30ರೊಳಗೆ ಗ್ರಾಪಂ ಸಭೆ, ವಾರ್ಡ್ ಸಭೆ ನಡೆಸಿ, ಕ್ರಿಯಾಯೋಜನೆ ಸಲ್ಲಿಸಿ

| Published : Nov 08 2025, 01:30 AM IST

30ರೊಳಗೆ ಗ್ರಾಪಂ ಸಭೆ, ವಾರ್ಡ್ ಸಭೆ ನಡೆಸಿ, ಕ್ರಿಯಾಯೋಜನೆ ಸಲ್ಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ನರೇಗಾ ಯೋಜನೆಯಡಿ ಜಿಪಿಎಸ್ ಆಧಾರಿತ ಕಾಮಗಾರಿಗಳನ್ನು ಯುಕ್ತಧಾರ ತಂತ್ರಾಂಶದ ಮೂಲಕ ವೈಜ್ಞಾನಿಕವಾಗಿ ನಮೂದಿಸುವ ಮತ್ತು ಅನುಷ್ಠಾನಗೊಳಿಸಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಮಹತ್ವದ ಹೆಜ್ಜೆಯನ್ನಿಟ್ಟಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ನರೇಗಾ ಯೋಜನೆಯ 2026-27ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ನ.30ರೊಳಗೆ ಗ್ರಾಮ ಸಭೆ ಮತ್ತು ವಾರ್ಡ್ ಸಭೆ ನಡೆಸಿ ಡಿಸೆಂಬರ್ 5ರೊಳಗೆ ತಾಲೂಕು ಪಂಚಾಯ್ತಿಗೆ ಕ್ರಿಯಾ ಯೋಜನೆ ಸಲ್ಲಿಸಬೇಕು ಎಂದು ತಾಪಂ ಇಒ ಎಚ್.ಜಿ.ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳ ಆಯೋಜನೆ ಸಂಬಂಧ, ಆಯಾ ಗ್ರಾಪಂ ವ್ಯಾಪ್ತಿಯ ಸಣ್ಣ ರೈತರು, ಅತೀ ಸಣ್ಣ ರೈತರು, ಉದ್ಯೋಗ ಚೀಟಿ ಹೊಂದಿರುವ ಕುಟುಂಬದವರು, ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಕಾರ್ಮಿಕ ಆಯವ್ಯಯದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ನರೇಗಾ ಯೋಜನೆಯಡಿ ಜಿಪಿಎಸ್ ಆಧಾರಿತ ಕಾಮಗಾರಿಗಳನ್ನು ಯುಕ್ತಧಾರ ತಂತ್ರಾಂಶದ ಮೂಲಕ ವೈಜ್ಞಾನಿಕವಾಗಿ ನಮೂದಿಸುವ ಮತ್ತು ಅನುಷ್ಠಾನಗೊಳಿಸಲು ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ತಾಲೂಕಿನ 39 ಗ್ರಾಪಂಗಳಲ್ಲಿ 2026-27ನೇ ಸಾಲಿನ ಗ್ರಾಮೀಣಾಭಿವೃದ್ಧಿ ಕ್ರಿಯಾ ಯೋಜನೆಯನ್ನು ಈ ಹೊಸ ತಂತ್ರಾಂಶದ ಮಾರ್ಗಸೂಚಿ ಅನ್ವಯ ಸಿದ್ಧಪಡಿಸಲಾಗುತ್ತಿದೆ ಎಂದರು.

ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿಗಳಿಗೆ ಬೇಡಿಕೆಗಳನ್ನು ಗ್ರಾಪಂ ಅಥವಾ ಆನ್ಲೈನ್ ಮೂಲಕ ಸಲ್ಲಿಸಲು ಅವಕಾಶವಿದೆ. ಆನ್‌ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು. ಶಾಲೆ ಕಾಂಪೌಂಡ್, ಆಟದ ಮೈದಾನ, ಶೌಚಾಲಯ, ಅಡುಗೆ ಕೋಣೆ, ಮಳೆ ನೀರು ಕೊಯ್ಲು, ಅರಣ್ಯೀಕರಣ, ಪೌಷ್ಟಿಕ ಕೈತೋಟ, ಕೆರೆ ಅಭಿವೃದ್ಧಿ, ಕಾಲುವೆ, ಗೋದಾಮು, ಬೂದು ನೀರು ನಿರ್ವಹಣೆ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಒಟ್ಟು 266 ರೀತಿಯ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಅಲ್ಲದೇ, ಗುಲಾಬಿ, ತೆಂಗು, ಮಾವು, ದಾಳಿಂಬೆ, ಬಾಳೆ, ಡ್ರ್ಯಾಗನ್ ಫ್ರೂಟ್, ರೇಷ್ಮೆ, ಸೇರಿದಂತೆ ಹಲವು ಬೆಳೆಗಳ ಅಭಿವೃದ್ಧಿಗೂ ನರೇಗಾ ಯೋಜನೆಯಡಿ ಅನುಕೂಲ ಪಡೆಯಬಹುದು ಎಂದರು.

ಮನೆ ಮನೆಗೆ ಭೇಟಿ ನೀಡಿ ಮನರೇಗಾ ಯೋಜನೆಯ ಕುರಿತು ಜಾಗೃತಿ ಮೂಡಿಸಿ ಬೇಡಿಕೆ ಸ್ವೀಕರಿಸಲಾಗುವುದು. ಉದ್ಯೋಗ ಚೀಟಿ ಹೊಂದಿರುವ ಪ್ರತಿ ಕುಟುಂಬವು 5 ಲಕ್ಷ ರು.ಗಳ ವರೆಗೆ ಯೋಜನೆ ಲಾಭ ಪಡೆಯಬಹುದು. ಕುಟುಂಬಕ್ಕೆ 100 ದಿನಗಳ ಕೂಲಿ, 370 ರು. ಸಮಾನ ವೇತನ, ಹಿರಿಯ ನಾಗರಿಕರಿಗೆ ಮತ್ತು ವಿಶೇಷಚೇತರಿಗೆ ಶೇ.50ರಷ್ಟು ರಿಯಾಯ್ತಿ, ಕಾಮಗಾರಿಯ ಸ್ಥಳದಲ್ಲಿ ಒದಗಿಸಲಾಗುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.

ನರೇಗಾದಡಿ ವೈಯಕ್ತಿಕ ಕಾಮಗಾರಿ ಬೇಡಿಕೆಯನ್ನು ಉಚಿತ ಸಹಾಯವಾಣಿ-ಮೊ-8277506000 ಮೂಲಕ ಸಲ್ಲಿಸಬಹುದು ಎಂದರು.