ಕನಕಗಿರಿ: ಪ್ರತಿ ಮಂಗಳವಾರಕ್ಕೊಮ್ಮೆ ಕುಡಿಯುವ ನೀರಿನ ಸಮಸ್ಯೆ ಕುರಿತಾಗಿ ಸಭೆ ನಡೆಸಿ,ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ ಹೇಳಿದರು.
ಅವರು ಪಟ್ಟಣದ ತಾಪಂ ಸಭಾಂಗಣಲ್ಲಿ ಕರೆದಿದ್ದ ಅಧಿಕಾರಿಗಳ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಸಮಸ್ಯೆ ತೀವ್ರವಾಗುವ ಮುನ್ನವೇ ಎಚ್ಚೆತ್ತುಕೊಂಡು ಕುಡಿಯುವ ಪೂರೈಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಕುಡಿಯುವ ನೀರು ಸರಬರಾಜುಗೊಳಿಸುವ ವಿಚಾರಲ್ಲಿ ಅಸಡ್ಡೆ, ಬೇಜವಾಬ್ದಾರಿ ಸೇರಿದಂತೆ ನಾನಾ ಕಾರಣ ಹೇಳಿ ಜಾರಿಕೊಳ್ಳುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಖಡಕ್ ಸೂಚಿಸಿದರು.
ಅಲ್ಲದೇ ಚುನಾವಣಾ ಗುರುತಿನ ಚೀಟಿವುಳ್ಳ ಪರಿಷ್ಕೃತ ಪಟ್ಟಿ ಶುದ್ಧೀಕರಣಕ್ಕಾಗಿ ಚುನಾವಣಾ ಆಯೋಗವು ಪ್ರೊಜಿನಿ (ಸಂತತಿ) ಮ್ಯಾಪಿಂಗ್ ಕಾರ್ಯ ಹಾಕಿಕೊಂಡಿದೆ.ಈ ಪ್ರಕ್ರಿಯೆ ಆದಷ್ಟು ತೀವ್ರಗತಿಯಲ್ಲಿ ಸೂಕ್ಷ್ಮವಾಗಿ ಆನ್ಲೈನ್ ನಲ್ಲಿ ಭರ್ತಿ ಮಾಡಬೇಕು. ಮತದಾರರ ಪಟ್ಟಿ ಶುದ್ಧಿಗೆ ವೇಗ ನೀಡಬೇಕು ಎಂದು ಆದೇಶಿಸಿದರು.ಜಿಪಂ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ತಹಸೀಲ್ದಾರ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರೂಪಾಕ್ಷ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ಣ ಕಟ್ಟಿಮನಿ ಸೇರಿದಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.