ಖುದ್ದು ಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣಗೋಪಾಲ, ರಾಜ್ಯ ಉಸ್ತುವಾರಿ ಸುರ್ಜೇವಾಲರನ್ನು ಭೇಟಿಯಾಗಿ ಪ್ರಯತ್ನ ನಡೆಸಿದ್ದಾರೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ಸಚಿವ ಸ್ಥಾನ ತಪ್ಪಿದ್ದಕ್ಕೆ ರೊಚ್ಚಿಗೆದ್ದಿರುವ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಬರ ನಿರ್ವಹಣಾ ಸಭೆಗೆ ಗೈರಾಗುವ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಸಚಿವರಾದ ಶಿವರಾಜ ತಂಗಡಗಿ ಹಾಗೂ ಬಸವರಾಜ ರಾಯರಡ್ಡಿ ಕೊಪ್ಪಳ ಜಿಲ್ಲೆಯಲ್ಲಿ ಬರ ನಿರ್ವಹಣೆ ಸಭೆ ನಡೆಸಿದರೆ ಹಿಟ್ನಾಳ ಸಹೋದರರು ಬೆಂಗಳೂರಿಗೆ ತೆರಳಿದ್ದಾರೆ. ಈ ಮೂಲಕ ತಮಗೆ ಅಸಮಾಧಾನವಾಗಿದೆ ಎನ್ನುವುದನ್ನು ಅಧಿಕೃತವಾಗಿ ತೋರಿಸಿಕೊಟ್ಟಿದ್ದಾರೆ.

ಬೆಂಬಲಿಗರ ರಾಜೀನಾಮೆ ಬಳಿಕ ಈಗ ಖುದ್ದು ಸಂಸದ ರಾಜಶೇಖರ ಹಿಟ್ನಾಳ ಸಹೋದರ ಶಾಸಕ ರಾಘವೇಂದ್ರ ಹಿಟ್ನಾಳ ಪರ ದೆಹಲಿ ಮತ್ತು ಬೆಂಗಳೂರು ಹೈಕಮಾಂಡ್ ಮಟ್ಟದಲ್ಲಿ ಬ್ಯಾಟ್ ಮಾಡುತ್ತಿದ್ದಾರೆ.

ಖುದ್ದು ಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣಗೋಪಾಲ, ರಾಜ್ಯ ಉಸ್ತುವಾರಿ ಸುರ್ಜೇವಾಲರನ್ನು ಭೇಟಿಯಾಗಿ ಪ್ರಯತ್ನ ನಡೆಸಿದ್ದಾರೆ. ಇತ್ತ ಶಾಸಕ ರಾಘವೇಂದ್ರ ಹಿಟ್ನಾಳ ಸಹ ಕೊಪ್ಪಳದಲ್ಲಿ ಸಭೆಯಿದ್ದರೂ ಭಾಗವಹಿಸದೇ ಬೆಂಗಳೂರಿನಲ್ಲಿ ತಮ್ಮ ಪ್ರಯತ್ನ ನಡೆಸಿದ್ದಾರೆ.

ಮುನಿಸಿಕೊಂಡ ಹಿಟ್ನಾಳ ಕುಟುಂಬ: ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಹಿಟ್ನಾಳ ಸಹೋದರರು ಹಾಗೂ ಅವರ ತಂದೆ ಕೆ.ಬಸವರಾಜ ಹಿಟ್ನಾಳ ಮುನಿಸಿಕೊಂಡಿದ್ದಾರೆ. ಈಗ ಸಿದ್ದರಾಮಯ್ಯ ಹಾವೇರಿಯ ಬಸವರಾಜ ಶಿವಣ್ಣನವರನ್ನೇ ಸಚಿವರನ್ನಾಗಿ ಮಾಡಬೇಕು ಎಂದು ಪಟ್ಟು ಹಿಡಿದಿರುವುದರಿಂದ ಶಾಸಕ ರಾಘವೇಂದ್ರ ಹಿಟ್ನಾಳ ಸಚಿವರಾಗುವುದಕ್ಕೆ ಸಮಸ್ಯೆಯಾಗಿದೆ. ಉಳಿದಿರುವ ಒಂದು ಸ್ಥಾನ ಕುರುಬ ಸಮುದಾಯಕ್ಕೆ ಕೊಡಬೇಕಾಗಿದೆ. ಕುರುಬ ಸಮುದಾಯದ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಅವರಿಗೆ ನೀಡಿದ್ದನ್ನು ಕೊನೆಗಳಿಗೆಯಲ್ಲಿ ಸಿದ್ದರಾಮಯ್ಯನವರ ಆಕ್ರೋಶಕ್ಕೆ ರದ್ಧು ಮಾಡಲಾಯಿತು. ಈಗ ಉಳಿದಿರುವ ಕುರುಬ ಸಮುದಾಯದ ಒಂದು ಕೋಟಾ ಭರ್ತಿ ಮಾಡುವ ಮೊದಲು ಮಹಿಳಾ ಕೋಟಾ ಭರ್ತಿ ಮಾಡಬೇಕು. ಇಲ್ಲವೇ ಒಬ್ಬರಿಂದ ರಾಜೀನಾಮೆ ಪಡೆದು, ಆಗ ಉಳಿದ ಒಂದು ಸ್ಥಾನಕ್ಕೆ ಕುರುಬ ಸಮುದಾಯದ ಬಸವರಾಜ ಶಿವಣ್ಣವರ ಹಾಗೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ನಡುವೆ ಪೈಪೋಟಿ ನಡೆಯುತ್ತದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಆಶಯದಂತೆ ಯುವಕರಿಗೆ ಆದ್ಯತೆ ನೀಡುವ ಪ್ರಯತ್ನ ನಡೆದರೆ ಕೊಪ್ಪಳಕ್ಕೆ ಮತ್ತೊಂದು ಸ್ಥಾನ ದೊರೆಯುತ್ತದೆ. ಆದರೆ, ಕೊಪ್ಪಳ ಜಿಲ್ಲೆಗೆ ಮೂರು ಸಚಿವ ಸ್ಥಾನ ನೀಡಲು ಹೈಕಮಾಂಡ್ ಮನಸ್ಸು ಮಾಡುವುದೇ ಎನ್ನುವುದು ಎನ್ನುವ ಪ್ರಶ್ನೆ ಎದುರಾಗುತ್ತದೆ.

ಖುದ್ದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದಾಗೂ ಬಸವರಾಜ ಶಿವಣ್ಣನವರ ಅವರನ್ನೇ ಮಾಡುವುದಾಗಿ ಹೇಳಿರುವುದು ಹಿಟ್ನಾಳ ಕುಟುಂಬವನ್ನು ಕೆರಳಿ ಕೆಂಡವಾಗುವಂತೆ ಮಾಡಿದೆ. ಹಾಗಂತ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿಲ್ಲ. ಕೇವಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಸವರಾಜ ಶಿವಣ್ಣವರ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ ಹೆಸರು ಹೇಳಿದರೆ ಹೈಕಮಾಂಡ್ ಹಂತದಲ್ಲಿ ಪ್ರಯತ್ನ ಮಾಡಬಹುದು. ಆದರೆ, ಅದು ಆಗದೆ ಇರುವುದೇ ಈಗ ಸಮಸ್ಯೆಯಾಗಿದೆ.

ರಾಜೀನಾಮೆ ನೀಡುವುದಾಗಿ ಹೇಳಿಲ್ಲ. ಹೇಳುವುದೂ ಇಲ್ಲ. ನಮ್ಮ ಶಕ್ತಿ ಮೀರಿ ಶ್ರಮಿಸುತ್ತಿದ್ದೇವೆ. ಈಗಲೂ ಅವಕಾಶ ಇದ್ದು, ಕಾದು ನೋಡುತ್ತಿದ್ದೇವೆ. ಕರೆ ಬಂದಿದ್ದರಿಂದ ತುರ್ತಾಗಿ ಬೆಂಗಳೂರಿಗೆ ಬಂದಿದ್ದೇವೆ ಹೊರತು ಸಚಿವರು ಬರುತ್ತಾರೆ ಎಂದು ಅಲ್ಲ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.

ಯಾವ ಅಸಮಾಧಾನವೂ ಇಲ್ಲ. ಆದರೆ, ಕೊನೆಯದಾಗಿ ಈಗಲೂ ಇರುವ ಅವಕಾಶಕ್ಕಾಗಿ ಶಕ್ತಿಮೀರಿ ಶ್ರಮಿಸುತ್ತಿದ್ದೇವೆ. ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಭರವಸೆ ವಕ್ತಪಡಿಸಿದ್ದಾರೆ. ರಾಜೀನಾಮೆ ನೀಡುವುದಾಗಿ ಹೇಳಿಲ್ಲ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.