ಸಾರಾಂಶ
ಶ್ರೀಗಳು ಕರ್ಪೂರದಂತೆ ಸಮಾಜಕ್ಕೆ ಬೆಳಕನ್ನು ನೀಡುತ್ತಾ ಮರೆಯಾದಂತಹ ದಿವ್ಯಸ್ವರೂಪಿ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮೇಟಗಳ್ಳಿ ಜೆಎಸ್ಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗುರುವಾರ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ 109ನೇ ಜಯಂತಿ ಆಚರಿಸಲಾಯಿತು.ಶ್ರೀ ಮಲೆ ಮಹದೇಶ್ವರಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖ ವಹಿಸಿ ಆಶೀರ್ವಚನ ನೀಡಿ, ರಾಜೇಂದ್ರ ಶ್ರೀಗಳವರು ಮಂದಸ್ಮಿತ ನಗುಮುಖ ಉಳ್ಳವರಾಗಿದ್ದು, ಭಕ್ತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಿ ಧೈರ್ಯವನ್ನು ತುಂಬಿ ಆತ್ಮವಿಶ್ವಾಸ ಮೂಡಿಸುತ್ತಿದ್ದರು. ಹಳ್ಳಿಯ ಬಡ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿನಿಲಯ ಸ್ಥಾಪಿಸುವ ಮುಖಾಂತರ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿದರು ಎಂದು ತಿಳಿಸಿದರು.
ಮೈವಿವಿ ಗಣಕ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಿ.ಎಸ್. ಗುರು ಮಾತನಾಡಿ, ಮೈಸೂರು ಪ್ರಾಂತ್ಯದಲ್ಲಿ ಶಿಕ್ಷಣದಿಂದ ವಂಚಿತರಾಗಿದ್ದ ಬಡ ಮಕ್ಕಳಿಗೆ ಅನ್ನದಾಸೋಹ ಮಾಡಲು ಉಚಿತ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿದ ಮಹಾನ್ ದೈವೀಪುರುಷ ರಾಜೇಂದ್ರ ಶ್ರೀಗಳು. ಶ್ರೀಗಳು ಕರ್ಪೂರದಂತೆ ಸಮಾಜಕ್ಕೆ ಬೆಳಕನ್ನು ನೀಡುತ್ತಾ ಮರೆಯಾದಂತಹ ದಿವ್ಯಸ್ವರೂಪಿ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮೇಟಗಳ್ಳಿ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಆರ್. ದಿವಾಕರ್ ಮಾತನಾಡಿದರು.
2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ನಂತರ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
10ನೇ ತರಗತಿಯ ಕೆ. ಹರಿಣಿ ಸ್ವಾಗತಿಸಿದರು. ಸಿ. ಪ್ರಿಯಾ ನಿರೂಪಿಸಿದರು. ಎಸ್. ಪ್ರತೀಕ್ಷಾ ವಂದಿಸಿದರು. ಶಾಲಾ ಮುಖ್ಯೋಪಾಧ್ಯಾಯ ಎನ್.ಪಿ. ಸತೀಶ್, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.