24ರಂದು ಐತಿಹಾಸಿಕ ಪಚ್ಚೆಲಿಂಗ ದರ್ಶನ: ಡಾ.ಮಹೇಶ್ವರ ಶ್ರೀ

| Published : Oct 19 2023, 12:45 AM IST

ಸಾರಾಂಶ

ಕೆಳದಿ ಅರಸರು ಪಚ್ಚೆಲಿಂಗವನ್ನು ಕೆಳದಿ ರಾಜಗುರು ಹಿರೇಮಠಕ್ಕೆ ಕೊಡುಗೆಯಾಗಿ ನೀಡಿದ್ದರು
ಸಾಗರ: ಐತಿಹಾಸಿಕ ಪಚ್ಚೆಲಿಂಗವನ್ನು ಅ.24ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತಿದೆ. ಭಕ್ತರು ಪಚ್ಚೆಲಿಂಗ ದರ್ಶನ ಪಡೆದು, ಸಂಕಷ್ಟಗಳಿಂದ ಪಾರಾಗಬೇಕು ಎಂದು ಕೆಳದಿ ರಾಜಗುರು ಹಿರೇಮಠದ ಡಾ.ಮಹೇಶ್ವರ ಶಿವಾಚಾರ್ಯ ಶ್ರೀ ನುಡಿದರು. ನವರಾತ್ರಿ ಅಂಗವಾಗಿ ತಾಲೂಕಿನ ಕೆಳದಿ ಬಂದಗದ್ದೆ ರಾಜಗುರು ಹಿರೇಮಠದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಕೆಳದಿ ಅರಸರು ಪಚ್ಚೆಲಿಂಗವನ್ನು ಕೆಳದಿ ರಾಜಗುರು ಹಿರೇಮಠಕ್ಕೆ ಕೊಡುಗೆಯಾಗಿ ನೀಡಿದ್ದರು. ಅದನ್ನು ಪ್ರತಿವರ್ಷ ವಿಜಯದಶಮಿಯಂದು ಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದರು. ನವರಾತ್ರಿ ಪ್ರಯುಕ್ತ ಶ್ರೀಮಠದಲ್ಲಿ ಅ.22ರಂದು ಲಿಂಗೈಕ್ಯ ಡಾ. ಗುರುಸಿದ್ದದೇವ ಶಿವಾಚಾರ್ಯ ಸ್ವಾಮಿಗಳ 14ನೇ ವರ್ಷದ ಪುಣ್ಯಾರಾಧನೆ ಹಾಗೂ ಶ್ರೀಮಠದ ಚೌಡೇಶ್ವರಿಗೆ ಉಡಿ ತುಂಬುವ ಕಾರ್ಯಕ್ರಮ ಇರುತ್ತದೆ. ಶ್ರೀದೇವಿಗೆ ಉಡಿ ತುಂಬಿದ 18 ದ್ರವ್ಯಾದಿ ಧಾನ್ಯಗಳನ್ನು ಒಳಗೊಂಡ 2 ಸಾವಿರಕ್ಕೂ ಹೆಚ್ಚಿನ ಉಡಿಯನ್ನು ಭಕ್ತಾದಿಗಳಿಗೆ ವಿತರಣೆ ಮಾಡಿ, ಆಶೀರ್ವಾದ ಮಾಡಲಾಗುತ್ತದೆ. ಅ.23ರಂದು ಸಂಜೆ 6.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. 24ರಂದು ಪಚ್ಚೆಲಿಂಗ ದರ್ಶನದ ಜೊತೆಗೆ ಮಧ್ಯಾಹ್ನ 2 ಗಂಟೆಗೆ ಭಾವೈಕ್ಯ ಧರ್ಮ ಸಮ್ಮೇಳನ ಏರ್ಪಡಿಸಲಾಗಿದೆ. ಈ ಸಮ್ಮೇಳನದಲ್ಲಿ ವಿವಿಧ ಮಠಾಧೀಶರು, ಸಚಿವರು, ಸಂಸದರು, ಶಾಸಕರು, ಗಣ್ಯಮಾನ್ಯರು ಪಾಲ್ಗೊಳ್ಳಲಿದ್ದಾರೆ. ಅನಂತರ ಬನ್ನಿ ಮುಡಿಯುವ ಸೀಮೋಲ್ಲಂಘನೆ ಕಾರ್ಯಕ್ರಮ ನಡೆಯಲಿದೆ. ಶ್ರೀಮಠದಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ, ಪಚ್ಚೆಲಿಂಗ ದರ್ಶನಕ್ಕೆ ಸ್ಥಳೀಯ ಭಕ್ತರ ಜೊತೆಗೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತಾದಿಗಳು ಬರುತ್ತಾರೆ. ಶ್ರೀಮಠದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಳ್ಳಲು ಮನವಿ ಮಾಡಿದರು. ಮಹಾರಾಷ್ಟ್ರ ನಾಂದೇಡ ಮಠದ ಶ್ರೀ ನೀಲಕಂಠ ಲಿಂಗ ಶಿವಾಚಾರ್ಯರು, ಉತ್ಸವ ಸಮಿತಿಯ ಅನಿಲ್ ಕುಮಾರ್ ಬರದವಳ್ಳಿ, ವಿರೂಪಾಕ್ಷ ಇನ್ನಿತರರು ಹಾಜರಿದ್ದರು. - - - (** ಈ ಫೋಟೋ ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು) -17ಕೆಎಸ್‌ಎಜಿ3: ನವರಾತ್ರಿ ಅಂಗವಾಗಿ ಸಾಗರ ತಾಲೂಕಿನ ಕೆಳದಿ ಬಂದಗದ್ದೆ ರಾಜಗುರು ಹಿರೇಮಠದಲ್ಲಿ ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.