ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಂಗಳೂರುಎಚ್ಐವಿಯಿಂದ ಬಳಲುತ್ತಿದ್ದ ಪತ್ನಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಮಾಡಿಕೊಂಡಿದ್ದಕ್ಕೆ ತನ್ನ ಮೇಲೆ ಮಾತ್ರ ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿರುವುದನ್ನು ರದ್ದುಪಡಿಸುವಂತೆ ಪತಿಯ ಕೋರಿಕೆಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.
ದೊಡ್ಡಬಳ್ಳಾಪುರದ ಜಗದೀಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್ ಅವರ ಪೀಠ, ಅರ್ಜಿದಾರರ ಪತ್ನಿ 2015ರಿಂದ ಎಚ್ಐವಿಯಿಂದ ಬಳಲುತ್ತಿದ್ದರು. ಮುಖದ ಮೇಲೆಲ್ಲಾ ದದ್ದುಗಳು ಬಂದಿದ್ದವು. ಇದೇ ಕಾರಣಕ್ಕೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಎಚ್ಐವಿಗೆ ತುತ್ತಾಗಿ ಬಳಲುತ್ತಿದ್ದ ವಿಚಾರ ಸಂಬಂಧ ವೈದ್ಯಕೀಯ ದಾಖಲೆಗಳಿವೆ. ಅದನ್ನು ತನಿಖಾಧಿಕಾರಿಗೆ ಸಲ್ಲಿಸಲಾಗಿತ್ತು. ಆದರೆ, ಆ ದಾಖಲೆಗಳನ್ನು ಅವರು ಪರಿಗಣಿಸಿಲ್ಲವೆಂದು ಅರ್ಜಿದಾರ ಪರ ವಕೀಲರು ವಾದ ಮಂಡಿಸಿದ್ದಾರೆ. ಅದನ್ನು ಪರಿಗಣಿಸಿ ಅರ್ಜಿದಾರರ ವಿರುದ್ಧದ ದೊಡ್ಡಬಳ್ಳಾಪುರ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಅರ್ಜಿಯ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಲಾಗುತ್ತಿದೆ ಎಂದು ಮಧ್ಯಂತರ ಆದೇಶ ಮಾಡಿದೆ.ಅಲ್ಲದೆ, ಅರ್ಜಿ ಸಂಬಂಧ ಪ್ರತಿವಾದಿಗಳಾಗಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಠಾಣಾಧಿಕಾರಿ ಮತ್ತು ಪ್ರಕರಣದ ದೂರುದಾರರಾದ ಅರ್ಜಿದಾರನ ಭಾವಮೈದುನಗೆ ತುರ್ತು ನೊಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಅರ್ಜಿದಾರ ಪರ ವಕೀಲರು ವಾದಿಸಿ, ಜಗದೀಶ್ ಪತ್ನಿ 2015ರಿಂದ ಎಚ್‌ಐವಿ ಯಿಂದ ಬಳಲುತ್ತಿದ್ದರು. ಅದರಿಂದ ಖಿನ್ನತೆಗೆ ಒಳಗಾಗಿ 2026ರ ಜ.8ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಆತ್ಮಹತ್ಯೆಗೆ ಅರ್ಜಿದಾರ ಪ್ರಚೋದನೆ ನೀಡಿಲ್ಲ, ಯಾವುದೇ ರೀತಿ ಕಿರುಕುಳ ನೀಡಿಲ್ಲ. ಹೀಗಿದ್ದರೂ ಅರ್ಜಿದಾರರ ವಿರುದ್ಧ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿರುವುದು ಸರಿಯಾದ ಕ್ರಮವಲ್ಲ ಎಂದು ಬಲವಾಗಿ ವಾದಿಸಿದರು. ಅದನ್ನು ಪರಿಗಣಿಸಿದ ಹೈಕೋರ್ಟ್, ಈ ಮಧ್ಯಂತರ ಆದೇಶ ಮಾಡಿದೆ.
ಪ್ರಕರಣದ ವಿವರ:
ಮೃತ ಮಹಿಳೆಯ ಸಹೋದರ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ 2023ರ ಜ.9ರಂದು ನೀಡಿದ ದೂರಿನಲ್ಲಿ 17 ವರ್ಷಗಳ ಹಿಂದೆ ತನ್ನ ಅಕ್ಕನನ್ನು ಮದುವೆಯಾಗುವ ಸಮಯದಲ್ಲಿ ಜಗದೀಶ್‌ಗೆ ಸಾಕಷ್ಟು ಹಣ ಹಾಗೂ ಚಿನ್ನಾಭರಣ ನೀಡಲಾಗಿತ್ತು. ಆದರೆ ಮದುವೆ ನಂತರ ಕೆಲವೇ ದಿನಗಳಲ್ಲಿ ಅಕ್ಕನಿಗೆ ಪದೇ ಪದೆ ಹಣ ತಂದು ಕೊಡುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಿದ್ದರು.ಒಂದೂವರೆ ತಿಂಗಳ ಹಿಂದೆ ತನ್ನ ಅಕ್ಕ, ನಿವೇಶನಗಳನ್ನು ಮಾರಾಟ ಮಾಡಿದ್ದರು. ಇದರಿಂದ ಬಂದ ಹಣವನ್ನು ಬಲವಂತವಾಗಿ ಪಡೆಯಲು ಯತ್ನಿಸಿದ ಜಗದೀಶ್, ಅಕ್ಕನಿಗೆ ಹೊಡೆದು ಗಲಾಟೆ ಮಾಡಿದ್ದಾರೆ. ಈ ಹಿಂಸೆ ತಾಳಲಾರದೆ 2023ರ ಜ.8ರಂದು ಅಕ್ಕ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ. ಹಾಗಾಗಿ ಜಗದೀಶ್ ವಿರುದ್ಧ ಕ್ರಮ ಜರುಗಿಸುವಂತೆ ದೂರುದಾರರು ಕೋರಿದ್ದರು.
ಈ ದೂರು ಕುರಿತು ತನಿಖೆ ನಡೆಸಿದ್ದ ಪೊಲೀಸರು, ವಿಚಾರಣಾ ನ್ಯಾಯಾಲಯಕ್ಕೆ ಜಗದೀಶ್ ವಿರುದ್ಧ ಐಪಿಸಿ ಸೆಕ್ಷನ್ 498-A (ಮಹಿಳೆ ಅಥವಾ ಆಕೆಯ ಕುಟುಂಬಕ್ಕೆ ಕಾನೂನುಬಾಹಿರವಾಗಿ ವರದಕ್ಷಿಣೆ ಬೇಡಿಕೆ ಪೂರೈಸಲು ದೈಹಿಕ/ಮಾನಸಿಕ ಕಿರುಕುಳ ನೀಡಿದ) ಮತ್ತು ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ದೊಡ್ಡಬಳ್ಳಾಪುರದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಇದರಿಂದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಕೋರಿ ಜಗದೀಶ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.