ಸಾರಾಂಶ
ದೊಡ್ಡಬಳ್ಳಾಪುರ: ಇಲ್ಲಿನ ಇತಿಹಾಸ ಪ್ರಸಿದ್ದ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು. ಹಲವೆಡೆಗಳಿಂದ ಆಗಮಿಸಿದ್ದ ಭಕ್ತರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ಭಕ್ತಾದಿಗಳು ಶ್ರೀಸ್ವಾಮಿಗೆ ಹಣ್ಣು-ಧವನ ಅರ್ಪಿಸಿ ಭಕ್ತಿಭಾವ ಮೆರೆದರು.
ದೊಡ್ಡಬಳ್ಳಾಪುರ: ಇಲ್ಲಿನ ಇತಿಹಾಸ ಪ್ರಸಿದ್ದ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಶನಿವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು. ಹಲವೆಡೆಗಳಿಂದ ಆಗಮಿಸಿದ್ದ ಭಕ್ತರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ಭಕ್ತಾದಿಗಳು ಶ್ರೀಸ್ವಾಮಿಗೆ ಹಣ್ಣು-ಧವನ ಅರ್ಪಿಸಿ ಭಕ್ತಿಭಾವ ಮೆರೆದರು.
ಈ ಭಾಗದಲ್ಲೇ ಅತಿ ವಿಶೇಷ ಎನಿಸುವ ಮಾದರಿಯಲ್ಲಿ ನಿರ್ಮಾಣವಾಗುವ ಈ ರಥಕ್ಕೆ ಶತಮಾನದ ಇತಿಹಾಸವಿದೆ. ಕ್ರಿ.ಶ.1769ರ ಸುಮಾರಿನಲ್ಲಿ ನಿರ್ಮಾಣವಾಗಿರುವ ಈ ದೇಗುಲ ಇಂಡೋ ಸಾರ್ಸೆನಿಕ್ ವಾಸ್ತುಶೈಲಿಗೆ ಅಪರೂಪದ ಉದಾಹರಣೆ. ದೇವಾಲಯ ಒಳಪ್ರಾಂಗಣದಲ್ಲಿ ಕಾಣಸಿಗುವ ಗಾರೆಯಿಂದ ನಿರ್ಮಿತ ಅತ್ಯಂತ ಸೂಕ್ಷ್ಮ ಕೆತ್ತನೆಗಳು ಇತಿಹಾಸ ಹಾಗೂ ವಾಸ್ತುಪ್ರಿಯರನ್ನು ಸೆಳೆಯುತ್ತವೆ. ಅಲ್ಲದೆ ಇಡೀ ಜಿಲ್ಲೆಯ ಅತ್ಯಂತ ದೊಡ್ಡ ದೇವಾಲಯ ಎಂಬ ಹೆಗ್ಗಳಿಕೆಯನ್ನೂ ಹೊಂದಿರುವ ಈ ದೇವಾಲಯದಲ್ಲಿ ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಬ್ರಹ್ಮರಥೋತ್ಸವ ನಡೆದುಕೊಂಡು ಬರುತ್ತಿದೆ.ಐದಂತಸ್ತಿನ ಭವ್ಯತೇರು :
ಇದು ಅತ್ಯಂತ ರಮಣೀಯ ತೇರು. ಅಂತಸ್ತುಗಳೋಪಾದಿಯಲ್ಲಿ ಕಟ್ಟಲ್ಪಡುವ ಈ ರಥ ೬ ಅಡಿ ಎತ್ತರದ ನಾಲ್ಕು ಬೃಹತ್‌ಕಲ್ಲಿನ ಚಕ್ರಗಳ ಮೇಲೆ ನಿರ್ಮಾಣಗೊಳ್ಳುತ್ತದೆ. 1910ರಲ್ಲಿ ಅಮಾವಾಸ್ಯೆ ನಂಜುಂಡಯ್ಯ ಎಂಬುವವರು ನಿರ್ಮಿಸಿಕೊಟ್ಟಿದ್ದ ಈ ತೇರನ್ನು, ಕಳೆದ 6 ವರ್ಷಗಳ ಹಿಂದೆಯಷ್ಟೇ ದೇವಾಲಯ ಸಮಿತಿ ಹೊಸದಾಗಿ ನವೀಕರಿಸಿ ನಿರ್ಮಿಸಿದೆ. ವಿಷ್ಣುವಿನ ವಿವಿಧ ಅವತಾರಗಳನ್ನು ಬಿಂಬಿಸುವ ಚಿತ್ರಪಟಗಳಿಂದ ಅಲಂಕರಿಸಲ್ಪಡುವ ತೇರಿಗೆ ಶಿಖರಪ್ರಾಯವಾಗಿ ಐದು ಕಳಶಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.ದೇವಾಲಯದಲ್ಲಿ ಜನಜಾತ್ರೆ :
ರಥೋತ್ಸವ ಅಂಗವಾಗಿ ದೇವಾಲಯದಲ್ಲಿ ಸಂಭ್ರಮ ಮನೆ ಮಾಡಿತ್ತು. ದೇವಾಲಯದಲ್ಲಿರುವ ಶ್ರೀಸ್ವಾಮಿಗೆ ವಿಶೇಷ ವಜ್ರಾಂಗಿ ಅಲಂಕಾರ ಮಾಡಲಾಗಿತ್ತು. ವಜ್ರಖಚಿತ ಆಭರಣಗಳಿಂದ ಶ್ರೀಸ್ವಾಮಿಯನ್ನು ಅಲಂಕರಿಸಿದ್ದ ದೃಶ್ಯ ಭಕ್ತಾದಿಗಳ ಆಕರ್ಷಣೆಗೆ ಪಾತ್ರವಾಯಿತು.ದೇವಾಲಯದ ಮೂಲದೇವರಾಗಿರುವ ಲಕ್ಷ್ಮೀಪದ್ಮಾವತಿ ಸಹಿತ ಶ್ರೀವೆಂಕಟೇಶ್ವರ ಸ್ವಾಮಿಗೆ ಕೂಡ ವಿಶೇಷ ಪೂಜಾಲಂಕಾರಗಳು ನಡೆದವು. ಬೆಳಗ್ಗಿನಿಂದಲೂ ಸಾವಿರಾರು ಭಕ್ತಾದಿಗಳು ಸರತಿಯಲ್ಲಿ ನಿಂತು ದೇವರದರ್ಶನ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ರಥೋತ್ಸವದ ನಂತರ ಧೂಳ್ಯುತ್ಸವ ನಡೆಯಿತು.ಬಿಗಿ ಭದ್ರತೆ:
ರಥೋತ್ಸವದಲ್ಲಿ ಅಸಂಖ್ಯಾತ ಭಕ್ತಾದಿಗಳು ಪಾಲ್ಗೊಂಡಿದ್ದು, ಅಗತ್ಯ ಭದ್ರತೆ ಕಲ್ಪಿಸಲಾಗಿದೆ. ಪೊಲೀಸ್ ಇಲಾಖೆ ಅಲ್ಲಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಅಪರಾಧ ಕೃತ್ಯಗಳ ಬಗ್ಗೆ ತೀವ್ರ ನಿಗಾ ವಹಿಸಿದೆ. ನಗರದಲ್ಲಿ ಸರಗಳ್ಳತನಹ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ವಿಶೇಷ ಕಣ್ಗಾವಲು ವ್ಯವಸ್ಥೆ ಮಾಡಿದ್ದಾರೆ.ಹಾಲಿ, ಮಾಜಿ ಶಾಸಕರಿಂದ ಪೂಜೆ:
ರಥೋತ್ಸವ ಅಂಗವಾಗಿ ದೇವಾಲಯಕ್ಕೆ ಶಾಸಕ ಧೀರಜ್ ಮುನಿರಾಜ್ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ರಥೋತ್ಸವದಲ್ಲಿ ಭಾಗಿಯಾದರು. ಮಾಜಿ ಶಾಸಕ ಟಿ.ವೆಂಟರಮಣಯ್ಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಿದರು. ತಹಶೀಲ್ದಾರ್ ವಿಭಾ ವಿದ್ಯಾ ರಾಥೋಡ್ ಸೇರಿದಂತೆ ತಾಲೂಕು, ಉಪವಿಭಾಗ, ನಗರಸಭೆ ಆಡಳಿತದ ಅಧಿಕಾರಿಗಳು, ಸಿಬ್ಬಂದಿ ಭಾಗಿಯಾದರು.ಬಾಕ್ಸ್..........ಇಂದು ಹಗಲು ಪರಿಷೆ:
ರಥೋತ್ಸವದ ನಂತರದ ದಿನ ಫೆ.25ರ ಭಾನುವಾರ ಹಗಲು ಪರಿಷೆ ನಡೆಯಲಿದೆ. ಸಾವಿರಾರು ಜನ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಸಂಜೆ ಅಶ್ವವಾಹನೋತ್ಸವ ನಡೆಯಲಿವೆ. ದೇವಾಲಯ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಗೆ ಸೇರಿದ್ದು, ಸರ್ಕಾರದ ಹಾಗೂ ಭಕ್ತಾದಿಗಳ ವತಿಯಿಂದ ಕಾರ್‍ಯಕ್ರಮಗಳು ನಡೆದವು. ಶ್ರೀನಿವಾಸ ಗೋಪಾಲ ಭಟ್ಟರ್ ಪ್ರಧಾನ ಅರ್ಚಕತ್ವದಲ್ಲಿ ಧಾರ್ಮಿಕ ಕಾರ್‍ಯಕ್ರಮಗಳು ನಡೆಯುತ್ತವೆ.24ಕೆಡಿಬಿಪಿ3- ದೊಡ್ಡಬಳ್ಳಾಪುರದ ಇತಿಹಾಸ ಪ್ರಸಿದ್ದ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮದಿಂದ ನಡೆಯಿತು.--24ಕೆಡಿಬಿಪಿ4- ಐದು ಅಂತಸ್ತುಗಳ ಬೃಹತ್ ಭವ್ಯ ತೇರು ದೊಡ್ಡಬಳ್ಳಾಪುರದ ವೆಂಕಟರಮಣರಥೋತ್ಸವದ ಪ್ರಮುಖ ಆಕರ್ಷಣೆ.--24ಕೆಡಿಬಿಪಿ5- ರಥೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ವೆಂಕಟರಮಣಸ್ವಾಮಿಗೆ ವಜ್ರ ಕವಚ ಧಾರಣೆ ವಿಶೇಷಾಲಂಕಾರ.--24ಕೆಡಿಬಿಪಿ6- ದೊಡ್ಡಬಳ್ಳಾಪುರದ ಇತಿಹಾಸ ಪ್ರಸಿದ್ದ ವೆಂಕಟರಮಣ ರಥೋತ್ಸವ ಉತ್ಸವ ಮೂರ್ತಿಗೆ ವಿಶೇಷ ಪೂಜೆ.