ಸಾರಾಂಶ
ಸತತ ಎರಡು ಸೋಲಿಗೆ ಕಾರಣವಾಗಿದ್ದ ಸಂಗಣ್ಣ ಕರಡಿ ಅವರೇ ಈ ಬಾರಿ ಕೊಪ್ಪಳ ಲೋಕಸಭಾ ಚುನಾವಣಯಲ್ಲಿ ಹಿಟ್ನಾಳ ಕುಟುಂಬದ ಗೆಲುವಿಗೆ ಆಸರೆಯಾಗಿದ್ದಾರೆ.
ಸೋಲಿನ ಸುಳಿಯಿಂದ ಹಿಟ್ನಾಳ ಕುಟುಂಬ ಪಾರುಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಸತತ ಎರಡು ಸೋಲಿಗೆ ಕಾರಣವಾಗಿದ್ದ ಸಂಗಣ್ಣ ಕರಡಿ ಅವರೇ ಈ ಬಾರಿ ಕೊಪ್ಪಳ ಲೋಕಸಭಾ ಚುನಾವಣಯಲ್ಲಿ ಹಿಟ್ನಾಳ ಕುಟುಂಬದ ಗೆಲುವಿಗೆ ಆಸರೆಯಾಗಿದ್ದಾರೆ.
ಹೌದು. 2014ರಲ್ಲಿ ಸಂಸದ ಸಂಗಣ್ಣ ಅವರ ವಿರುದ್ಧ ಸ್ಪರ್ಧೆ ಮಾಡಿದ್ದ ಕೆ. ಬಸವರಾಜ ಹಿಟ್ನಾಳ ಸೋತು, ನಂತರ 2019ರಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು ಪುತ್ರ ರಾಜಶೇಖರ ಹಿಟ್ನಾಳ ಅವರನ್ನು ಅಖಾಡಕ್ಕೆ ಇಳಿಸಿದ್ದರು. ಆಗಲೂ ಬಿಜೆಪಿ ಅಭ್ಯರ್ಥಿಯಾಗಿದ್ದ ಸಂಗಣ್ಣ ಗೆಲುವು ಸಾಧಿಸಿದ್ದರು.ಆದರೆ, 2024ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ ಅವರು ಎರಡನೇ ಬಾರಿ ಹಾಗೂ ಹಿಟ್ನಾಳ ಕುಟುಂಬ 3ನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಯಿತು. ಆದರೆ, ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಮುನಿಸಿಕೊಂಡ ಸಂಸದರಾಗಿದ್ದ ಕರಡಿ ಬಿಜೆಪಿ ತೊರೆದು, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರು.
ಇದು, ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಯಿತು. ತಾನು ಸತತವಾಗಿ ಸೋಲಿಸಿದ ಹಿಟ್ನಾಳ ಕುಟುಂಬದ ಪರವಾಗಿ ಸಂಗಣ್ಣ ಕರಡಿ ಅವರು ಪ್ರಚಾರ ಮಾಡುವ ಮೂಲಕ ಅಚ್ಚರಿ ಮೂಡಿಸಿದರು. ಅಷ್ಟೇ ಅಲ್ಲ, ಕರಡಿ ಕುಟುಂಬ ಪ್ರತಿಷ್ಠೆಯಾಗಿ ತೆಗೆದುಕೊಂಡು ಹಿಟ್ನಾಳ ಕುಟುಂಬದ ರಾಜಶೇಖರ ಅವರ ಗೆಲುವಿಗಾಗಿ ಶ್ರಮಿಸಿದರು.ಫಲಿತಾಂಶ ನಿರೀಕ್ಷಿತ ಮಟ್ಟದಲ್ಲಿಲ್ಲ:
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಲು ಆಸರೆಯಾಗಿದ್ದರೂ ಸಂಗಣ್ಣ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುನ್ನಡೆ ತಂದುಕೊಡುವಲ್ಲಿ ವಿಫಲವಾಗಿದ್ದಾರೆ.ಹಾಗೆ ನೋಡಿದರೆ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಹಿಟ್ನಾಳ ಮತ್ತು ಕರಡಿ ಕುಟುಂಬಗಳು ಒಂದಾಗಿ ಎದುರಿಸಿದ ಚುನಾವಣೆಯಲ್ಲಿಯೂ ನಿರೀಕ್ಷಿತ ಫಲಿತಾಂಶ ಬಂದಿಲ್ಲ. ಕೇವಲ 6225 ಮತಗಳ ಲೀಡ್ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಗಣ್ಣ ಕರಡಿ ಕೈಜೋಡಿಸಿದಾಗ ಹಿಟ್ನಾಳ ಕುಟುಂಬ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿಯೇ 50-70 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇವೆ ಎನ್ನುವ ಲೆಕ್ಕಾಚಾರದಲ್ಲಿ ಇದ್ದರು. ಹಿಟ್ನಾಳ ಕುಟುಂಬ ಮತ್ತು ಕಾಂಗ್ರೆಸ್ ಸೇರಿ 90 ಸಾವಿರ ಮತಗಳು ಇವೆ. ಹಾಗೂ ಸಂಗಣ್ಣ ಕರಡಿ ಅವರ ವೈಯಕ್ತಿ ಮತಗಳು 40 ಸಾವಿರ ಸೇರಿದರೂ 130,000 ಮತ ನಮ್ಮದಾಗುತ್ತೇವೆ ಎಂದು ಲೆಕ್ಕ ಹಾಕಿದ್ದರು. ಈ ಮೂಲಕ ನಾವು ಬರೋಬ್ಬರಿ 70 ಸಾವಿರ ಮತಗಳ ಲೀಡ್ ಪಡೆದುಕೊಳ್ಳುತ್ತೇವೆ ಎಂದಿದ್ದರು. ಆದರೆ, ಮತದಾರ ಇದ್ಯಾವುದಕ್ಕೂ ಮಣೆ ಹಾಕದೆ ಕೇವಲ 6225 ಮತಗಳ ಮುನ್ನಡೆ ಮಾತ್ರ ನೀಡಿದ್ದು, ಎಚ್ಚರಿಕೆಯ ಗಂಟೆಯನ್ನು ಮತದಾರರು ನೀಡಿದ್ದಾರೆ. ಎರಡು ಕುಟುಂಬಗಳು ಒಂದಾಗಿರಬಹುದು. ಆದರೆ, ಮತದಾರರು ನಾವು ಪ್ರತಿಸ್ಪರ್ಧಿಗಳಾಗಿಯೇ ಇದ್ದೇವೆ ಎಂಬ ಸಂದೇಶವನ್ನು ಎರಡು ಕುಟಂಬಗಳಿಗೂ ನೀಡಿದ್ದಾರೆ.ಇದರಿಂದ ಈಗ ಇದು ಭಾರಿ ಚರ್ಚೆಯಾಗುವಂತೆ ಆಗಿದೆ. ಹೊಸ ಹೊಸ ರಾಜಕೀಯ ಲೆಕ್ಕಾಚಾರಗಳನ್ನು ಹುಟ್ಟು ಹಾಕುವಂತೆ ಮಾಡಿದೆ.