ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಹೊದ್ದೂರಿನ ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಸಂವಿಧಾನದ ಕಾನೂನಾತ್ಮಕ ಹಕ್ಕನ್ನು ಪಡೆಯಲು ಸಾಮಾಜಿಕವಾಗಿ ಒಗ್ಗಟ್ಟಾಗಬೇಕು ಎಂದು ಬಹುಜನ ಕಾರ್ಮಿಕ ಸಂಘಟನೆಯ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ ಕರೆ ನೀಡಿದರು.ಹೊದ್ದೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಬಹುಜನ ಕಾರ್ಮಿಕರ ಸಂಘಟನೆಯ ಜಿಲ್ಲಾ ಸಮಿತಿಯ ನೂತನ ಗ್ರಾಮ ಸಮಿತಿ ಪುನರ್ ರಚನಾ ಸಭೆಯಲ್ಲಿ ಅವರು ಮಾತನಾಡಿದರು.
ನಿವೇಶನ ರಹಿತ ಬಡ ಕೂಲಿ ಕಾರ್ಮಿಕರು ಹೀನಾಯ ವ್ಯವಸ್ಥೆಯಲ್ಲಿದ್ದು, ಹಲವಾರು ವರ್ಷಗಳಿಂದ ಭೂಮಾಲಿಕರ ದಬ್ಬಾಳಿಕೆಗೆ ಒಳಗಾಗಿ ಲೈನ್ ಮನೆಗಳಲ್ಲಿ ಶೋಚನೀಯವಾಗಿ ಬದುಕು ಸಾಗಿಸುತ್ತಿದ್ದಾರೆ. ಬಡ ಕೂಲಿ ಕಾರ್ಮಿಕರು ಸಾಮಾಜಿಕವಾಗಿ ಸಧೃಡಗೊಳಿಸಲು ಸಂಘಟನೆಯೇ ಮೂಲಧಾರ. ಸಂಘಟನೆಗಳನ್ನು ಬಲಪಡಿಸಲು ಗ್ರಾಮಮಟ್ಟದಲ್ಲಿ ಕಾಲೋನಿಗಳಿಗೆ ಭೇಟಿ ನೀಡುವ ಮೂಲಕ ಜನರ ಸಮಸ್ಯೆಗಳನ್ನು ಆಲಿಸುವ ಮೂಲಕ ಕಾರ್ಯಕರ್ತರನ್ನು ಒಟ್ಟುಗೂಡಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.ಪೆಗ್ಗೋಳಿ ನಿವೇಶನ ಹೋರಾಟ ಸಮಿತಿಯ ಮೇಲುಸ್ತುವಾರಿ ಕಿರಣ್ ಜಗದೀಶ್ ಮಾತನಾಡಿ, ಕಾನ್ಸೀರಾಂಜೀ ನಗರ ಪಾಲೆಮಾಡುವಿನ ಅಂದಿನಿಂದ ಇಂದಿನವರೆಗಿನ ಹೋರಾಟದ ಬಗ್ಗೆ ಮೆಲುಕು ಹಾಕಿ, ಬಡವರ ಸಾಮಾಜಿಕ ಹಕ್ಕೊತ್ತಾಯಗಳು ಬಗೆಹರಿಯುವವರೆಗೂ ಹೋರಾಟಗಳು ಅನಿವಾರ್ಯವಾಗಿದೆ ಎಂದು ಹೇಳಿದರು.
ಕುಸುಮಾವತಿ ಆನಂದ್ ಮಾತನಾಡಿದರು.ಸಭೆಯಲ್ಲಿ ಅಮ್ಮತಿ ನಿವೇಶನ ಹೋರಾಟ ಸಮಿತಿಯ ಮೇಲುಸ್ತುವಾರಿ ಮಹೇಶ್, ಹನೀಫ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಅಮ್ಮತಿ ನಿವೇಶನ ಹೋರಾಟ ಸಮಿತಿ ಅಧ್ಯಕ್ಷ ಪಾಪಣ್ಣ, ಪೆಗ್ಗೋಳಿ ಹೋರಾಟ ಸಮಿತಿಯ ಸುಜಾತ, ಪೊನ್ನತ್ ಮೊಟ್ಟೆ ಹೋರಾಟ ಸಮಿತಿಯ ಸೌಕತ್ ಆಲಿ, ಕಬಡಕೇರಿ ಹೋರಾಟ ಸಮಿತಿಯ ಸುರೇಶ್, ಕಾನ್ಸಿರಾಂಜೀ ನಗರ ಪಾಲೆಮಾಡು ಹೋರಾಟ ಮತ್ತು ಅಭಿವೃದ್ಧಿ ಸಮಿತಿ ಸುರೇಶ್ ಪಿ.ಸಿ., ನೂತನವಾಗಿ ಕೋಕೇರಿ ನಿವೇಶನ ಹೋರಾಟದ ಮಂಜು, ಬಲಮೂರಿಯ ಕವೀನ್, ಕೊಂಡಂಗೇರಿಯ ಅಣ್ಣು, ಪಾಲೆಮಾಡು ಕಾನ್ಸೀರಾಂಜೀ ನಗರ ಪಾಲೆಮಾಡುವಿನ ಅಭಿವೃದ್ಧಿ ಸಮಿತಿಯ ಸುರೇಶ್ ಪಿ.ಸಿ. ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘ ಅಧ್ಯಕ್ಷ ಎಂ. ಅಶ್ವತ್ ಮೌರ್ಯ ಮತ್ತು ಕೊಡಗು ಜಿಲ್ಲಾದ್ಯಂತ ಇರುವ ಭೂ ಮತ್ತು ನಿವೇಶನ ರಹಿತ ಹಾಗೂ ಹಕ್ಕು ವಂಚಿತರ ಹೋರಾಟದ ಸ್ಥಳದಿಂದ ಸದಸ್ಯರು ಆಗಮಿಸಿದರು.
ಸಭೆಯಲ್ಲಿ ಜಿಲ್ಲಾದ್ಯಂತ ನಿವೇಶನ ರಹಿತ ಗ್ರಾಮಗಳಲ್ಲಿ 20 ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಂ. ರಂಜಿತ್ ಮೌರ್ಯ ಸ್ವಾಗತಿಸಿ, ವಂದಿಸಿದರು.