ಹಾವೇರಿ: ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಜನತೆ ಮಂಗಳವಾರ ಹೋಳಿ ಹುಣ್ಣಿಮೆ ಅಂಗವಾಗಿ ಪರಸ್ಪರ ಬಣ್ಣವನ್ನು ಎರಚುವ ಮೂಲಕ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಪ್ರತಿಷ್ಠಾಪನೆ ಮಾಡಲಾಗಿದ್ದ ರತಿ ಕಾಮಣ್ಣರ ಮೂರ್ತಿಗಳನ್ನು ಮಂಗಳವಾರ ಬೆಳಗ್ಗೆ ಸಂಪ್ರದಾಯದಂತೆ ಕಾಮ ದಹನ ಮಾಡಿದರು. ಬೆಳಗಾಗುತ್ತಿದ್ದಂತೆ ಮಕ್ಕಳು, ಯುವಕರು, ವಯಸ್ಕರು ಕಾಮದಹನದ ಕಿಚ್ಚನ್ನು ಮನೆಗಳಿಗೆ ತೆಗೆದುಕೊಂಡು ಹೋಗಿ ಮನೆಯ ಅಂಗಳದಲ್ಲಿ ಹೆಂಚುಗಳ ಮೂಲಕ ಕಡಲೆಕಾಳು, ಹೆಸರು ಕಾಳು, ಶೇಂಗಾ ಕಾಳುಗಳನ್ನು ಹುರಿದು ಸವಿದರು. ಬಳಿಕ ಪರಸ್ಪರ ಬಣ್ಣವನ್ನು ಎರಚಿ ಹೋಳಿ ಹಬ್ಬವನ್ನು ಆಚರಿಸಿದರು.ಚಂದ್ರ ಗ್ರಹಣವಿದ್ದರೂ ಹೋಳಿ ಹಬ್ಬದ ಸಂಭ್ರಮಕ್ಕೆ ಕಡಿವಾಣ ಬೀಳಲಿಲ್ಲ. ಯುವಕ-ಯುವತಿಯರು, ವಯಸ್ಕರು, ಮಹಿಳೆಯರು ಕೂಡಾ ವಯಸ್ಸಿನ ಹಂಗು ತೊರೆದು ಹೋಳಿ ಹಬ್ಬದ ಅಖಾಡಕ್ಕೆ ಇಳಿದ್ದರು. ಕೆಲ ಯುವಕರು ಹಲಗೆ ಬಾರಿಸುತ್ತಾ, ಕೇಕೆ ಹಾಕುತ್ತಾ, ಡ್ಯಾನ್ಸ್ ಮಾಡುತ್ತಾ ಗ್ರಾಮೀಣ ಪ್ರದೇಶದ ಪ್ರಮುಖ ಬೀದಿಗಳಲ್ಲಿ ಹಾಯ್ದು ಹೋಗುವ ಜನರಿಗೆ ಗುಲಾಲ್ ಎರಚುತ್ತಾ ಮೆರವಣಿಗೆ ಮುಖಾಂತರ ಸಾಗುತ್ತಿದ್ದ ದೃಶ್ಯಗಳು ಕಂಡುಬಂದವು. ಕೆಲ ಯುವಕರು ಮನೆ ಮುಂಭಾಗದಲ್ಲಿ ನೀರನ್ನು ತುಂಬಿ ಇರಿಸಲಾಗಿದ್ದ ಬ್ಯಾರೇಲ್ ಒಳಗೆ 5 ಕೆಜಿ ಬಣ್ಣ ಚೀಲವನ್ನು ಹರಿದು ಹಾಕಿ ಸಂಪೂರ್ಣ ಮಿಶ್ರಣ ಮಾಡಿ ಬಕೇಟ್‌ಗಳಲ್ಲಿ ತೆಗೆದುಕೊಂಡು ಹೋಗಿ ಸುರಿಯುತ್ತಿದ್ದ ದೃಶ್ಯಗಳು ಕಂಡುಬಂದವು. ಇನ್ನೂ ಕೆಲವರು ತಮಾಷೆಗಾಗಿ ಮೊಟ್ಟೆಯನ್ನು ತಲೆ ಮೇಲೆ ಒಡೆದು ಖುಷಿಪಡುತ್ತಿದ್ದರು. ಒಟ್ಟಿನಲ್ಲಿ ಹೋಳಿ ಹಬ್ಬ ಭರ್ಜರಿಯಾಗಿ ನಡೆದಿದ್ದು, ಜಿಲ್ಲೆಯ ಗ್ರಾಮೀಣ ಭಾಗದ ಜನತೆ ಕಲರ್‌ಫುಲ್ ರಂಗಿನಾಟದಲ್ಲಿ ಮಿಂದೆದಿದ್ದರು.ಹಾವೇರಿ ನಗರದಲ್ಲಿ ಇಂದು ಹೋಳಿ: ಹೋಳಿಯ ಓಕುಳಿ ಆಟಕ್ಕೆ ಯಾಲಕ್ಕಿ ನಗರಿ ಸಕಲ ರೀತಿಯಲ್ಲಿ ಸಜ್ಜುಗೊಂಡಿದ್ದು, ಬುಧವಾರ ನಡೆಯುವ ರಂಗ ಪಂಚಮಿಯಲ್ಲಿ ಜನತೆ ಮಿಂದೇಳಲಿದ್ದಾರೆ. ಹೋಳಿ ಮುನ್ನಾದಿನ ಮಂಗಳವಾರ ನಗರದ ಮಾರುಕಟ್ಟೆಯಲ್ಲಿ ಹೋಳಿ ಆಚರಣೆಯ ವಿವಿಧ ಬಗೆಯ ಬಣ್ಣ, ಸಾಮಗ್ರಿಗಳ ಖರೀದಿ ಭರದಿಂದ ನಡೆಯಿತು. ಎಂ.ಜಿ. ರಸ್ತೆಯಲ್ಲಿ ಬಣ್ಣದ ವ್ಯಾಪಾರ ತುಸು ಜೋರಾಗಿ ನಡೆದಿದೆ. ಅಲ್ಲದೇ ಪೈಬರ್ ಹಲಗೆ ಹಾಗೂ ವಿವಿಧ ಬಗೆಯ ಮುಖವಾಡಗಳ ಮಾರಾಟವೂ ಭರದಿಂದ ಸಾಗಿದೆ. ಹೋಳಿ ಹಬ್ಬದ ನಿಮಿತ್ತ ಇಲ್ಲಿನ ಹಳೆ ಚಾವಡಿ ಸಮೀಪ ಸರ್ಕಾರಿ ಕಾಮಣ್ಣನ್ನು ಪ್ರತಿಷ್ಠಾಪಿಸಲಾಗಿದ್ದು, ಅನೇಕ ಸಂಘ- ಸಂಸ್ಥೆಗಳು ರತಿ-ಮನ್ಮತ ಮೂರ್ತಿಗಳನ್ನು ನಗರದ ಗಲ್ಲಿ-ಗಲ್ಲಿಗಳಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಮಕ್ಕಳು ರಂಗು-ರಂಗಿನ ಬಣ್ಣದಾಟವಾಡಲು ಕಾತುರದಿಂದ ಕಾಯುತ್ತಿದ್ದು, ಬುಧವಾರ ಕಾಮದಹನ ನಡೆಯಲಿದೆ. ಹೋಳಿ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಕೇಸರಿ ಬಾವುಟಗಳು, ಸ್ವಾಗತ ಕಮಾನುಗಳನ್ನು ರಾರಾಜಿಸುತ್ತಿವೆ. ಹೋಳಿಯಾಟಕ್ಕೆ ಸಕಲ ರೀತಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಸಂಭ್ರಮದಿಂದ ಹೋಳಿ ಆಚರಣೆ
ಜಿಲ್ಲೆಯ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಜನತೆ ಮಂಗಳವಾರ ಹೋಳಿ ಹುಣ್ಣಿಮೆ ಅಂಗವಾಗಿ ಪರಸ್ಪರ ಬಣ್ಣವನ್ನು ಎರಚುವ ಮೂಲಕ ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.