"1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, 1861–1865ರ ಅಮೆರಿಕದ ಅಂತರ್ಯುದ್ಧ ಹಾಗೂ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ (ನೂರು ವರ್ಷಗಳ ಏಕಾಂತ) ಕಾದಂಬರಿ—ಈ ಮೂರೂ ಮಾನವನ ಸ್ವಾತಂತ್ರ್ಯದ ಹಂಬಲ, ಅಧಿಕಾರದ ಅಂಧತೆ ಮತ್ತು ಯುದ್ಧದ ನಂತರ ಉಳಿಯುವ ಶೂನ್ಯತೆಯನ್ನು ವಿಭಿನ್ನ ನೆಲೆಗಳಲ್ಲಿ ಮುಖಾಮುಖಿಯಾಗಿಸುತ್ತವೆ. ಸಾಹಿತಿಯೂ ಆಗಿರುವ ರಾಜಣ್ಣ ರಾಶಿಯವರು ಭಾರತದ ಇತಿಹಾಸವನ್ನು ಸಾಹಿತ್ಯಿಕ ಅಂತಃಕರಣದಿಂದ ಕಟ್ಟಿಕೊಟ್ಟಿರುವುದರಿಂದ ಈ ಕೃತಿಗೆ ಹೊಸ ಆಯಾಮ ಪ್ರಾಪ್ತವಾಗಿದೆ, " ಎಂದು ಅವರು ವಿವರಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಇತಿಹಾಸ ಮತ್ತು ಸಾಹಿತ್ಯ ಕಾಲಯಾನದ ಎರಡು ಚಕ್ರಗಳು. ಇತಿಹಾಸದ ಜೊತೆ ಜೊತೆಗೆ ಆಯಾ ಕಾಲಘಟ್ಟದ ಜನಸಾಮಾನ್ಯರ ಹಾಗೂ ಸೈನಿಕರ ನೈಜ ವೃತ್ತಾಂತಗಳನ್ನು ಚಿತ್ರಿಸಿರುವ ಕೃತಿಗಳನ್ನು ಓದಿದಾಗ ಮಾತ್ರ ಸಮಗ್ರ ಅನುಭವ ದೊರೆಯುತ್ತದೆ ಎಂದು ಲೇಖಕ ಗೊರೂರು ಶಿವೇಶ್ ಅಭಿಪ್ರಾಯಪಟ್ಟರು.ನಗರದ ಗಂಧದಕೋಠಿಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಾಗರಿಕರ ಹಕ್ಕುಗಳ ಸಂರಕ್ಷಣಾ ವೇದಿಕೆ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ ಪ್ರತಿಷ್ಠಾನ ಹಾಗೂ ಕಾಲೇಜು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ, ರಾಜಣ್ಣ ರಾಶಿ ವಿರಚಿತ "1857 ಸ್ವಾತಂತ್ರ್ಯ ಸಂಗ್ರಾಮದಿಂದುದಯಿಸಿದ ಭಾರತ " ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. "1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ, 1861–1865ರ ಅಮೆರಿಕದ ಅಂತರ್ಯುದ್ಧ ಹಾಗೂ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ (ನೂರು ವರ್ಷಗಳ ಏಕಾಂತ) ಕಾದಂಬರಿ—ಈ ಮೂರೂ ಮಾನವನ ಸ್ವಾತಂತ್ರ್ಯದ ಹಂಬಲ, ಅಧಿಕಾರದ ಅಂಧತೆ ಮತ್ತು ಯುದ್ಧದ ನಂತರ ಉಳಿಯುವ ಶೂನ್ಯತೆಯನ್ನು ವಿಭಿನ್ನ ನೆಲೆಗಳಲ್ಲಿ ಮುಖಾಮುಖಿಯಾಗಿಸುತ್ತವೆ. ಸಾಹಿತಿಯೂ ಆಗಿರುವ ರಾಜಣ್ಣ ರಾಶಿಯವರು ಭಾರತದ ಇತಿಹಾಸವನ್ನು ಸಾಹಿತ್ಯಿಕ ಅಂತಃಕರಣದಿಂದ ಕಟ್ಟಿಕೊಟ್ಟಿರುವುದರಿಂದ ಈ ಕೃತಿಗೆ ಹೊಸ ಆಯಾಮ ಪ್ರಾಪ್ತವಾಗಿದೆ, " ಎಂದು ಅವರು ವಿವರಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಾಸನ ವಿಶ್ವವಿದ್ಯಾಲಯ ಹೇಮಗಂಗೋತ್ರಿಯ ಕುಲಸಚಿವ (ಮೌಲ್ಯಮಾಪನ) ಡಾ. ನಾಗರಾಜು ಎನ್. ಪುಸ್ತಕವು ಒಂದು ಮೌನ ಶಿಕ್ಷಕನಿದ್ದಂತೆ. ತಾನು ಮಾತನಾಡದಿದ್ದರೂ ಓದುಗರಲ್ಲಿ ಅಂತಃಕರಣ ಸೃಷ್ಟಿಸುತ್ತದೆ, ತಾನು ಚಲಿಸದಿದ್ದರೂ ನಮಗೆ ಮಾರ್ಗದರ್ಶನ ಮಾಡುತ್ತದೆ ಹಾಗೂ ತಾನು ನೋಡದಿದ್ದರೂ ಜಗತ್ತನ್ನು ನಮಗೆ ಪರಿಚಯಿಸುತ್ತದೆ, " ಎಂದರು.ಕೃತಿ ಕುರಿತು ಮಾತನಾಡಿದ ಡಾ. ಬರಾಳು ಶಿವರಾಮ್, ಲೇಖಕರು 32 ವಿಮರ್ಶಾ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡಿ, ಐತಿಹಾಸಿಕ ಘಟನೆಗಳು ನಡೆದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಈ ಗ್ರಂಥ ರಚಿಸಿರುವುದರಿಂದ ಇದು ಅತ್ಯಂತ ಅನನ್ಯ ಕೃತಿಯಾಗಿ ಹೊರಹೊಮ್ಮಿದೆ ಎಂದು ಶ್ಲಾಘಿಸಿದರು. ಪ್ರಾಸ್ತಾವಿಕ ನುಡಿಗಳನ್ನಾಡಿದ ಸಾಹಿತಿ ಗೊರೂರು ಅನಂತರಾಜು, ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ರಾಜಣ್ಣ ರಾಶಿ ಅವರು ಅಣೆಕಟ್ಟು, ಬ್ಯಾರೇಜ್ ಹಾಗೂ ಫ್ಲೈಓವರ್‌ಗಳನ್ನು ದಕ್ಷತೆಯಿಂದ ನಿರ್ಮಿಸಿದವರು. ನಿವೃತ್ತಿಯ ಬಳಿಕ ಬರವಣಿಗೆಯಲ್ಲಿ ತೊಡಗಿಸಿಕೊಂಡು ರಚಿಸಿರುವ ಈ ಕೃತಿಯು ಕನ್ನಡ ಸಾಹಿತ್ಯ ಲೋಕಕ್ಕೆ ಸಂದ ಅತ್ಯಮೂಲ್ಯ ಕೊಡುಗೆಯಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಂಜಯ್ಯ ಡಿ.ಕೆ. ಮಾತನಾಡಿ, ಇತಿಹಾಸವನ್ನು ಅರಿಯದವನು ಇತಿಹಾಸ ನಿರ್ಮಿಸಲಾರ. ನಿರಂತರ ಓದಿನ ಹಂಬಲ ಹಾಗೂ ಅಪಾರ ಜ್ಞಾನಾರ್ಜನೆಯ ಫಲವಾಗಿಯೇ ಡಾ. ಬಿ.ಆರ್. ಅಂಬೇಡ್ಕರ್ ಅವರು ಸರ್ವರಿಗೂ ಸಮಪಾಲು-ಸಮಬಾಳು ನೀಡುವ ಭಾರತದ ಶ್ರೇಷ್ಠ ಸಂವಿಧಾನವನ್ನು ರಚಿಸಲು ಸಾಧ್ಯವಾಯಿತು ಎಂದು ಸ್ಮರಿಸಿದರು. ವೇದಿಕೆಯಲ್ಲಿ ನಾಗರಿಕ ಹಕ್ಕುಗಳ ಸಂರಕ್ಷಣಾ ವೇದಿಕೆಯ ಅಧ್ಯಕ್ಷೆ ಸತ್ಯವತಿ, ಕೃತಿಯ ಲೇಖಕ ರಾಜಣ್ಣ ರಾಶಿ ಹಾಗೂ ನಿವೃತ್ತ ತಹಸೀಲ್ದಾರ್ ರುದ್ರಪ್ಪಾಜಿ ಉಪಸ್ಥಿತರಿದ್ದರು.ಖ್ಯಾತ ಗಾಯಕ ಜಿ. ಆರ್. ಶ್ರೀಕಾಂತ್ ಪ್ರಾರ್ಥಿಸಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕ ಮೋಹನ್ ಕುಮಾರ್ ಜಿ. ಆರ್. ಸ್ವಾಗತಿಸಿ, ವೇದಿಕೆಯ ಕಾರ್ಯದರ್ಶಿ ಸುಧಾಕರ್ ಆರ್. ವಂದಿಸಿದರು. ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶಶಿಕಲಾ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.