ದೇವರಿಗೆ ಜಾತಿ, ಧರ್ಮವಿಲ್ಲ, ಧರ್ಮ ಯಾವುದಾದರೇನು ತತ್ವ ಒಂದೆ. ನಾಮನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ದೇವರು- ದೇವಸ್ಥಾನ ಎಲ್ಲರ ಆಸ್ತಿ. ದೇವಸ್ಥಾನಗಳು ಯಾರೊಬ್ಬರ ಆಸ್ತಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಸಂಪಾದಿಸಿದ ಹಣದಲ್ಲಿ ಶೇ.1ರಷ್ಟು ದಾನ ಮಾಡಿ: ಡಿಸಿಎಂ ಸಲಹೆ

ದೇವರು ಕಷ್ಟದ ಜೊತೆ ಕಷ್ಟ ಎದುರಿಸುವ ಶಕ್ತಿಯೂ ಕೊಡುತ್ತಾನೆ

---

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ದೇವರಿಗೆ ಜಾತಿ, ಧರ್ಮವಿಲ್ಲ, ಧರ್ಮ ಯಾವುದಾದರೇನು ತತ್ವ ಒಂದೆ. ನಾಮನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ. ದೇವರು- ದೇವಸ್ಥಾನ ಎಲ್ಲರ ಆಸ್ತಿ. ದೇವಸ್ಥಾನಗಳು ಯಾರೊಬ್ಬರ ಆಸ್ತಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಅವರು ಮಧ್ಯರಂಗ ದೇವಾಲಯದ ಒಳಾಂಗಣದಲ್ಲಿ ಪೂಜೆ ಬಳಿಕ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಸರ್ಕಾರ ಹಾಗೂ ದಾನಿಗಳ ಸಹಕಾರದೊಂದಿಗೆ ಮಧ್ಯರಂಗನ ಸನ್ನಿಧಿ ಜೋರ್ಣೋದ್ಧಾರಗೊಂಡಿದೆ. ಈ ದೇಗುಲದ ಜೋರ್ಣೋದ್ಧಾರಕ್ಕೆ ಸರ್ಕಾರದ ಜೊತೆ ಕೈಜೋಡಿಸಿದ ದಾನಿ ಮಹೇಶ್ ಅವರ ಪತ್ನಿ ರಾಧಿಕ ಮತ್ತು ಕುಟುಂಬಕ್ಕೆ ಶುಭವಾಗಲಿ, ಅವರ ಇಷ್ಠಾರ್ಥಗಳನ್ನು ಭಗವಂತ ಈಡೇರಿಸಲಿ. ರಂಗನಾಥಸ್ವಾಮಿಯ ಸೇವಾ ಭಾಗ್ಯ ದಾನಿಗಳಿಗೆ ಒಲಿದು ಬಂದಿರುವುದು ಅವರಿಗೊಲಿದ ಪುಣ್ಯದ ಕೆಲಸ ಎಂದರು.ಆದಿರಂಗ, ಮಧ್ಯರಂಗ, ಅಂತ್ಯರಂಗನನ್ನು ಒಂದೇ ದಿನ ದರ್ಶನ ಮಾಡಿದರೆ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ಪ್ರತೀತಿ. ನಾನು ಸಹ ಒಂದೇ ದಿನದಲ್ಲಿ ದರ್ಶನ ಮಾಡಿದ್ದೇನೆ.

ಇಂದು ಇತಿಹಾಸ ಪ್ರಸಿದ್ಧ ಮಧ್ಯರಂಗ ದೇವಾಲಯದಲ್ಲಿ ಅರ್ಚಕರ ನೇತೃತ್ವದಲ್ಲಿ ವಿಶೇಷ ರೀತಿ ಪೂಜಾ ಕೈಂಕರ್ಯಗಳು ಸಾಗಿರುವುದು ಸಂತಸದ ವಿಚಾರ ಎಂದರು.

ದೇವರು ನಮಗೆ ಕಷ್ಟವನ್ನು ಕೊಡುತ್ತಾನೆ. ಜೊತೆಗೆ ನಿವಾರಣೆಗೆ ಶಕ್ತಿಯನ್ನು ಕೊಡುತ್ತಾನೆ. ಅದೇ ರೀತಿಯಲ್ಲಿ

ದೇವರು ಅವಕಾಶ ನೀಡುತ್ತಾನೆ, ವರವನ್ನಾಗಲಿ, ಶಾಪವನ್ನಾಗಲಿ ನೀಡಲ್ಲ. ನೀವು ಸಂಪಾದಿಸುವ ಹಣದಲ್ಲಿ ಶೇ. 1ರಷ್ಟನ್ನು ಭಗವಂತನಿಗೆ ಸಮರ್ಪಿಸಿ ಅವರ ಕೖಪೆಗೆ ಎಲ್ಲರೂ ಪಾತ್ರರಾಗಿ, ದಾರಿ ತೋರಿಸುವುದು ದೇವರ ಕೆಲಸ, ಗುರಿ ಮುಟ್ಟುವುದು ನಮ್ಮೆಲ್ಲರ ಕೆಲಸವೂ ಆಗಿದೆ ಎಂದರು.

---

ಚಾಮರಾಜನಗರ ಜಿಲ್ಲೆ ದೇವರ ನಾಡು, ಮಲೆ ಮಹದೇಶ್ವರ, ಚಾಮರಾಜೇಶ್ವರ, ಬಿಳಿಗಿರಿರಂಗನ ಬೆಟ್ಟ, ಗೋಪಾಲಸ್ವಾಮಿ, ಮಧ್ಯರಂಗ ಬೆಟ್ಟಗಳಿಂದ ಕೂಡಿರುವ ಸೊಬಗಿನ ಹಾಗೂ ಕಾವೇರಿ ಸೊಬಗಿನ ಹೆಮ್ಮೆಯ ಸಂಪದ್ಭರಿತ ಜಿಲ್ಲೆ ಇದಾಗಿದೆ.

ಕಾವೇರಿ ನದಿ ಸಮೀಪದಲ್ಲಿ ದೇವರ ಸನ್ನಿಧಿ ಇರುವುದು ಸಹ ನಮ್ಮೆಲ್ಲರ ಪುಣ್ಯ ಎಂದರು.

ಇದೆ ವೇಳೆ ಕಾರ್ಯಕ್ರಮದಲ್ಲಿ ದಾನಿಗಳು ಹಾಗೂ ಜಿಲ್ಲೆಯ ಶಾಸಕರಾದ ಕೃಷ್ಣಮೂರ್ತಿ, ಎಂ.ಆರ್‌. ಮಂಜುನಾಥ್ ಹಾಗೂ ಸಿ. ಪುಟ್ಟರಂಗಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾಡಳಿತದ ವತಿಯಿಂದ ಉಪಮುಖ್ಯಮಂತ್ರಿಗಳಿಗೆ ಗೌರವ ಸಲ್ಲಿಸಲಾಯಿತು. ಬಳಿಕ ಡಿ.ಕೆ. ಶಿವಕುಮಾರ್‌ ಅವರ ಅಭಿಮಾನಿಗಳು ಸಲ್ಲಿಸಿದರು.

---

ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬುದು ಮೌಢ್ಯ. ಇದು

ದೇವರ ನಾಡು. ಪ್ರಕೃತಿ ಸಂಪತ್ಭರಿತ ಜಿಲ್ಲೆ ಇದಾಗಿದೆ. ದೇವರಿಗೆ ಜಾತಿ, ಧರ್ಮವಿಲ್ಲ, ದೇವರು- ದೇವಸ್ಥಾನ ಯಾರೊಬ್ಬರ ಸ್ವತ್ತಲ್ಲ.

- ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ