ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಅವರು ತಮ್ಮ ಅಪ್ರತಿಮ ಕ್ರೀಡಾ ಸಾಧನೆಯ ಮೂಲಕ ದೇಶಕ್ಕೆ ಸ್ವರ್ಣದ ಗೌರವ ತಂದುಕೊಟ್ಟು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅಧ್ಯಾಯ ನಿರ್ಮಿಸಿದ್ದಾರೆ. ಅವರು ನಿರ್ಮಿಸಿದ ಇತಿಹಾಸವನ್ನು ಇಂದಿನ ಯುವಜನತೆ ತಮ್ಮ ಪ್ರತಿಭೆ, ಪರಿಶ್ರಮದ ಮೂಲಕ ಮರುನಿರ್ಮಿಸಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.

ಮಂಗಳೂರು: ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಅವರು ತಮ್ಮ ಅಪ್ರತಿಮ ಕ್ರೀಡಾ ಸಾಧನೆಯ ಮೂಲಕ ದೇಶಕ್ಕೆ ಸ್ವರ್ಣದ ಗೌರವ ತಂದುಕೊಟ್ಟು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅಧ್ಯಾಯ ನಿರ್ಮಿಸಿದ್ದಾರೆ. ಅವರು ನಿರ್ಮಿಸಿದ ಇತಿಹಾಸವನ್ನು ಇಂದಿನ ಯುವಜನತೆ ತಮ್ಮ ಪ್ರತಿಭೆ, ಪರಿಶ್ರಮದ ಮೂಲಕ ಮರುನಿರ್ಮಿಸಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು. ಅವರು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಂಗಳೂರು ಮಹಾನಗರಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮತ್ತು ವಿ. ಒನ್. ಅಕ್ವಾ ಸೆಂಟರ್, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‍ಚಂದ್ ಹುಟ್ಟುಹಬ್ಬದ ಪ್ರಯುಕ್ತ ನಗರದ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ನಡೆದ ‘ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಈಜು ಸ್ಪರ್ಧೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ಈಜು ಕ್ರೀಡೆಯಂತಹ ಚಟುವಟಿಕೆಗಳು ಮಕ್ಕಳ ದೈಹಿಕ ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಆತ್ಮವಿಶ್ವಾಸ, ಏಕಾಗ್ರತೆ ಮತ್ತು ಶಿಸ್ತನ್ನು ಬೆಳೆಸುವಲ್ಲಿ ಸಹಕಾರಿ ಎಂದು ಹೇಳಿದರು.

ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಶಾಹಿದ್ ತೆಕ್ಕಿಲ್, ಮಾಜಿ ಕಾರ್ಪೊರೇಟರ್‌ ವೇದಾವತಿ, ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸಂತೋಷ್‌ ಶೆಟ್ಟಿ, ಮಾಸ್ಟರ್ಸ್ ಅಥ್ಲೆಟಿಕ್ಸ್‌ ಜಗದೀಶ್ ಶೆಟ್ಟಿ, ಸರ್ಫಿಂಗ್‌ ಕ್ಲಬ್ ಪದ್ಮಾನಂದ ನಾಯಕ್, ವೇಯ್ಟ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ಗಟ್ಟಿ, ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ಶೆಟ್ಟಿ, ಕ್ರೀಡಾ ತರಬೇತುದಾರ ಸಾಜಿದ್ ಉಳ್ಳಾಲ, ವಿ.ಒನ್ ಅಕ್ವಾ ಸೆಂಟರ್ ನಿರ್ದೇಶಕ ನವೀನ್ ಮತ್ತಿತರರು ಇದ್ದರು.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜಾ ಸ್ವಾಗತಿಸಿದರು. ವಿನೋದ್ ಕುಮಾರ್ ನಿರೂಪಿಸಿದರು.