ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಕಲ್ಲೂರು ಗ್ರಾಮದ ಬಸವಣ್ಣ ದೇವಸ್ಥಾನದ ಅವರಣದಲ್ಲಿ ವಿಜಯನಗರ ಕಾಲದ ಅಪರೂಪದ ನಂದಿಗಂಬ ದಾನ ಶಾಸನ ಪತ್ತೆಯಾಗಿದೆ.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಕಲ್ಲೂರು ಗ್ರಾಮದ ಬಸವಣ್ಣ ದೇವಸ್ಥಾನದ ಅವರಣದಲ್ಲಿ ವಿಜಯನಗರ ಕಾಲದ ಅಪರೂಪದ ನಂದಿಗಂಬ ದಾನ ಶಾಸನ ಪತ್ತೆಯಾಗಿದೆ.

ಪತ್ತೆಯಾದ ಶಾಸನ ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದ ಆಳ್ವಿಕೆ ಕಾಲದ್ದು ಎನ್ನಲಾಗಿದೆ. ಸ್ಥಳೀಯ ಇತಿಹಾಸ ಅಧ್ಯಯನಕ್ಕೆ ಮಹತ್ವದ ದಾಖಲೆ ಲಭೀಸಿದೆ.ದಾನ ಪತ್ರದಲ್ಲಿ ಕಲೂರ ನಾಡು ಎಂದು ಕಲ್ಲೂರು ಗ್ರಾಮದ ಉಲ್ಲೇಖವಿದೆ.

ಸಂಶೋಧಕ ಅದಿತ್ಯ ನಂಜುವಳ್ಳಿ, ಕೆ.ಎನ್.ಗಣೇಶ, ಪತ್ರಕರ್ತ ಎನ್.ಕಾರ್ತೀಕ್‍ ಕೌಂಡಿನ್ಯ ಶಾಸನ ಪತ್ತೆ ಹಚ್ಚಿ ಆಧ್ಯಯನ ನಡೆಸಿದ್ದಾರೆ.

ಈ ಭಾಗದ ಐತಿಹಾಸಿಕ ಹಿನ್ನೆಲೆಗೆ ಪುಷ್ಟಿ:

ಕ್ರಿ.ಶಕ 1424ರಲ್ಲಿ (ಶಕ ವರ್ಷ1346) ಮೂರನೇ ಬುಕ್ಕರಾಯನ ಮಗನಾದ ಎರಡನೇ ದೇವರಾಯನು ಆಳ್ವಿಕೆ ನಡೆಸುತ್ತಿದ್ದ ಕಾಲಘಟ್ಟದಲ್ಲಿ ಆರಗದನಾಡಿನ ವ್ಯಾಪ್ತಿಗೆ ಸೇರಿದ ಕಲೂರು ನಾಡನ್ನು ಹಂಪಿಯ ಪ್ರಸಿದ್ಧ ವಿರೂಪಾಕ್ಷ ದೇವರಿಗೆ ಅಮೃತ ಪಡಿ (ನೈವೇದ್ಯ) ಸೇವೆಗಾಗಿ ಧಾರೆಯೆರೆದು ಕೊಟ್ಟಿರುವುದಾಗಿ ಶಾಶನದಲ್ಲಿ ಉಲ್ಲೇಖವಿದೆ.

ಆ ಕಾಲದಲ್ಲಿ ದೇವಾಲಯಗಳ ನಿರ್ವಹಣೆ ಮತ್ತು ಪೂಜಾ ಕಾರ್ಯಗಳಿಗೆ ಭೂದಾನ ನೀಡುವ ಪರಂಪರೆ ಮಹತ್ವ ಪಡೆದಿತ್ತು ಎಂಬುದು ಸ್ಪಷ್ಟವಾಗಿದೆ. ವಿಜಯನಗರದ ಅರಸರಾದ ಮೂರನೇ ಬುಕ್ಕರಾಯನನ್ನು ಮಹಾರಾಜಾಧಿರಾಜ. ರಾಜಪರಮೇಶ್ವರ ಶ್ರೀವೀರಪ್ರತಾಪ ವಿಜಯಬುಕ್ಕರಾಯ ಎಂದು ಹಾಗೂ ಎರಡನೇ ದೇವರಾಯನನ್ನು ವೀರಪ್ರತಾಪ ದೇವರಾಯ ಮಹಾರಾಯ ಎಂದು ಕೊಂಡಾಡಲಾಗಿದೆ. ಈ ಬಿರುದುಗಳು ಆ ಕಾಲದ ರಾಜಕೀಯ ವೈಭವ ತ್ತು ಶೌರ್ಯವನ್ನು ಪ್ರತಿಬಿಂಬಿಸುತ್ತವೆ.

ಈ ಶಾಸನದಲ್ಲಿ ಕಲೂರನಾಡಿನ ಗಡಿಭಾಗಗಳಾಗಿ ಸುತ್ತಮುತ್ತಲಿನ ಒಡರಸುಳಿ (ವಡಾಹೊಸಳ್ಳಿ). ಬಿದರಹಳ್ಳಿ. ತಳಲ (ತಳಲೆ). ಕಣಬಂದೂರು. ಕರಡಿಗ ಮತ್ತು ಕಕರಿಯ ಗ್ರಾಮಗಳ ಉಲ್ಲೇಖವಿದೆ. ಇದರಿಂದ ಆ ಕಾಲದ ಭೌಗೋಳಿಕ ವ್ಯಾಪ್ತಿ ಮತ್ತು ಅಡಳಿತದ ಅಮೂಲ್ಯ ಮಾಹಿತಿಗಳು ಲಭ್ಯವಾಗಿವೆ.

ಶಾಸನ ಪತ್ತೆಯು ವಿಜಯನಗರ ಕಾಲದ ವೈಭವದ ಧಾರ್ಮಿಕ ದಾನ ಸಂಪ್ರದಾಯ. ಗ್ರಾಮೀಣ ಅಡಳಿತ ಮತ್ತು ಈ ಭಾಗದ ಸ್ಥಳೀಯ ಇತಿಹಾಸದ ಮೇಲೆ ಪುರಾತತ್ವದ ಮಹತ್ವ ಸ್ಪಷ್ಟಪಡಿಸಿದೆ.

ಈ ಸಂದರ್ಭದಲ್ಲಿ ಬಸವಣ್ಣ ದೇವಸ್ಥಾನದ ಆಧ್ಯಕ್ಷ ವೈ.ಟಿ.ನಾಗರಾಜ್, ಗೌರವಾಧ್ಯಕ್ಷ ಏಲಕ್ಕಿಕೊಪ್ಪ ವೀರಭದ್ರಪ್ಪಗೌಡರು. ಗಿರಿರಾಜ್‍ಗೌಡ, ಮಂಜುನಾಥ, ಅದರ್ಶಕಲ್ಲೂರು, ಶಿವಣ್ಣ, ಚಂದ್ರಹಾಸ್, ಮಲ್ಲಿಕಾರ್ಜುನ, ದಾನಪ್ಪ, ಅದರ್ಶ ಮೂಗುಡ್ತಿ ಇತರರು ಇದ್ದರು.

ವಿಜಯನಗರ ಸಾಮ್ರಾಜ್ಯದ ಆಧೀನ ರಾಜ್ಯವಾಗಿ ಅರಗನಾಡು (ಇಂದಿನ ಆರಗ) ಅಸ್ತಿತ್ವಕ್ಕೆ ಬಂದಿದೆ. ಸ್ಥಳೀಯ ಗ್ರಾಮಗಳ ಗಡಿಗಳ ಮಾಹಿತಿ ಇಲ್ಲಿ ಲಭ್ಯವಾಗಿದೆ. ಗ್ರಾಮಗಳ ವಿಸ್ತೀರ್ಣದ ಮಾಹಿತಿಗೆ ಪೂರಕ ದಾಖಲೆಯಾಗಿದೆ.

ಅದಿತ್ಯ ನಂಜುವಳ್ಳಿ ಇತಿಹಾಸ ಸಂಶೋಧಕ.

ನಮ್ಮ ಗ್ರಾಮದ ಬಸವಣ್ಣ ದೇವಸ್ಥಾನ ಜೀರ್ಣೋದ್ದಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ವಿಜಯನಗರ ಕಾಲದ ಶಾಸನ ಪತ್ತೆಯಿಂದ ಕಲ್ಲೂರು ಇತಿಹಾಸ ಅಚ್ಚಳಿಯದೆ ಉಳಿಯಲಿದೆ.

ಏಲಕ್ಕಿಕೊಪ್ಪ ವೀರಭದ್ರಪ್ಪಗೌಡರು ಗ್ರಾಮದ ಹಿರಿಯರು.