ಇತಿಹಾಸ ಪ್ರಸಿದ್ಧ ಶ್ರೀಗವಿರಂಗನಾಥಸ್ವಾಮಿ ಅದ್ಧೂರಿ ಬ್ರಹ್ಮ ರಥೋತ್ಸವ

| Published : Jan 17 2024, 01:45 AM IST

ಸಾರಾಂಶ

ಈ ಪುಣ್ಯ ಸ್ಥಳ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಪುರಾತನ ಕಾಲದಿಂದಲೂ ಗೋ ರಕ್ಷಕನಾಗಿ ಶ್ರೀಗವಿರಂಗಪ್ಪಸ್ವಾಮಿ ರೈತರ ಬದುಕಿನ ಜೀವಾಳದಂತಿದ್ದಾನೆ. ದನಕರುಗಳಿಗೆ ಆರೋಗ್ಯ ಕೆಟ್ಟಾಗ ಮೈಮೇಲೆ ತೀರ್ಥ ಸಿಂಪಡಿಸಿದರೆ ರೋಗಗಳು ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಇದೆ. ಅದರಂತೆ ತಾಲೂಕು, ಜಿಲ್ಲೆ ಸೇರಿದಂತೆ ವಿವಿಧ ಸ್ಥಳಗಳಿಂದ ಭಕ್ತರು ತಮ್ಮ ದನಕರುಗಳು ಅನಾರೋಗ್ಯಕ್ಕೆ ತುತ್ತಾದಾಗ, ತಮ್ಮ ಸಂತತಿ ವೃದ್ದಿಯಾದಾಗ ಹಾಗೂ ಪ್ರತಿ ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಜಾತ್ರೆಗೆ ಆಗಮಿಸುತ್ತಾರೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀಗವಿರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.

ಶಾಸಕ ಎಚ್.ಟಿ.ಮಂಜು ದಂಪತಿ ಶ್ರೀಗವಿರಂಗಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ರೈತರು ಧರಿಸುವ ರುಮಾಲನ್ನು ತಲೆಗೆ ಕಟ್ಟಿ ರಥೋತ್ಸವಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಶಾಸಕರು, ಈ ಪುಣ್ಯ ಸ್ಥಳ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಪುರಾತನ ಕಾಲದಿಂದಲೂ ಗೋ ರಕ್ಷಕನಾಗಿ ಗವಿರಂಗಪ್ಪಸ್ವಾಮಿ ರೈತರ ಬದುಕಿನ ಜೀವಾಳದಂತಿದ್ದಾನೆ ಎಂದರು.

ದನಕರುಗಳಿಗೆ ಆರೋಗ್ಯ ಕೆಟ್ಟಾಗ ಮೈಮೇಲೆ ತೀರ್ಥ ಸಿಂಪಡಿಸಿದರೆ ರೋಗಗಳು ನಿವಾರಣೆಯಾಗುತ್ತವೆ ಎಂಬ ಪ್ರತೀತಿ ಇದೆ. ಅದರಂತೆ ತಾಲೂಕು, ಜಿಲ್ಲೆ ಸೇರಿದಂತೆ ವಿವಿಧ ಸ್ಥಳಗಳಿಂದ ಭಕ್ತರು ತಮ್ಮ ದನಕರುಗಳು ಅನಾರೋಗ್ಯಕ್ಕೆ ತುತ್ತಾದಾಗ, ತಮ್ಮ ಸಂತತಿ ವೃದ್ದಿಯಾದಾಗ ಹಾಗೂ ಪ್ರತಿ ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಜಾತ್ರೆಗೆ ಆಗಮಿಸುತ್ತಾರೆ ಎಂದರು.

ಶ್ರೀಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡುತ್ತೇನೆ. ಮೂಲ ಸೌಕರ್ಯ ಒದಗಿಸಲು ಕ್ರಮ ವಹಿಲಾಗುವುದು. ಶ್ರೀಗವಿರಂಗಪ್ಪಸ್ವಾಮಿ ಸರ್ವರಿಗೂ ಒಳ್ಳೆಯದನ್ನು ಮಾಡಲಿ. ಕಾಲಕಾಲಕ್ಕೆ ಮಳೆ, ಬೆಳೆ ಸಮೃದ್ಧಿಯಾಗಿ ಆಗಲಿ. ರೈತರ ಮೊಗದಲ್ಲಿ ಸಂತಸ ಮೂಡಲಿ ಎಂದರು.

ಜಿಲ್ಲೆಯ ವಿವಿಧ ಮೂಲೆಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಗವಿರಂಗಪ್ಪಸ್ವಾಮಿ ದರ್ಶನ ಪಡೆದು ಬ್ರಹ್ಮರಥಕ್ಕೆ ಹಣ್ಣು ಜವನ ಎಸೆದು ಭಕ್ತಿಯಿಂದ ಇಷ್ಟಾರ್ಥಗಳನ್ನು ಪೂರೈಸುವಂತೆ ಕೋರಿಕೊಂಡರು.

ರಥೋತ್ಸವದಲ್ಲಿ ತಹಸೀಲ್ದಾರ್ ನಿಸರ್ಗಪ್ರಿಯ, ಸಂತೇಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ತಾಪಂ ಮಾಜಿ ಸದಸ್ಯ ಮೋಹನ್, ಉಪ ತಹಸೀಲ್ದಾರ್ ಗೌರಮ್ಮ, ರಾಜಸ್ವ ನಿರೀಕ್ಷಕ ಹರೀಶ್ ಸೇರಿದಂತೆ ಸಾವಿರಾರು ಭಕ್ತರು ಹಾಜರಿದ್ದರು.

ಅಂಗರ ತಿಮ್ಮಪ್ಪನ ಜಾತ್ರೆಯಲ್ಲಿ ರಾಸು ಮೆರವಣಿಗೆ

ಕಿಕ್ಕೇರಿ: ಹೋಬಳಿಯ ಗೊಲ್ಲರಕೊಪ್ಪಲು ಬೋರೆಯಲ್ಲಿವ ಅಂಗರತಿಮ್ಮಪ್ಪನ ಜಾತ್ರೆ ಸಂಭ್ರಮ ಸಡಗರದಿಂದ ಜರುಗಿತು.

ಗೋವಿಂದನಹಳ್ಳಿ ತಿರುವಿನಲ್ಲಿರುವ ಅಂಗರ ತಿಮ್ಮಪ್ಪನ ರಾಸುಗಳ ಮೆರವಣಿಗೆ ಜಾತ್ರೆ ವಿಜೃಂಭಣೆಯಿಂದ ನಡೆಯಿತು.ಜಾತ್ರೆಯಲ್ಲಿ ಹೋಬಳಿಯ ವಿವಿಧ ಗ್ರಾಮಗಳಿಂದ ರೈತರು ಆಗಮಿಸಿದ್ದರು. ರೈತಾಪಿ ಜನತೆ ಜಾನುವಾರುಗಳ ಮೈತೊಳೆದು, ಕೊಂಬಿಗೆ ಎಣ್ಣೆ ಸವರಿ ಹಸಿರು ಟೇಪು ಸುತ್ತಿ, ಕೊರಳಿಗೆ ಗೆಜ್ಜೆ ಕಟ್ಟಿ, ಹೊಟ್ಟೆಯ ಸುತ್ತ ಕರಿಕಂಬಳಿ ದಾರವನ್ನು ಸುತ್ತಿದರು. ಬೋರೆ ತಿಮ್ಮಪ್ಪನ ಗುಡಿಯ ಸುತ್ತ ಪ್ರದಕ್ಷಿಣೆ ಹಾಕಿಸಿದರು.ದೇವರಿಗೆ ಪೂಜಿಸಿ ತಿಲಕ ಪ್ರಸಾದ ರಾಸುಗಳಿಗೆ ಇಟ್ಟು, ತೀರ್ಥ ಪ್ರೋಕ್ಷಣೆ ಮಾಡಿಸಿದರು. ರೋಗರುಜಿನ ಬಾರದಂತೆ ತಿಮ್ಮಪ್ಪ ದೇವರು ಕಾಯಲು ಮೊರೆ ಇಟ್ಟರು. ಹಲವರು ಎಮ್ಮೆ, ಹಸುಗಳು ಕರುವಿನ ಹಾಕಿದ ಸಲುವಾಗಿ ಗಿಣ್ಣು ಹಾಲು ತಯಾರಿಸಿ ದೇವರಿಗೆ ನೈವೇದ್ಯವಾಗಿ ಅರ್ಪಿಸಿದರು. ಕುರಿಗಾಹಿಗಳು ತಮ್ಮ ಕುರಿಗಳನ್ನು ತಿಮ್ಮಪ್ಪನ ಗುಡಿಯ ಮುಂದೆ ಮೂರು ಸುತ್ತಿನ ಪ್ರದಕ್ಷಿಣೆ ಹಾಕಿಸಿ ತಮ್ಮ ಸಂಕಷ್ಟ ದೂರ ಮಾಡಲು ಮೊರೆಇಟ್ಟರು.ಬೋರೆ ದೇವರ ಗುಡಿಯಲ್ಲಿರುವ ಹನುಮಂತ ದೇವರಲ್ಲಿ ತಮ್ಮ ಮನೆ, ರಾಸುಗಳನ್ನು ಕಾಯಲು ಮೊಸರನ್ನ ತಳಿಗೆ ಇಟ್ಟು ವಿನಂತಿಸಿದರು.