ಸಾರಾಂಶ
ಪ್ರಚಾರ ಸಭೆ । ಗ್ಯಾರಂಟಿ ನೋಡಿ ಮತ ನೀಡಿ
ಕನ್ನಡಪ್ರಭ ವಾರ್ತೆ ಅರಸೀಕೆರೆಮಹಿಳೆಯ ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು. ಅರಸೀಕೆರೆಯಲ್ಲಿ ತಮಗೆ ಭಾರಿ ಮುನ್ನಡೆ ನೀಡಿದರೆ ಇಲ್ಲಿಯ ಇತಿಹಾಸ ಬದಲಾಗುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ತಾಲೂಕಿನ ಬೆಳಗುಂಬ ಹಾಗೂ ಯಡವನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಉಚಿತ ವಿದ್ಯುತ್, ಉಚಿತ ಬಸ್ ಪ್ರಯಾಣ, ಅಕ್ಕಿ, ೨ ಸಾವಿರ ರು. ಸೇರಿದಂತೆ ಯುವ ನಿಧಿ ಮೂಲಕ ವಿದ್ಯಾವಂತರಿಗೆ ಹಣ ನೀಡುವ ಮೂಲಕ ಬಡ ಜನರಿಗೆ ಸರ್ಕಾರ ಸ್ಪಂದಿಸಿದೆ. ಇದನ್ನು ಜನರು ಲೋಕಸಭಾ ಚುನಾವಣೆಯಲ್ಲಿ ಮರೆಯದೆ ತಪ್ಪದೇ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಹೇಳಿದರು.ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಪೈಕಿ ಅರಸೀಕೆರೆಯಲ್ಲಿ ಭಾರಿ ಮುನ್ನಡೆ ಕೊಡಿಸಿದರೆ ಕ್ಷೇತ್ರದ ಇತಿಹಾಸವೇ ಬದಲಾಗಲಿದೆ. ಸಣ್ಣಪುಟ್ಟ ವ್ಯತ್ಯಾಸ ಸರಿಪಡಿಸಿಕೊಂಡು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಹೋರಾಟ ನಡೆಸಿ ಎಂದು ಕರೆ ನೀಡಿದರು
ಹಿರಿಯ ಕಾಂಗ್ರೆಸ್ ಮುಖಂಡ ಎಂ.ಜಿ.ಶಿವಶಂಕರಸ್ವಾಮಿ ಮಾತನಾಡಿ, ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ದಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಬೆಂಬಲಿಸಬೇಕು ಎಂದು ಹೇಳಿದರು.ಕುಡಿಯುವ ನೀರು, ರಸ್ತೆ, ಶಾಲೆ, ಕಾಲೇಜು ಸೇರಿದಂತೆ ಹತ್ತಾರು ಜನಪರ ಕಾರ್ಯಕ್ರಮಗಳನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಉತ್ತಮ ಕೆಲಸ ಮಾಡುತ್ತಿರುವುದು ತಿಳಿದಿದೆ. ಕೇಂದ್ರದಲ್ಲಿ ಬಿಜೆಪಿ ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕಿದೆ. ಆದ್ದರಿಂದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡುವ ಮೂಲಕ ಶ್ರೇಯಸ್ ಪಟೇಲ್ ಗೆಲ್ಲಿಸಿ ಸಂಸತ್ತಿಗೆ ಕಳುಹಿಸಬೇಕು ಎಂದರು.
ಮುಖಂಡರಾದ ಅಡವಿಸ್ವಾಮಿ, ಬೆಳಗುಂಬ ಬಾಬು, ಧರ್ಮಶೇಖರ್, ಬೆಳಗುಂಬ ಗ್ರಾಪಂ ಅಧ್ಯಕ್ಷ ತೋಂಟಾರಾಧ್ಯ, ಜಯಣ್ಣ, ವೇದಮೂರ್ತಿ, ಸ್ವಾಮಿ, ರವಿ ಸಿದ್ದೇಶ್ ಇದ್ದರು.ಬೆಳಗುಂಬ ಗ್ರಾಮದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಉದ್ಘಾಟಿಸಿದರು. ಎಂ.ಜಿ.ಶಿವಶಂಕರಸ್ವಾಮಿ, ಇತರರಿದ್ದಾರೆ.