ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಂಭ್ರಮದಿಂದ ನಡೆದ ಹೋಳಿ

| Published : Mar 15 2025, 01:02 AM IST

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸಂಭ್ರಮದಿಂದ ನಡೆದ ಹೋಳಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.

ಕಾರವಾರ: ಜಿಲ್ಲೆಯಾದ್ಯಂತ ಹೋಳಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ವಾರಗಳಿಂದ ನಡೆಯುತ್ತಿದ್ದ ಕರಾವಳಿ ಭಾಗದಲ್ಲಿ ಸುಗ್ಗಿ ಕುಣಿತ, ಶಿರಸಿಯಲ್ಲಿ ಬೇಡರ ವೇಷ ಕೂಡ ತೆರೆಕಂಡಿತು.

ಗುರುವಾರ ರಾತ್ರಿ ಕಾಮನ ದಹನ ಮಾಡಿ ಶುಕ್ರವಾರ ಓಕುಳಿ ಆಡಲಾಯಿತು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಸ್ನೇಹಿತರೊಂದಿಗೆ, ಸಂಬಂಧಿಕರೊಂದಿಗೆ, ನೆರೆ ಹೊರೆಯವರೊಂದಿಗೆ ಸೇರಿ ಹೊಳಿ ಹಬ್ಬ ಆಚರಣೆ ಮಾಡಿದರು. ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಶುಭ ಕೋರಿದರು.

ಪುಟಾಣಿಗಳು ಪಿಚ್ಕಾರಿಗಳಲ್ಲಿ ಬಣ್ಣದ ನೀರನ್ನು ತುಂಬಿಕೊಂಡು ಹಾರಿಸಿ ಸಂಭ್ರಮಿಸಿದರು. ಕೆಲವರು ವಾಹನಗಳಲ್ಲಿ ಸಂಚರಿಸುತ್ತಾ ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರು ಕಂಡಾಗ ಬಣ್ಣವನ್ನು ಹಚ್ಚಿ ಹೋಳಿಯ ಶುಭ ಕಾಮನೆ ತಿಳಿಸಿದರು. ಅಬಾಲವೃದ್ಧರಾದಿಯಾಗಿ ಎಲ್ಲರೂ ಬಣ್ಣದೋಕುಳಿಯಲ್ಲಿ ಮಿಂದೆದ್ದರು.

ಕೆಲವರು ಕಡೆ ಮನೆಗಳ ಎದುರು ಇರುವ ಖಾಲಿ ಜಾಗದಲ್ಲಿ ಪೆಂಡಾಲ್‌ಗಳನ್ನು ಹಾಕಿ ಹೋಳಿಯ ಬಣ್ಣದಾಟವಾಡಲು ಸಿದ್ಧತೆ ಮಾಡಿಕೊಂಡು ಡಿಜೆ ಮೂಲಕ ಹಾಡುಗಳನ್ನು ಹಾಕಿ ಕುಣಿದು ಕುಪ್ಪಳಿಸಿದರು. ಡಿಜೆಗಳಲ್ಲಿ ಬರುವ ಹಾಡುಗಳಿಗೆ ತಕ್ಕಂತೆ ಯುವಕ-ಯುವತಿಯರು ಹೆಜ್ಜೆ ಹಾಕಿ ಸಂತಸಪಟ್ಟರು. ಮಧ್ಯಾಹ್ನವಾಗುತ್ತಿದ್ದಂತೆ ಇಲ್ಲಿನ ರವೀಂದ್ರನಾಥ ಟಾಗೋರ್ ಕಡಲತೀರದಲ್ಲಿ ಸಾವಿರಾರು ಜನರು ಸಮುದ್ರ ಸ್ನಾನ ಮಾಡಿದರು.

ಹೋಳಿ ಹಿನ್ನೆಲೆಯಲ್ಲಿ ಒಂದು ವಾರದಿಂದ ಸುಗ್ಗಿ ತಂಡ ಕಟ್ಟಿಕೊಂಡು ತಿರುಗಾಟ ನಡೆಸಿದವರು ಹಬ್ಬದ ದಿನ ಸಂಪ್ರದಾಯವನ್ನು ನೆರವೇರಿಸಿ ಸಮಾಪ್ತಿ ಮಾಡಿದರು. ಶಿರಸಿ ನಗರ ಭಾಗದಲ್ಲಿ ವಾರದಿಂದ ರಾತ್ರಿ ವೇಳೆ ನಡೆಯುತ್ತಿದ್ದ ಬೇಡರ ವೇಷ ಕೂಡ ಮುಕ್ತಾಯ ಕಂಡಿತು. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಬೇಡರ ವೇಷ ನೋಡಲು ಸ್ಥಳೀಯರೊಂದೇ ಅಲ್ಲದೇ ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಕೂಡ ಜನರು ಆಗಮಿಸುತ್ತಾರೆ. ಹೋಳಿ ಹಬ್ಬಕ್ಕೂ ಮೊದಲು ಕರಡಿ, ಹುಲಿ ಇತ್ಯಾದಿ ವೇಷಭೂಷಣ ತೊಟ್ಟು ತಿರುಗಾಟ ಮಾಡಲಾಗುತ್ತದೆ. ಈ ಬಾರಿ ಬಿಸಿಲ ಝಳ ಅಧಿಕವಿದ್ದರೂ, ವಿಪರೀತ ಸೆಖೆಯಿದ್ದರೂ ಇಂತಹ ವೇಷ ತೊಟ್ಟು ತಿರುಗಾಡುವವರ ಉತ್ಸಾಹ ಕಡಿಮೆ ಇರಲಿಲ್ಲ.