ರಾಜ್ಯದಲ್ಲಿ ಹಿಟ್ಲರ್‌ ಆಡಳಿತ ಜಾರಿ ಇದ್ತಾ : ಜೋಶಿ ಟೀಕೆ

| N/A | Published : May 27 2025, 01:00 AM IST / Updated: May 27 2025, 10:23 AM IST

Prahlad Joshi

ಸಾರಾಂಶ

ಕರ್ನಾಟಕ ರಾಜ್ಯದಲ್ಲಿ‌ ಹಿಟ್ಲರ್ ಆಡಳಿತ ಜಾರಿಗೆ ಬಂದಿದೆಯಾ ಎನ್ನುವ ಪ್ರಶ್ನೆ ಬಿಟ್ಟುಬಿಡದೆ ಕಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

 ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ‌ ಹಿಟ್ಲರ್ ಆಡಳಿತ ಜಾರಿಗೆ ಬಂದಿದೆಯಾ ಎನ್ನುವ ಪ್ರಶ್ನೆ ಬಿಟ್ಟುಬಿಡದೆ ಕಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಬಿಜೆಪಿಯು ಮಾಧ್ಯಮಗಳ ಮೂಲಕ ರಾಜ್ಯ ಸರ್ಕಾರದ ವಿರುದ್ಧ ನೀಡಿದ್ದ ಜಾಹೀರಾತಿನ ವಿರುದ್ಧ ಕೋರ್ಟ್‌ ಮೆಟ್ಟಿಲೇರಲು ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ಸಂವಿಧಾನದ ಕುರಿತು, ಡಾ। ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಬಗ್ಗೆ, ಅವರ ನೀತಿಗಳನ್ನು ಪಾಲಿಸುತ್ತೇವೆ ಎಂದು ಹೇಳುವ ಕಾಂಗ್ರೆಸ್ ಸರ್ಕಾರದ ನಡೆ ಹಿಟ್ಲರ್ ಆಡಳಿತಕ್ಕಿಂತಲೂ ಕಡೆಯಾಗಿದೆ‌. ವಾಕ್ ಸ್ವತಂತ್ರ ಕಿತ್ತುಕೊಳ್ಳುವುದು ಸಂವಿಧಾನದಲ್ಲಿ ಬರೆದಿದೆಯಾ ಸಿದ್ದರಾಮಯ್ಯನವರೇ? ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.

ನಿಮ್ಮ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದರೆ ನಿಮಗೆ ಯಾಕೆ ಸಂಕೋಚ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮ‌ ಸರ್ಕಾರದ ದುರಾಡಳಿತವನ್ನು, ಭ್ರಷ್ಟತೆಯನ್ನು, ಸುಭೀಕ್ಷವಾಗಿದ್ದ ರಾಜ್ಯದ ಆರ್ಥಿಕತೆಯನ್ನು ಹಾಳು ಮಾಡಿದ್ದನ್ನು, ಮಿತಿಮೀರಿದ ಓಲೈಕೆ ರಾಜಕಾರಣದ ಬಗ್ಗೆ ಮಾತನಾಡಿದರೆ ನಿಮಗೆ ಏಕೆ ಭಯ? ಖಾಸಗಿ ನ್ಯೂಸ್ ಚಾನೆಲ್ ಮುಖ್ಯಸ್ಥರನ್ನು ಬಂಧಿಸಲು ಕರ್ನಾಟಕದ ಪೊಲೀಸರನ್ನು ಕಳುಹಿಸಿರುವುದು ಯಾವ ಸಂದೇಶ ನೀಡುವುದಕ್ಕಾಗಿ? ಎಂದು ಕಿಡಿಕಾರಿದ್ದಾರೆ.

ನಿಮ್ಮ‌ ಸರ್ಕಾರದ ವೈಫಲ್ಯ ಮುಚ್ಚಿಡಲು, ನಿಮ್ಮ ಆತಂಕ, ದುಗುಡ ಆದೇಶದಲ್ಲಿ ಭಾಸವಾಗುತ್ತಿದೆ. ಸಿಎಂ ಕುರ್ಚಿ ಉಳಿಸಿಕೊಳ್ಳಲು ಈ ಮಾರ್ಗವನ್ನು ಹಿಡಿದಿರುವಂತೆ ಕಾಣುತ್ತಿದೆ‌ ಸಿದ್ದರಾಮಯ್ಯನವರೇ. ನಿಮ್ಮ‌ ಹತಾಶೆ ನಮಗೆ ಅರ್ಥವಾಗುತ್ತಿದೆ. ಆದರೆ, ಈ ಹಿಟ್ಲರ್ ಆಡಳಿತದ ಪದ್ದತಿ, ಮೊಘಲರ ಆಡಳಿತದ ಪದ್ದತಿಯನ್ನು ಕರ್ನಾಟಕ ಎಂದಿಗೂ ಸಹಿಸುವುದಿಲ್ಲ ಎಂದು ಅವರು ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

Read more Articles on