಾರ ನಡೆದ ಶತಚಂಡಿಕಾಯಾಗವನ್ನು ಭಕ್ತಸಮೂಹ ಕಣ್ತುಂಬಿಕೊಂಡಿತು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಸರಿಸುಮಾರು 105 ವರ್ಷಗಳ ಬಳಿಕ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಹಾಗೂ ಸಾನ್ನಿಧ್ಯ ವೃದ್ಧಿಗಾಗಿ ಬುಧವಾರ ನಡೆದ ಶತಚಂಡಿಕಾಯಾಗವನ್ನು ಭಕ್ತಸಮೂಹ ಕಣ್ತುಂಬಿಕೊಂಡಿತು.ಶತಚಂಡಿಕಾಯಾಗದ ಪ್ರಯುಕ್ತ ಬ್ರಹ್ಮಶ್ರೀ ಪೊಳಲಿ ಶ್ರೀಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ಮತ್ತು ರಾಮ್ ಭಟ್, ಕೋಡಿಮಜಲು ಅನಂತ ಉಪಧ್ಯಾಯ, ಸುಬ್ರಹ್ಮಣ್ಯ ತಂತ್ರಿ, ಸುಬ್ರಹ್ಮಣ್ಯ ಕಾರಂತ್ ಕಾಟಿಪಳ್ಳ ಪೌರೋಹಿತ್ಯದಲ್ಲಿ ಮಾ.೧ರಿಂದಲೇ ಗಣಹೋಮ, ಸಪ್ತಪತಿ ಪಾರಾಯಣ, ನವಾಕ್ಷರಿ ಜಪ, ಶ್ರೀ ಚಕ್ರಪೂಹೆ ಸಹಿತ ವಿವಿಧ ವೈಧಿಕ ವಿಧಿವಿಧಾನಗಳು ನಡೆದಿದ್ದು, ಬುಧವಾರ ಬೆಳಗ್ಗೆ 6 ಗಂಟೆಗೆ ಯಾಗ ಆರಂಭಗೊಂಡು ಸುಮಾರು 12 ಗಂಟೆಗೆ ಯಾಗದ ಪೂರ್ಣಹುತಿ ನಡೆಯಿತು. ಬಳಿಕ ಶ್ರೀದೇವರಿಗೆ ಮಹಾಪೂಜೆಯ ನಂತರ ಪಲ್ಲಪೂಜೆ ನಡೆದು ಅನ್ನಸಂತರ್ಪಣೆಗೆ ಚಾಲನೆ ನೀಡಲಾಯಿತು.ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಹಾಗೂ ಸಂಸದ ಬೃಜೇಶ್ ಚೌಟ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಊಟ ಬಡಿಸಿ ಸ್ವಯಂಸೇವಕರಿಗೆ ಸ್ಫೂರ್ತಿ ನೀಡಿದರು. ನಿರೀಕ್ಷೆಗೂ ಮೀರಿ ಸುಮಾರು 30 ರಿಂದ 35 ಸಾವಿರಕ್ಕೂ ಅಧಿಕ ಮಂದಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಅನ್ನಪ್ರಸಾದ ಸ್ವೀಕರಿಸಿದರು.ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ದೇವಳದ ಆಡಳಿತ ಮೊಕ್ತೇಸರರಾದ ಡಾ.ಮಂಜಯ್ಯ ಶೆಟ್ಟಿ ಅವರು ಖುದ್ದು ಹಾಜರಿದ್ದು, ಮಾರ್ಗದರ್ಶನವಿತ್ತರು. ಬಂಟ್ವಾಳ ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ದೇವದಾಸ ಶೆಟ್ಟಿ ಉಗ್ರಾಣದ ವ್ಯವಸ್ಥೆಯನ್ನು ನೋಡಿಕೊಂಡರು.ಆರ್‌ಎಸ್‌ಎಸ್ ಮುಖಂಡರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಬಿ.ರಮಾನಾಥ ರೈ, ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಮೊದಲಾದ ಗಣ್ಯರು ಭಾಗವಹಿಸಿದ್ದರು.
ಇಂದು ದೊಡ್ಡರಂಗಪೂಜೆ:ಮಾ.6ರಂದು ಸೇವಾ ರೂಪದ ರಂಗಪೂಜೆ ಉತ್ಸವ ನಡೆಯಲಿದೆ. ರಾತ್ರಿ ವಿಶೇಷವಾಗಿ ದೇವರ ಬಲಿ ಉತ್ಸವ, ಬೆಳ್ಳಿ ರಥೋತ್ಸವ, ಚಂದ್ರಮಂಡಲ ರಥ, ಸಣ್ಣ ರಥೋತ್ಸವ, ಪಲ್ಲಕಿ ಉತ್ಸವ ನಡೆಯಲಿದೆ.