ಸಾರಾಂಶ
ನಾಗಮಂಗಲ ಗಲಾಟೆ ಖಂಡಿಸಿ ನಗರದ ಟೌನ್ ಹಾಲ್ ಮುಂದೆ ಪ್ರತಿಭಟನೆ ನಡೆಸಲು ಯತ್ನಿಸಿದ 40ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ಧಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಹಿಂಸಾಚಾರ ಖಂಡಿಸಿ ಇಲ್ಲಿನ ಟೌನ್‌ಹಾಲ್ ಎದುರು ಗಣೇಶ ಮೂರ್ತಿ ತಂದು ಪ್ರತಿಭಟನೆಗೆ ಮುಂದಾದ 40ಕ್ಕೂ ಹೆಚ್ಚಿನವರನ್ನು ಮೂರ್ತಿ ಸಮೇತ ಪೊಲೀಸರು ವಶಕ್ಕೆ ಪಡೆದರು.ಶುಕ್ರವಾರ ಮಧ್ಯಾಹ್ನ ಬೆಂಗಳೂರು ಮಹಾನಗರ ಗಣೇಶ ಉತ್ಸವ ಸಮಿತಿಯಡಿ ಪ್ರತಿಭಟನೆಗೆ ಬಂದಿದ್ದರು. ಆದರೆ, ಅನುಮತಿ ಇಲ್ಲದ ಕಾರಣಕ್ಕೆ ಪೊಲೀಸರು ಧರಣಿಗೆ ಅವಕಾಶ ನೀಡಲಿಲ್ಲ. ಪ್ರತಿಭಟನಕಾರರು ಬರುತ್ತಿದ್ದಂತೆ ಎಲ್ಲರನ್ನು ಪೊಲೀಸರು ವಶಕ್ಕೆ ಪಡೆದರು. ಈ ಹಂತದಲ್ಲಿ ವಾಗ್ವಾದ, ತಳ್ಳಾಟ ನೂಕಾಟ ನಡೆಯಿತು. ಪೊಲೀಸರು ಗಣೇಶ ಮೂರ್ತಿಯನ್ನು ಪ್ರತಿಭಟನಕಾರರಿಂದ ಪಡೆದು ವಾಹನದಲ್ಲಿ ಕೊಂಡೊಯ್ದರು. ಬಳಿಕ ಪ್ರತಿಭಟನಕಾರರನ್ನು ಬಿಡುಗಡೆ ಮಾಡಲಾಗಿದೆ.
ನಾಗಮಂಗಲ ಪಟ್ಟಣದಲ್ಲಿ ಅಂಗಡಿ, ವಾಹನಗಳ ಮೇಲೆ ದಾಳಿ ನಡೆಸಿ ಕಲ್ಲು ತೂರಾಟ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಂತಿಯುತ ಪ್ರತಿಭಟನೆಗೆ ಬಂದಿದ್ದೇವೆ. ಆದರೆ, ಇದಕ್ಕೆ ಅವಕಾಶ ಕೊಡದೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಹಿಂದೂಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ನಾಗಮಂಗಲ ಘಟನೆಯಲ್ಲಿ ಯಾವುದೇ ತಪ್ಪಿಲ್ಲದಿದ್ದರೂ ಘಟನೆಯಲ್ಲಿ ಹಿಂದುಗಳನ್ನು ಬಂಧಿಸಲಾಗಿದ್ದು, ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸಲು ಅನುಮತಿ ಇಲ್ಲದ ಕಾರಣ ನಾವು ಪ್ರತಿಭಟನೆಗೆ ಬಂದಿದ್ದವರನ್ನು ತಡೆದಿದ್ದೇವೆ, ಆದರೆ ಮಾತು ಕೇಳದ ಕಾರಣ ಅವರನ್ನು ವಶಕ್ಕೆ ತೆಗೆದುಕೊಳ್ಳಬೇಕಾಯಿತು. ಅವರಲ್ಲಿ ಸುಮಾರು 40 ಮಂದಿಯನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.