ಸಾರಾಂಶ
ಕೃಷ್ಣ ಎನ್. ಲಮಾಣಿ
ಹೊಸಪೇಟೆ: ವಿಜಯನಗರ ಅರಸರ ಕಾಲದ ಐತಿಹಾಸಿಕ ಕಮಲಾಪುರ ಕೆರೆ ನೀರು ಪಾತಾಳಕ್ಕೆ ಕುಸಿದಿದೆ. ಕೆರೆ ಬತ್ತ ತೊಡಗಿರುವ ಹಿನ್ನೆಲೆಯಲ್ಲಿ ಮೀನುಗಾರರು ಕೆರೆಯಲ್ಲಿ ಇಳಿದು ಮೀನು ಹಿಡಿಯುತ್ತಿದ್ದಾರೆ. ಇಲ್ಲಿಯೂ ಪ್ರಾಣಿ, ಪಕ್ಷಿಗಳಿಗೆ ಸಂಕಷ್ಟ ಎದುರಾಗಿದೆ.ಕಮಲಾಪುರ ಕೆರೆ ಐತಿಹಾಸಿಕ ಕೆರೆಯಾಗಿದ್ದು, ಈ ಕೆರೆ ನೀರಿನಿಂದ 1200 ಎಕರೆ ಪ್ರದೇಶದಲ್ಲಿ ನೀರಾವರಿ ಕೂಡ ಮಾಡಲಾಗುತ್ತಿದೆ. ಈಗ ಕೆರೆ ನೀರು ಪಾತಾಳಕ್ಕೆ ಇಳಿದಿರುವುದರಿಂದ ಬಾಳೆ, ಕಬ್ಬು ಬೆಳೆದಿರುವ ರೈತರು ಕೂಡ ಸಂಕಷ್ಟ ಎದುರಿಸುವಂತಾಗಿದೆ. ಕಳೆದ ವರ್ಷ ಮಳೆಯಾಗದ್ದರಿಂದ ಕಮಲಾಪುರ ಕೆರೆಯಲ್ಲೂ ನೀರು ಪಾತಾಳಕ್ಕೆ ಬಂದಿದೆ. ಈ ವರ್ಷ ಉತ್ತಮ ಮಳೆಯಾದರೆ ಕೆರೆ ಭರ್ತಿಯಾಗಲಿದೆ. ಹಾಗಾಗಿ ರೈತರು ಮೇಘರಾಜನತ್ತ ನೋಡುವಂತಾಗಿದೆ. ವರುಣದೇವ ಕೃಪೆ ತೋರಿದರೆ ಖಂಡಿತ ಕೆರೆ ಭರ್ತಿಯಾಗಲಿದ್ದು, ರೈತರು, ಪ್ರಾಣಿ, ಪಕ್ಷಿಗಳು ಮತ್ತು ಜೀವವೈವಿಧ್ಯಕ್ಕೂ ಅನುಕೂಲವಾಗಲಿದೆ.
ಯುನೆಸ್ಕೋ ಪಟ್ಟಿಯಲ್ಲಿರುವ ಕೆರೆ:ಕಮಲಾಪುರ ಕೆರೆ ಐತಿಹಾಸಿಕ ಕೆರೆಯಾಗಿರುವುದರಿಂದ ಈ ಕೆರೆ ಕೂಡ ಯುನೆಸ್ಕೋ ಪಟ್ಟಿಯಲ್ಲಿದೆ. ಹಂಪಿ ಸ್ಮಾರಕಗಳ ಗುಚ್ಛಗಳ ಸಾಲಿನಲ್ಲಿ ಈ ಕೆರೆಯೂ ಸೇರ್ಪಡೆಯಾಗಿದೆ. ಈ ಕೆರೆಯ ಪಕ್ಕದಲ್ಲಿ ರಸ್ತೆ ವಿಸ್ತರಣೆ ಮಾಡಿದ್ದರಿಂದ ಕೆರೆಯ ನೈಜ ಸ್ವರೂಪಕ್ಕೆ ಹಾಗೂ ತೂಬುಗಳಿಗೆ ಧಕ್ಕೆಯಾಗಲಿದೆ ಎಂದು ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಈ ಹಿಂದೆ ಪತ್ರ ಬರೆದು ಎಚ್ಚರಿಸಿದ್ದರು. ಹಾಗಾಗಿ ಕಮಲಾಪುರ ಕೆರೆ ರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದ್ಯತೆ ನೀಡಿವೆ.
ಈ ಕೆರೆಯನ್ನು ನೈಜ ಸ್ವರೂಪದಲ್ಲೇ ಉಳಿಸಿಕೊಳ್ಳಬೇಕೆಂಬ ಆಶಯವನ್ನು ಯುನೆಸ್ಕೋ ವ್ಯಕ್ತಪಡಿಸಿದೆ. ಹಾಗಾಗಿ ಕಮಲಾಪುರ ಕೆರೆಯಲ್ಲಿ ಬೋಟಿಂಗ್ ಸೇರಿದಂತೆ ಇತರೆ ಪ್ರವಾಸೋದ್ಯಮ ಬೆಳವಣಿಗೆಗೂ ಅವಕಾಶ ಇಲ್ಲದಾಗಿದೆ. ಇದೊಂದು ಐತಿಹಾಸಿಕ ತಾಣವಾಗಿರುವ ಹಿನ್ನೆಲೆಯಲ್ಲಿ ಕೆರೆಯನ್ನು ಮುಂದಿನ ಪೀಳಿಗೆಗೆ ಸಹಜ ರೀತಿಯಲ್ಲಿ ಉಳಿಸಬೇಕೆಂಬ ಆಶಯವನ್ನು ಯುನೆಸ್ಕೋ ಹೊಂದಿದೆ.476 ಎಕರೆ ಪ್ರದೇಶ:
ಕಮಲಾಪುರ ಕೆರೆ 476 ಎಕರೆ ವ್ಯಾಪ್ತಿ ಪ್ರದೇಶ ಹೊಂದಿದೆ. ಈ ಕೆರೆಯಲ್ಲಿ ಹೂಳು ಕೂಡ ತುಂಬಿದೆ. ಈ ಹಿಂದೆ ಹೂಳು ತೆಗೆದರೂ ಕೆರೆಯಲ್ಲಿ ಹೂಳು ಮಾತ್ರ ಹಾಗೆಯೇ ಉಳಿದಿದೆ. 1950ರಲ್ಲಿ ಈ ಕೆರೆಯಲ್ಲಿ ಮೊದಲ ಬಾರಿಗೆ ಹೂಳು ತೆಗೆಯಲಾಗಿತ್ತು. ಆ ಬಳಿಕ 80ರ ದಶಕದಲ್ಲಿ ಹೂಳು ತೆಗೆಯಲಾಗಿದೆ. ಈ ಬಳಿಕ ಎರಡ್ಮೂರು ಬಾರಿ ಹೂಳು ತೆಗೆದರೂ ಹೂಳಿನ ಗೋಳು ಹಾಗೇ ಉಳಿದಿದೆ.ವಿಜಯನಗರ ಆಳರಸರ ಕಾಲದಲ್ಲಿ ನಿರ್ಮಾಣಗೊಂಡಿರುವ ಕೆರೆಯಲ್ಲಿ ಹೂಳು ತುಂಬಿದೆ. ರೈತರಿಗೆ, ಪಕ್ಷಿ ಸಂಕುಲಕ್ಕೂ ಈ ಕೆರೆ ಆಸರೆಯಾಗಿದೆ. ಮೀನುಗಾರಿಕೆಗೂ ಕೆರೆ ಹೆಸರುವಾಸಿಯಾಗಿದೆ. ಕೆರೆಯ ಹೂಳು ತೆರವಿಗೆ ರೈತರು ಹಲವು ಬಾರಿ ಒತ್ತಾಯಿಸಿದ್ದಾರೆ.
ಕೆರೆಯಲ್ಲಿ ನೀರು ಕಡಿಮೆಯಾಗಿರುವುದರಿಂದ ಮೀನುಗಾರರು ಕೆರೆಯಲ್ಲಿ ಇಳಿದು, ಬಲೆ ಹಾಕಿ ಮೀನು ಹಿಡಿಯುತ್ತಿದ್ದಾರೆ. ಮೊದಲು ಸಣ್ಣ ತೆಪ್ಪಗಳ ಸಹಾಯದಿಂದ ಮೀನು ಹಿಡಿಯುತ್ತಿದ್ದ ಮೀನುಗಾರರು ಈಗ ಕೆರೆಯಲ್ಲಿ ಇಳಿದು ಮೀನು ಹಿಡಿಯಲಾರಂಭಿಸಿದ್ದಾರೆ. ಕೆರೆಗೆ ಎರಡ್ಮೂರು ದೊಡ್ಡ ಮಳೆಯಾದರೆ ನೀರು ಹರಿದು ಬರಲಿದೆ. ಆದರೆ, ಬರೀ ಬಿಸಿ ಗಾಳಿಯೇ ಬೀಸುತ್ತಿದೆ. ಮಳೆ ಬೀಳುವ ಲಕ್ಷಣವೇ ಕಾಣುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.ಕಮಲಾಪುರ ಕೆರೆಯಲ್ಲಿ ನೀರು ಕಡಿಮೆಯಾಗಿದೆ. ಈಗ ಕೆರೆಯಲ್ಲಿ ತುಂಬಿರುವ ಹೂಳು ತೆಗೆಸಬಹುದು. ಸಂಬಂಧಿಸಿದ ಇಲಾಖೆ ಇತ್ತ ಗಮನ ಹರಿಸಿದರೆ ಅನುಕೂಲವಾಗಲಿದೆ. ಕೆರೆ ಸಂರಕ್ಷಣೆಗೆ ಹಿಂದೆ ಹೋರಾಟ ಕೂಡ ನಡೆದಿದೆ. 1200 ಎಕರೆ ಪ್ರದೇಶಕ್ಕೆ ಕೆರೆ ನೀರು ಉಣಿಸುತ್ತಿದೆ ಎನ್ನುತ್ತಾರೆ ರೈತ ಸುರೇಶ್.