ಸಾರಾಂಶ
ದೇಶದ ಪ್ರಮುಖ ರಾಜ್ಯಗಳಲ್ಲೊಂದಾದ ಮಹಾರಾಷ್ಟ್ರದಲ್ಲಿ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಕೇವಲ ಅಧಿಕಾರಕ್ಕಾಗಿ ಮಾಡಿಕೊಂಡ ಮಹಾವಿಕಾಸ ಅಘಾಡಿಯ ಮೈತ್ರಿಯನ್ನು ಜನತೆ ತಿರಸ್ಕರಿಸಿದ್ದಾರೆ.
ಕಾರವಾರ:
ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ (ಮಹಾಯುತಿ) ಐತಿಹಾಸಿಕ ಜಯಗಳಿಸಿರುವುದು ಜನತೆ ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸದ ದ್ಯೋತಕವಾಗಿದೆ. ಭಾರೀ ಗೆಲುವಿನಿಂದ ಅತೀವ ಸಂತಸವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.ದೇಶದ ಪ್ರಮುಖ ರಾಜ್ಯಗಳಲ್ಲೊಂದಾದ ಮಹಾರಾಷ್ಟ್ರದಲ್ಲಿ ಸಿದ್ಧಾಂತಗಳನ್ನು ಗಾಳಿಗೆ ತೂರಿ, ಕೇವಲ ಅಧಿಕಾರಕ್ಕಾಗಿ ಮಾಡಿಕೊಂಡ ಮಹಾವಿಕಾಸ ಅಘಾಡಿಯ ಮೈತ್ರಿಯನ್ನು ಜನತೆ ತಿರಸ್ಕರಿಸಿದ್ದಾರೆ. ಅಲ್ಲಿನ ಬಿಜೆಪಿ ಗೆಲುವಿನಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್ನಷ್ಟು ಶಕ್ತಿ ಬಂದಂತಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಮೂರು ಕ್ಷೇತ್ರಗಳಾದ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿಗಳಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಆದರೆ ಅಧಿಕಾರದಲ್ಲಿರುವ ಪಕ್ಷಕ್ಕೆ ಜನತೆ ಮಣೆ ಹಾಕಿದ್ದಾರೆ. ಜಾರ್ಖಂಡ ರಾಜ್ಯದಲ್ಲೂ ಗೆಲ್ಲುವ ವಿಶ್ವಾಸ ಇತ್ತು. ದೇಶದ ವಿವಿಧ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಎನ್ ಡಿ ಎ ಮೈತ್ರಿಕೂಟ ಗಮನಾರ್ಹ ಸಾಧನೆ ಮಾಡಿದೆ. ಬಿಹಾರದಲ್ಲಿ ಎಲ್ಲ ನಾಲ್ಕು ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ. ಉತ್ತರ ಪ್ರದೇಶದಲ್ಲೂ ಅತಿ ಹೆಚ್ಚು ಸ್ಥಾನ ಗಳಿಸಿದೆ. ಬಿಜೆಪಿ ಮಹಾರಾಷ್ಟ್ರ ಹಾಗೂ ಇತರೆಡೆ ನಡೆದ ಉಪ ಚುನಾವಣೆಗಳಲ್ಲಿ ಅದ್ವಿತೀಯ ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದು ರೂಪಾಲಿ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.