ಸಾರಾಂಶ
- ಹರಿಹರದಲ್ಲಿ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಆರೋಪ । ವಿಪ ಸದಸ್ಯ ಸಿ.ಟಿ.ರವಿ ಪ್ರಕರಣ ಖಂಡಿಸಿ ಪ್ರತಿಭಟನೆ - - - ಕನ್ನಡಪ್ರಭ ವಾರ್ತೆ ಹರಿಹರ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಟ್ಲರ್‌ನಂತೆ ಸರ್ವಾಧಿಕಾರಿ ಧೋರಣೆಯಿಂದ ಆಡಳಿತ ನಡೆಸುತ್ತಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಮೇಲಿನ ದೌರ್ಜನ್ಯ ಖಂಡಿಸಿ, ಹರಿಹರ ತಾಲೂಕು ಬಿಜೆಪಿ ಘಟಕದಿಂದ ನಗರದ ಶಿವಮೊಗ್ಗ ರಸ್ತೆಯ ಪಕ್ಷದ ಕಚೇರಿಯಿಂದ ಶನಿವಾರ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಅವರು ಮಾತನಾಡಿದರು.
ಒಬ್ಬ ಚುನಾಯಿತ ಜನಪ್ರತಿನಿಧಿಯನ್ನು ಯಾವುದೇ ನೋಟಿಸ್ ನೀಡದೇ ಬಂಧಿಸಲಾಗಿದೆ. ಬಂಧನದ ನಂತರ ಅವರೊಂದಿಗೆ ನಡೆದುಕೊಂಡ ರೀತಿ ಗಮನಿಸಿದರೆ, ರಾಜ್ಯ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಜನರಿಗೆ ಗೋಚರವಾಗುತ್ತದೆ ಎಂದು ಕಿಡಿಕಾರಿದರು.ಕಾಂಗ್ರೆಸ್‌ನ ಅತಿಯಾದ ತೃಷ್ಟೀಕರಣದ ಫಲವೇ ಈ ವಕ್ಪ್ ಕಾಯ್ದೆಯಾಗಿದ್ದು, ಕೂಡಲೇ ರದ್ದಾಗಬೇಕಿದೆ. ಇಲ್ಲದಿದ್ದರೆ ಮುಂದಿನ ಪೀಳಿಗೆ ನಮ್ಮನ್ನು ಶಪಿಸುತ್ತಾರೆ. ರೈತರು ಸೇರಿದಂತೆ ಇತರರ ಭೂಮಿಯನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಕಾಯ್ದೆ ರದ್ದುಪಡಿಸುವಂತೆ ಒತ್ತಡ ತರುವುದು ಅನಿವಾರ್ಯವಾಗಿದೆ. ಇನ್ನಾದರೂ ಜಾತಿ, ಉಪಜಾತಿ ಎನ್ನದೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಮೆರವಣಿಗೆಯು ಶಿವಮೊಗ್ಗ ರಸ್ತೆ, ರಾಣಿ ಚನ್ನಮ್ಮ ವೃತ್ತ, ಗಾಂಧಿ ವೃತ್ತದ ಮೂಲಕ ತಾಲೂಕು ಕಚೇರಿ ತಲುಪಿತು. ದಾರಿಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಪ್ರತಿಭಟನೆಯಲ್ಲಿ ನಗರ ಹಾಗೂ ಗ್ರಾಮಾಂತರ ಅಧ್ಯಕ್ಷರಾದ ಅಜಿತ್, ಎಂ.ಪಿ.ಲಿಂಗರಾಜ್, ಮುಖಂಡರಾದ ಬಾತಿ ಚಂದ್ರಶೇಖರ್, ರಾಜು ರೋಖಡೆ, ಮಾಲಾತೇಶ ಭಂಡಾರಿ, ನಲ್ಲಿ ಮಂಜುನಾಥ, ಫೋಟೋ ಸಂತೋಷ, ಗಣೇಶ್ ಶಿವಾಜಿ, ಅನಿಲ್ ಸಾವಂತ್, ವೈ.ಬಿ.ಪ್ರಭಾಕರ್, ನಾಗರಾಜ್ ಭಂಡಾರಿ, ಜಡಿಯಪ್ಪ ಸೇರಿದಂತೆ ಇತರ ಪ್ರಮುಖರು, ಕಾರ್ಯಕರ್ತರು ಇದ್ದರು.
- - -ಬಾಕ್ಸ್ * ಸರ್ಕಾರದಿಂದ ದ್ವೇಷ ರಾಜಕಾರಣ: ವೀರೇಶ್ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ಬೆಳಗಾವಿ ಸುವರ್ಣಸೌಧದಲ್ಲಿ ಜನಪ್ರತಿನಿಧಿಯೊಬ್ಬರ ಮೇಲೆ ಹಲ್ಲೆ ನಡೆಸಲು ಕಾಂಗ್ರೆಸ್ ಸರ್ಕಾರವೇ ಪರೋಕ್ಷವಾಗಿ ಬೆಂಬಲ ನೀಡಿದ್ದರ ಹಿಂದೆ ದ್ವೇಷದ ರಾಜಕಾರಣವಿದೆ. ಶಕ್ತಿಸೌಧಕ್ಕೆ ನುಗ್ಗಿ ಹಲ್ಲೆ ಮಾಡಲು ಮುಂದಾದ ಪುಡಿರೌಡಿಗಳ ಮೇಲೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಿ.ಟಿ.ರವಿ ಅವರೊಂದಿಗೆ ರಾಜ್ಯ ಸರ್ಕಾರ ನಡೆದುಕೊಂಡಿರುವ ರೀತಿ ಅತ್ಯಂತ ಖಂಡನೀಯ. ಇದಕ್ಕೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯ ರವಿ ಪರವಾಗಿ ನೀಡಿರುವ ತೀರ್ಪು ಸರ್ಕಾರ ನಡೆದು ಕೊಂಡಿರುವುದಕ್ಕೆ ಸಾಕ್ಷಿ ಎಂದರು.
- - - -೨೧ಎಚ್‌ಆರ್‌ಆರ್೦೨:ಹರಿಹರದಲ್ಲಿ ಮಾಜಿ ಸಚಿವ ಹಾಗೂ ಎಂಎಲ್‌ಸಿ ಸಿ.ಟಿ.ರವಿ ಪ್ರಕರಣದಲ್ಲಿ ರಾಜ್ಯ ಸರ್ಕಾರದ ನಡೆ ಖಂಡಿಸಿ, ಬಿಜೆಪಿ ತಾಲೂಕು ಘಟಕದಿಂದ ಪ್ರತಿಭಟಿಸಲಾಯಿತು. ಶಾಸಕ ಬಿ.ಪಿ.ಹರೀಶ್, ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.