ಸಾರಾಂಶ
ಶಿವಮೊಗ್ಗ: ರಾಜ್ಯ ಸರ್ಕಾರ ಕೂಡಲೇ ಶಿವಮೊಗ್ಗ ಸೇರಿದಂತೆ ರಾಜ್ಯದ 7 ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಮುಂದಾಗಬೇಕು ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಿಗೆ ಇತ್ತೀಚೆಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ ಉಪಲೋಕಾಯುಕ್ತರು ಎಚ್ಚರಿಕೆ ನೀಡಿದ್ದಾರೆ. ಚುನಾಯಿತ ಪ್ರತಿನಿಧಿಗಳು ಇಲ್ಲದೆ ಶಿವಮೊಗ್ಗ ನಗರ ಎಷ್ಟರ ಮಟ್ಟಿಗೆ ಕಸದ ತೊಟ್ಟಿಯಾಗಿದೆ ಎಂದು ಹೇಳಿದ್ದಾರೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ರಾಜ್ಯ ಸರ್ಕಾರಕ್ಕೆ ಚುನಾವಣೆ ನಡೆಸುವುದು ಇಷ್ಟವಿಲ್ಲ ಎಂದು ತೋರುತ್ತದೆ. ಕೂಡಲೇ ಚುನಾವಣೆ ನಡೆಸಲು ಮುಂದಾಗಬೇಕು ಎಂದರು.ಈಗಾಗಲೇ ಚುನಾವಣಾಧಿಕಾರಿಗಳು ಮಹಾನಗರ ಪಾಲಿಕೆಗಳ ಚುನಾವಣೆಗೆ ಸಿದ್ಧತೆ ನಡೆಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ನ್ಯಾಯಾಲಯವು ಕೂಡ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಿ ಎಂದು ತಿಳಿಸಿದೆ. ಆದರೂ ಕೂಡ ರಾಜ್ಯಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯ ಸರ್ಕಾರ ಮೀಸಲಾತಿ ಘೋಷಿಸಿದರೆ ಸರಿ. ಇಲ್ಲದಿದ್ದರೆ ಕೋರ್ಟ್ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಉಪಲೋಕಾಯುಕ್ತರು ನಗರದ ಅಭಿವೃದ್ಧಿಗೆ ಹಣ ಇಲ್ಲದಿದ್ದರೆ ನನಗೆ ತಿಳಿಸಿ ನಾನು ಸರ್ಕಾರಕ್ಕೆ ಪತ್ರ ಬರೆದು ಹಣ ಒದಗಿಸುವ ಬಗ್ಗೆ ಪ್ರಯತ್ನಿಸುತ್ತೇನೆ ಎಂದಿದ್ದಾರೆ. ಆದರೆ, ರಾಜ್ಯ ಸರ್ಕಾರದ ಹತ್ತಿರ ಎಲ್ಲಿ ಹಣವಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು 12 ಕೋಟಿ ರು. ಆಶ್ರಯ ಮನೆಗಳ ಮೂಲಭೂತ ಸೌಕರ್ಯಗಳಿಗೆ ಬಿಡುಗಡೆ ಮಾಡಿಸುತ್ತೇನೆ ಎಂದು 6 ತಿಂಗಳಾಯಿತು. ಹೀಗಿರುವಾಗ ಉಪಲೋಕಾಯುಕ್ತರ ಎಷ್ಟು ಹಣ ಬೇಕಾದರೂ ಪತ್ರ ಬರೆಯಿರಿ ಕಳಿಸುತ್ತೇನೆ ಎಂದದ್ದು ಸಂತೋಷದ ವಿಷಯ ಅಷ್ಟೇ ಎಂದರು.ಸಚಿವ ರಾಜಣ್ಣನ ನೀಚತನ:ವಿಧಾನ ಸೌಧ ಇತಿಹಾಸದಲ್ಲೇ ಇಷ್ಟು ಕೀಳು ಮಟ್ಟದ ರಾಜಕೀಯ ಚರ್ಚೆ ಎಂದೂ ಕೂಡ ಆಗಿಲ್ಲ. ಸಚಿವರಾಗಿರುವ ರಾಜಣ್ಣ ಅವರು ಬಳಸಿದ ಪದಗಳನ್ನು ನೋಡಿದರೆ ಅಸಹ್ಯವಾಗುತ್ತದೆ. ರಾಜಣ್ಣನ ನೀಚತನದಿಂದ ಇಂದು ಟಿವಿ ನೋಡುವುದೇ ಕಷ್ಟವಾಗಿದೆ. ಕರ್ನಾಟಕದಲ್ಲಿ ಇಂತಹ ಮಂತ್ರಿಗಳಿದ್ದಾರೆಯೇ ಎಂದು ನಾಚಿಕೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ವಿಧಾನ ಸಭಾಧ್ಯಕ್ಷ ಖಾಧರ್ ಅವರು 18 ಜನ ಶಾಸಕರನ್ನು ಹೊರ ಹಾಕುವುದರ ಮೂಲಕ ತಮ್ಮ ಖದರ್ ತೋರಿಸಿದ್ದಾರೆ. ಆದರೆ, ಅಶ್ಲೀಲ ಪದಗಳನ್ನು ಬಳಸಿದ ಸಚಿವರನ್ನು ಯಾಕೆ ಹೊರಹಾಕಲಿಲ್ಲ. ಆಗ ಅವರ ಖದರ್ ಎಲ್ಲಿ ಹೋಗಿತ್ತು ? ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ. ಇದಕ್ಕೆ ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕು ಎಂದು ಕುಟುಕಿದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಈ.ವಿಶ್ವಾಸ್, ಮೋಹನ್ ಜಾಧವ್, ಚನ್ನಬಸಪ್ಪ, ರಾಜು, ಶಿವು, ಕುಬೇರಪ್ಪ, ದೊರೆ, ಪ್ರಶಾಂತ್, ಬೇಳೂರು ಗೋವಿಂದಪ್ಪ, ರವಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಧರ್ಮಾಧಾರಿತ ಮೀಸಲಾತಿ ತಪ್ಪು
ಗುತ್ತಿಗೆ ಕಾಮಗಾರಿಗಳಲ್ಲಿ ಮುಸಲ್ಮಾನರಿಗೆ ಶೇ.4 ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿರುವುದು ಸಂವಿಧಾನ ವಿರೋಧಿಯಾಗಿದೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.ಸಂವಿಧಾನದಲ್ಲಿ ಧರ್ಮಾಧರಿತವಾಗಿ ಮೀಸಲಾತಿ ನೀಡುವುದಕ್ಕೆ ಅವಕಾಶ ಇಲ್ಲ. ಅಲ್ಲದೇ ಸುಪ್ರೀಂ ಕೋರ್ಟ್ ಕೂಡ ಇದನ್ನೇ ಹೇಳಿದೆ. ಆದರೂ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಸಮುದಾಯದವರಿಗೆ ಮೀಸಲಾತಿ ಘೋಷಣೆ ಮಾಡಿದ್ದಾರೆ. ಇದು ಅಂಬೇಡ್ಕರ್ ಅವರಿಗೂ ಸಂವಿಧಾನಕ್ಕೂ ಮಾಡಿರುವ ದ್ರೋಹ. ರಾಜಣ್ಣ ಅವರ ಪ್ರಕರಣ ಇರಬಹುದು ಅಥವಾ ಧರ್ಮಾಧಾರಿತ ಪ್ರಕರಣ ಇರಬಹುದು ಇಂತಹ ನೀಚತನದ ಸರ್ಕಾರ ಇರಬಾರದು. ತಕ್ಷಣ ಈ ಸರ್ಕಾರವನ್ನು ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಮಾತ್ತೆತ್ತಿದ್ದರೆ ನಾವು ಸಂವಿಧಾನ ರಕ್ಷಕರು ಎಂದು ಕಾಂಗ್ರೆಸ್ ನಾಯಕರು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಉಪ ಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕೂಡ ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಸಂವಿಧಾನವನ್ನು ತಿದ್ದುಪಡಿ ಮಾಡಿಯಾದರೂ ಮುಸ್ಲಿಂರಿಗೆ ಮೀಸಲಾತಿ ನೀಡುತ್ತೇವೆ ಎಂಬ ಗರ್ವದ ಮಾತುಗಳನ್ನು ಅವರು ಆಡಿದ್ದಾರೆ. ಆದರೆ ಈಗ ನಾನು ಆ ಮಾತು ಹೇಳೇ ಇಲ್ಲ ಎನ್ನುತ್ತಾರೆ. ದೇಶದ ಜನ ಕುರುಡರೋ ಅಥವಾ ಇವರು ಕುರುಡರೋ ಗೊತ್ತಾಗುತ್ತಿಲ್ಲ ಎಂದರು.ಹನಿಟ್ರ್ಯಾಪ್, ಮುಸ್ಲಿಂರ ಓಲೈಕೆ, ಧರ್ಮಾಧಾರಿತ ಮೀಸಲಾತಿ, ಸಂವಿಧಾನ ವಿರೋಧಿ ಹೇಳಿಕೆಗಳು, ಭ್ರಷ್ಟಾಚಾರ ಮುಂತಾದ ಅನೇಕ ಅವಿವೇಕತನಕ್ಕೆ ಹೆಸರಾಗಿರುವ ಮುಸ್ಲಿಂ ಓಲೈಕೆಯ ಕಾಂಗ್ರೆಸ್ ಸರ್ಕಾರವನ್ನು ರಾಜ್ಯಪಾಲರು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.