ಸಾರಾಂಶ
ಕನ್ನಡಪ್ರಭ ವಾರ್ತೆ ಯಲ್ಲಾಪುರ
ತಾಲೂಕಿನ ಕನ್ನಡಗಲ್ ಗ್ರಾಮದ ಮಾವಳ್ಳಿ ಮತ್ತು ಚಿಕ್ಕಮಾವಳ್ಳಿಯಲ್ಲಿ ಹಲವು ಶಿಲಾಶಾಸನಗಳು, ಭುವನೇಶ್ವರಿ ದೇವಿಯ ಮಂದಿರ, ನಂದಿ ಹೀಗೆ ಹತ್ತಾರು ಇತಿಹಾಸದ ಕುರುಹುಗಳು ಲಭಿಸಿವೆ. ಅದನ್ನು ಸರ್ಕಾರ ಉತ್ಖನನ ಮಾಡಿದರೆ ಸಂಪೂರ್ಣವಾದ ಪ್ರಾಚೀನ ಇತಿಹಾಸ ಪಡೆದುಕೊಳ್ಳಬಹುದು ಎಂಬುದನ್ನು ಮೋಡಿಲಿಪಿಯ ತಜ್ಞ, ಸಂಶೋಧಕರೂ ಆದ ಡಾ. ಸಂಗಮೇಶ ಕಲ್ಯಾಣಿ ಮುಧೋಳ ಮಾಧ್ಯಮಕ್ಕೆ ಪ್ರಾತ್ಯಕ್ಷಿಕ ಮಾಹಿತಿಗಳನ್ನು ಆಧಾರವಾಗಿ ತೋರಿಸಿ, ದೃಢೀಕರಿಸಿದರು.ಮಂಗಳವಾರ ಮಾವಳ್ಳಿ ಮತ್ತು ಚಿಕ್ಕಮಾವಳ್ಳಿಯ ಸ್ಥಳೀಯರ ಸಹಕಾರದಲ್ಲಿ ಅನೇಕ ವೀರಗಲ್ಲನ್ನು ಪರಿಶೀಲಿಸಿ, ಮಾಧ್ಯಮಕ್ಕೆ ಮಾಹಿತಿ ನೀಡಿದರು.
ಅಲ್ಲಿರುವ ಶಿಲೆಯಲ್ಲಿ ಬರೆಯಲ್ಪಟ್ಟಂತೆ ತ್ರಿಭುವನಮಲ್ಲ ರಾಜ ಈ ಪ್ರದೇಶವನ್ನು ಆಳಿರುವುದು ಸ್ಪಷ್ಟವಾಗುತ್ತದೆ. ೫ ನೇ ವಿಕ್ರಮಾದಿತ್ಯನ ಕಾಲದ ತ್ರಿಭುವನಮಲ್ಲ ಯುದ್ಧದ ವಿಜಯದ ಸಂಕೇತದ ನೆನಪಿಗೆ ಕಲ್ಲಿನ ಮೇಲೆ ಕೆತ್ತಿಸಿದ್ದರು. ಒಂದು ಕಲ್ಲಿನ ಮೇಲೆ ಕಾಲಿನಲ್ಲಿ ವ್ಯಕ್ತಿಯನ್ನು ತುಳಿಯುತ್ತಿದ್ದರೆ, ಕುದುರೆಯೇರಿ ಹೋಗುತ್ತಿರುವ ದೃಶ್ಯವೂ ಸ್ಪಷ್ಟವಾಗಿ ಗೋಚರಿಸುತ್ತದೆ. ಇನ್ನೊಂದೆಡೆ ನಂದಿ ಮೂರ್ತಿಯನ್ನು ಕಾಣಬಹುದು. ಅದನ್ನು ಗಮನಿಸಿದರೆ ಇಲ್ಲಿ ಈಶ್ವರ ಗುಡಿ ಇರುವುದನ್ನು ಅವರು ಪ್ರತಿಪಾದಿಸಿದರು. ಅಲ್ಲದೇ, ಅಲ್ಲಿಯೇ ಸಮೀಪದ ಕಾಡಿನ ಮಧ್ಯ ಸ್ವಲ್ಪ ಎತ್ತರ ಭಾಗದಲ್ಲಿ ಭುವನೇಶ್ವರೀ ದೇವಿಯ ಗುಡಿ ಇತ್ತು ಎಂಬುದಕ್ಕೆ ಕರ್ಣಮುಚ್ಚಳವಿರುವುದರಿಂದ ಸಾಕ್ಷಿ ದೊರೆತಿದೆ. ಪಕ್ಕದಲ್ಲಿ ಪುಷ್ಕರಣಿ ಇದೆ. ಅಲ್ಲದೇ, ಈ ಭುವನೇಶ್ವರಿ ಗುಡ್ಡದಲ್ಲಿ ಒಂದು ವಿಶೇಷವಾದ ಬಳ್ಳಿ ಇದೆ. ಆ ಬಳ್ಳಿಯ ಎಲೆಗಳನ್ನು ನೋಡಿದರೆ ಅದು ಮುತುಗದ (ಪಲಾಶ) ಎಲೆಯನ್ನು ಹೋಲುತ್ತದೆ. ಸ್ಥಳೀಯರು ಹೇಳುವಂತೆ ಈ ಬಳ್ಳಿಯ ಗಿಡ ನಮ್ಮ ಪ್ರದೇಶದಲ್ಲೆಲ್ಲೂ ಇಲ್ಲ, ಇಲ್ಲೊಂದೆ ಇದೆ.ರಾಜರು ಯುದ್ಧದಲ್ಲಿ ಗೆದ್ದರೆ ಜಯಲಕ್ಷ್ಮೀ ವರಿಸುವಂತೆ ಕಲ್ಲಿನಲ್ಲಿ ಚಿತ್ರಣ ಮಾಡುವ ಪರಂಪರೆ ಇತ್ತು. ಹಾಗೆ ಸೋತರೆ ವೀರಮರಣ ಎಂಬುದನ್ನು ಕೂಡ ಕಲ್ಲಿನ ಮೇಲೆ ಕೆತ್ತಿರುವುದನ್ನು ಕಾಣಬಹುದಾಗಿದೆ. ಎಲ್ಲಿ ಶಿಲೆಯ ಮೇಲೆ ಕೈ ಎತ್ತಿದರೆ ಸ್ತ್ರೀ ಪ್ರಭುತ್ವ ಎನ್ನುವುದನ್ನು ಕಾಣಬಹುದು. ಆದರೆ ಅದು ಇಲ್ಲಿಲ್ಲ ಎಂಬುದನ್ನು ಸಂಶೋಧಕರು ತಿಳಿಸಿದರು. ಹಾಗಾಗಿ ಇದು ೫ನೇ ವಿಕ್ರಮಾದಿತ್ಯನ ಕಾಲದ್ದು ಎನ್ನುವುದಕ್ಕೆ ಎಲ್ಲ ಆಧಾರಗಳು ಲಭಿಸುತ್ತವೆ. ಅಲ್ಲದೇ ಬಸವಣ್ಣನ ಎಡಗಾಲು ಮುಂದೆ ಇದ್ದರೆ ಶಿವಲಿಂಗ ಇದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ. ಬಲಗಾಲು ಮುಂದೆ ಇದ್ದರೆ ಇದು ಸಮಾಧಿ ಸ್ಥಳ ಎನ್ನುವುದಕ್ಕೆ ಪುಷ್ಟಿ ನೀಡುತ್ತದೆ. ೧೦೨೮-೧೦೫೬ ರ ಅವಧಿಯಲ್ಲಿ ಇರಬಹುದೆಂಬುದು ಇಲ್ಲಿನ ಶಾಸನಗಳಿಂದ ಕಂಡುಕೊಳ್ಳಬಹುದು. ಕದಂಬರು, ಜೈನರ ಕಾಲದ ಚಿತ್ರಣ ಹೋಲುತ್ತದೆ. ಇನ್ನೊಂದು ಕಲ್ಲಿನಲ್ಲಿ ಬಲ್ಲಾಳದೇವ, ಒಂದಲ್ಸದೇವ, ಬೊಮ್ಮಣನಾಯಕ, ಸಣ್ಣನಾಯಕ, ತಮ್ಮನಾಯಕ ಇಂತಹ ಬರೆಹಗಳು ಕೂಡ ಇಲ್ಲಿ ಕೆತ್ತಲ್ಪಟ್ಟಿದೆ. ಈ ಕುರಿತು ಸರ್ಕಾರ ಪ್ರಾಚ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ ರಾಜ್ಯದ ಇತಿಹಾಸವನ್ನು ಭವಿಷ್ಯತ್ತಿಗಾಗಿ ಉತ್ಖನನ ಮಾಡಿ, ಇದನ್ನು ತೆಗೆಯಬೇಕಾದ ತೀರಾ ಅಗತ್ಯತೆಯಿದೆ. ಮತ್ತು ಜೈನರು, ಶೈವರು ಇಲ್ಲಿ ಇದ್ದರೆನ್ನುವುದು ಕೂಡ ಇಲ್ಲಿನ ಕುರುಹುಗಳಿಂದ ಪತ್ತೆಯಾಗಿದೆ ಎಂದರು.
ಈ ಪ್ರದೇಶದಲ್ಲಿ ಅಧ್ಯಯನದ ಕೊರತೆಯಿದೆ. ಇಲ್ಲಿರುವ ಕೆಲವು ಇತಿಹಾಸದ ಮುಖಗಳನ್ನು ನೋಡಿದಾಗ ೫ನೇ ವಿಕ್ರಮಾದಿತ್ಯನ ಶಾಸನ ಮತ್ತು ತ್ರಿಭುವನಮಲ್ಲ ಎಂಬ ಹೆಸರು ಇದೆ. ಇದಕ್ಕೆ ಸಂಬಂಧಿಸಿದ ಅನೇಕ ಶಾಸನಗಳು ಇಲ್ಲಿ ತುಂಡುತುಂಡಾಗಿ ಬಿದ್ದಿವೆ. ಇವುಗಳ ಸಂರಕ್ಷಣೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ಅರಣ್ಯ ಪ್ರದೇಶದಲ್ಲಿ ಇದು ಅನಾಥವಾಗಿ ಬಿದ್ದಿರುವುದರಿಂದ ಸರ್ಕಾರ ಎಚ್ಚೆತ್ತು ಕೆಲಸ ಮಾಡಬೇಕಾಗಿದೆ ಎಂದು ಡಾ. ಸಂಗಮೇಶ ಕಲ್ಯಾಣಿ ಮುಧೋಳ ತಿಳಿಸಿದರು.ಸ್ಥಳೀಯರಾದ ಶೇಷಗಿರಿ ಹೆಗಡೆ ೩೩ ಏಕರೆ ಪ್ರದೇಶ ಸರ್ಕಾರಿ ಗಾಂವ್ಟಾಣಾ ಎಂಬುದು ಕೂಡ ಇದೆ ಎನ್ನುವುದನ್ನು ತಿಳಿಸಿದರು.
ಗುರುಪಾದಯ್ಯ ನಂದೊಳ್ಳಿಮಠ, ಸಂತೋಷ ಗುಡಿಗಾರ, ಎಂ.ಎಸ್.ಹೆಗಡೆ, ವಿಘ್ನೇಶ್ವರ ಹೆಗಡೆ, ಗಣಪತಿ ಹೆಗಡೆ, ಸಿದ್ಧಾರ್ಥ ನಂದೊಳ್ಳಿಮಠ, ನಾಗರಾಜ ಹೆಗಡೆ, ದೀಪಕ ನಾಯ್ಕ, ಗಣಪತಿ ಮರಾಠಿ, ಅಕ್ಷಯ ಮರಾಠಿ, ನಾಗರಾಜ ನಾಯ್ಕ, ನಂದೀಶ ಮರಾಠಿ ಸಹಕರಿಸಿದರು.;Resize=(128,128))
;Resize=(128,128))
;Resize=(128,128))