ಹೊಸಪೇಟೆಯಲ್ಲಿ ರಂಗೇರಿದ ಹೋಳಿಹಬ್ಬದ ಸಂಭ್ರಮ

| Published : Mar 26 2024, 01:21 AM IST

ಸಾರಾಂಶ

ಕೆಲವೆಡೆ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿದರು. ಯುವಕರು, ಕೇಕೇ ಹಾಕುತ್ತಾ, ತಮ್ಮ ಗೆಳೆಯರ ಮೇಲೆ ಬಣ್ಣಗಳನ್ನು ಎರಚಿ ಗೋಳು ಹೋಯ್ದುಕೊಂಡು ಸಂಭ್ರಮಿಸಿದರು.

ಹೊಸಪೇಟೆ: ನಗರದಲ್ಲಿ ಹೋಳಿಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಪರಸ್ಪರ ಬಣ್ಣ ಎರಚಿ, ಯುವಕರು, ಹಿರಿಯರು, ಮಕ್ಕಳು ಹಬ್ಬಕ್ಕೆ ರಂಗೇರಿಸಿದರು. ಇನ್ನೂ ಮಹಿಳೆಯರು ಹಾಗೂ ಯುವತಿಯರು ಕೂಡ ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು.

ನಗರದ ವಾರ್ಡ್‌, ಓಣಿ, ಓಣಿಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಬಣ್ಣಗಳನ್ನು ಎರಚಿ ಓಕುಳಿಯಾಟವನ್ನು ಆಡಿದ ಯುವಕರು ಮತ್ತು ಮಕ್ಕಳು ಹಲಗೆ ನಾದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.ಕೆಲವೆಡೆ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿದರು. ಯುವಕರು, ಕೇಕೇ ಹಾಕುತ್ತಾ, ತಮ್ಮ ಗೆಳೆಯರ ಮೇಲೆ ಬಣ್ಣಗಳನ್ನು ಎರಚಿ ಗೋಳು ಹೋಯ್ದುಕೊಂಡು ಸಂಭ್ರಮಿಸಿದರು. ತನ್ನ ಮೇಲೆ ಬಣ್ಣ ಎರಚಿದವರ ಮೇಲೆ ಮರು ಬಣ್ಣ ಎರಚಿ ಹಬ್ಬಕ್ಕೆ ಇನ್ನಷ್ಟು ರಂಗೇರಿಸಿದರು. ನಗರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳು ಹಾಗೂ ರಸ್ತೆಗಳ ಮೇಲೆ ಪೊಲೀಸರು ಗಸ್ತು ಹೊಡೆದು, ಪರೀಕ್ಷೆ ಬರೆಯುವ ಮಕ್ಕಳಿಗೆ ತೊಂದರೆಯಾಗದಂತೆ ನಿಗಾವಹಿಸಿದರು.ನಗರದ ಪಟೇಲ್‌ ನಗರ, ಎಂ.ಪಿ. ಪ್ರಕಾಶ ನಗರ, ಎಂ.ಜೆ. ನಗರ, ರಾಜೀವ್‌ ನಗರ, ನೆಹರು ನಗರ, ಇಂದಿರಾ ನಗರ, ತಿರುಮಲ ನಗರ ಸೇರಿದಂತೆ 35 ವಾರ್ಡ್‌ಗಳಲ್ಲೂ ಬಣ್ಣದ ಓಕುಳಿ ಸಂಭ್ರಮ ಮನೆ ಮಾಡಿತ್ತು. ನಗರದಲ್ಲಿ ಹೋಳಿಹಬ್ಬದ ನಿಮಿತ್ತ ಬಣ್ಣದಲ್ಲಿ ಮಿಂದೆದ್ದ ಯುವಕರು, ತೋಟಗಳ ಬೋರ್‌ವೆಲ್‌ಗಳಲ್ಲಿ ಸ್ನಾನ ಮಾಡುತ್ತಿದ್ದ ದೃಶ್ಯಗಳು ಸರ್ವೇಸಾಮಾನ್ಯವಾಗಿದ್ದವು.

ಹೂವಿನ ಓಕುಳಿ: ನಗರದ ಬಲ್ಡೋಟಾ ಪಾರ್ಕ್‌ನಲ್ಲಿ ಪತಂಜಲಿ ಯೋಗ ಸಮಿತಿ ವತಿಯಿಂದ ಬಣ್ಣ ಬಣ್ಣದ ಹೂಗಳಿಂದ ಓಕುಳಿ ಆಡುವ ಮೂಲಕ ವಿಶಿಷ್ಟವಾಗಿ ಹಬ್ಬ ಆಚರಣೆ ಮಾಡಲಾಯಿತು.ಪತಂಜಲಿ ಯೋಗ ಸಮಿತಿಯ ದಕ್ಷಿಣ ಭಾರತ ಪ್ರಭಾರಿ ಭವರ್‌ಲಾಲ್‌ ಆರ್ಯ ಅವರ ಮಾರ್ಗದರ್ಶನದಲ್ಲಿ ಸೋಮವಾರ ನಡೆದ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಪತಂಜಲಿ ಪರಿವಾರದವರು ಹೂವಿನ ಪಕಳೆಗಳನ್ನು ಪರಸ್ಪರ ಎರಚಿ, ಹೋಳಿಯ ಶುಭಾಶಯ ವಿನಿಮಯ ಮಾಡಿದರು. ಕೆಲವರು ನೈಸರ್ಗಿಕ ಬಣ್ಣವನ್ನು ಸಹ ಹಚ್ಚಿ ಸಂಭ್ರಮಪಟ್ಟರು.ರಾಸಾಯನಿಕ ಬಣ್ಣ ಬಳಸುವುದರಿಂದ ಹಲವಾರು ಕಾಯಿಲೆಗಳು ಅದರಲ್ಲೂ ಮುಖ್ಯವಾಗಿ ಚರ್ಮಕ್ಕೆ ಅಪಾಯ ಇರುವುದು ಈಗಾಗಲೇ ಸಾಬೀತಾಗಿದೆ. ಅದರ ಬದಲು ಬಣ್ಣ ಬಣ್ಣದ ಹೂವಿನ ಪಕಳೆಗಳಿಂದಲೇ ಓಕುಳಿ ಆಡುವುದು ಸಾಧ್ಯವಿದೆ. ಇಲ್ಲಿ ಅದನ್ನು ಮಾಡುವ ಮೂಲಕ ಹೊಸಪೇಟೆ ಇತರ ಕಡೆಗಳಿಗೂ ಮಾದರಿಯಾಗಿದೆ’ ಎಂದು ಈ ವೇಖೆ ಭವರಲ್‌ಲಾಲ್‌ ಆರ್ಯ ಹೇಳಿದರು.ಹೋಳಿ ಎಂದರೆ ಎಲ್ಲರೂ ಜಾತಿ, ಮತ ಭೇದ ಮರೆತು ಆಚರಿಸುವ ಸಂಭ್ರಮ. ನಾವೆಲ್ಲರೂ ಒಂದೇ ಎಂಬ ಭಾವ ಈ ಹಬ್ಬದಲ್ಲಿ ಅಡಗಿದೆ. ನಮ್ಮ ಆಚರಣೆಗಳು ಪ್ರಕೃತಿಗೆ ಪೂರಕವಾಗಿದ್ದಾಗ ಪರಿಸರ ಶುದ್ಧವಾಗಿರುತ್ತದೆ, ನಮ್ಮ ಆರೋಗ್ಯವೂ ವೃದ್ಧಿಸುತ್ತದೆ ಎಂದು ಅವರು ತಿಳಿಸಿದರು.

ಬೆಳಗ್ಗೆ 5.15ರಿಂದ 6.45ರವವರೆಗೆ ನಿತ್ಯದಂತೆ ಯೋಗಾಭ್ಯಾಸ ನಡೆದ ಬಳಿಕ ಹೋಳಿ ಆಚರಣೆ ನಡೆಯಿತು. ಮೊದಲಿಗೆ ವಿವಿಧ ಯೋಗ ಶಿಬಿರಗಳ ಸಂಚಾಲಕರಿಗೆ ಹೂವಿನ ಹಾರ ಹಾಕಿ ಗೌರವಿಸಿದ ಭವರ್‌ಲಾಲ್‌ ಆರ್ಯ ಅವರು, ಬಳಿಕ ಜನರ ನಡುವೆಯೇ ತೆರಳಿ ಹೂಗಳನ್ನು ಎರಚಿ ಹೋಳಿ ಆಚರಣೆಗೆ ನಾಂದಿ ಹಾಡಿದರು.ಪತಂಜಲಿ ಯೋಗ ಸಮಿತಿಯ ವಿಜಯನಗರ ಜಿಲ್ಲಾ ಪ್ರಭಾರಿ ಡಾ.ಎಫ್‌.ಟಿ.ಹಳ್ಳಿಕೇರಿ, ಬಳ್ಳಾರಿ ಪ್ರಭಾರಿ ರಾಜೇಶ್ ಕಾರ್ವಾ, ಯುವ ಭಾರತದ ರಾಜ್ಯ ಪ್ರಭಾರಿ ಕಿರಣ್‌ ಕುಮಾರ್, ಯೋಗ ಸಾಧಕರಾದ ಬಾಲಚಂದ್ರ ಶರ್ಮಾ, ಎಚ್‌.ಶ್ರೀನಿವಾಸ ರಾವ್, ಮಂಗಳಮ್ಮ, ಡಾ.ಮಲ್ಲಿಕಾರ್ಜುನ, ಶಿವಮೂರ್ತಿ, ಅಶೋಕ್ ಚಿತ್ರಗಾರ್‌, ಅನಂತ ಜೋಷಿ ಸೇರಿದಂತೆ ವಿವಿಧ ಯೋಗ ಕೇಂದ್ರಗಳ ಸಂಚಾಲಕರು ಪಾಲ್ಗೊಂಡಿದ್ದರು.ಸ್ವಾತಂತ್ರ್ಯ ಉದ್ಯಾನದಲ್ಲೂ ಆಚರಣೆ: ಸ್ವಾತಂತ್ರ್ಯ ಉದ್ಯಾನದಲ್ಲಿ ಸಹ ನಿತ್ಯದ ಯೋಗಾಭ್ಯಾಸದ ಬಳಿಕ ಸಂಭ್ರಮದಿಂದ ಹೋಳಿ ಅಚರಿಸಲಾಯಿತು. ಇಲ್ಲೂ ಸಹ ನೈಸರ್ಗಿಕ ಬಣ್ಣವನ್ನಷ್ಟೇ ಬಳಸಲಾಯಿತು. ಪರಸ್ಪರ ಬಣ್ಣ ಹಚ್ಚಿ, ಹಾಡುಗಳಿಗೆ ನೃತ್ಯ ಮಾಡಿದರು. ಶ್ರೀರಾಮ, ಚಂದ್ರಿಕಾ, ಶೈಲಜಾ, ರಾಜಶೇಖರ, ವೀರಣ್ಣ, ಪಾಂಡುರಂಗ, ಮಾರುತಿ ಪೂಜಾರ, ಸುಜಾತಾ, ಹೇಮಾ, ನೇತ್ರಾ, ಜಗದೀಶ, ಬಾಲಕೃಷ್ಣ, ಶಿವರಾಮ ಮತ್ತಿತರರಿದ್ದರು.