ಸಾರಾಂಶ
ಕಾರವಾರ:
ರಜೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಮೂರು ದಿನಗಳಿಂದ ಜನ ಜಂಗುಳಿ ಉಂಟಾಗಿದೆ. ಅದರಲ್ಲೂ ಮುರ್ಡೇಶ್ವರ, ಗೋಕರ್ಣ ಹಾಗೂ ದಾಂಡೇಲಿ, ಜೋಯಿಡಾ ತುಂಬಿ ತುಳುಕಿದೆ.ಶುಕ್ರವಾರ ಗಣರಾಜ್ಯೋತ್ಸವ, ಶನಿವಾರ ಒಂದು ದಿನ ರಜೆ ಹಾಕಿದರೆ ಮರು ದಿನ ಮತ್ತೆ ರಜೆ. ಇದರಿಂದ ಪ್ರವಾಸಿಗರು ತಂಡೋಪತಂಡವಾಗಿ ಉತ್ತರ ಕನ್ನಡಕ್ಕೆ ಲಗ್ಗೆ ಇಟ್ಟಿದ್ದರು.ಗೋಕರ್ಣದ ಮುಖ್ಯ ಕಡಲತೀರ, ಓಂ ಬೀಚ್, ಕುಡ್ಲೆ ಬೀಚ್, ಹಾಪ್ ಮೂನ್ ಬೀಚ್‌ಗಳಲ್ಲಿ ಹೆಚ್ಚಿನ ಜನ ಸಂದಣಿ ಇತ್ತು. ಮಹಾಬಲೇಶ್ವರ ದೇವಾಲಯ ಹಾಗೂ ಮಹಾಗಣಪತಿ ದೇವಾಲಯಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಿತ್ತು. ಮುರ್ಡೇಶ್ವರ ಕಡಲತೀರದಲ್ಲಿ ಜಲಸಾಹಸ ಕ್ರೀಡೆಗಳಿಗೆ ಪ್ರವಾಸಿಗರು ಮುಗಿಬಿದ್ದರು. ಸ್ಪೀಡ್ ಬೋಟ್, ಜೆಟ್ ಸ್ಕೀ, ಬೋಟಿಂಗ್‌ಗಳಲ್ಲಿ ಜನತೆ ವಿಹರಿಸಿ ಖುಷಿ ಪಟ್ಟರು. ಸ್ಕೂಬಾ ಡೈವಿಂಗ್‌ಗೆ ಆಗಮಿಸಿದ ಸಾಹಸಿಗಳ ಸಂಖ್ಯೆಯೂ ಹೆಚ್ಚಿತ್ತು. ಸೀ ವಾಕ್ ನಲ್ಲೂ ಜನರು ಹೆಚ್ಚಿದ್ದರು. ದಾಂಡೇಲಿ ಹಾಗೂ ಜೋಯಿಡಾದ ಕಾಡುಗಳಲ್ಲಿ ವಿಹರಿಸಲು, ಕಾಳಿ ನದಿಯಲ್ಲಿ ಬೋಟಿಂಗ್ ಮಾಡಲು ಜನತೆ ತಂಡೋಪತಂಡವಾಗಿ ಬಂದಿದ್ದರು. ಸಾತೊಡ್ಡಿ ಜಲಪಾತ, ಮಾಗೋಡ ಜಲಪಾತ, ವಿಭೂತಿ ಜಲಪಾತ, ಉಂಚಳ್ಳಿ ಫಾಲ್ಸ್, ಯಾಣ, ಜೇನುಕಲ್ಲು ಗುಡ್ಡ ಮತ್ತಿತರ ಪ್ರವಾಸಿ ತಾಣಗಳಲ್ಲಿ ಜನರ ಸಂಖ್ಯೆ ಹೆಚ್ಚು ಕಂಡುಬಂತು.ಗೋಕರ್ಣ, ಮುರ್ಡೇಶ್ವರ, ದಾಂಡೇಲಿ ಹಾಗೂ ಜೋಯಿಡಾಗಳಲ್ಲಿ ಹೊಟೇಲ್, ರೆಸಾರ್ಟ್, ಕಾಟೇಜಗಳನ್ನು 15 ದಿನಗಳ ಹಿಂದೆಯೇ ಬುಕ್ ಮಾಡಲಾಗಿತ್ತು. ಹೋಂ ಸ್ಟೇಗಳೂ ಸಹ ಭರ್ತಿಯಾಗಿದ್ದವು. ಪ್ರತಿ ಪ್ರವಾಸಿ ತಾಣಗಳಲ್ಲಿ ನೂರಾರು ಜನರು ವಾಸ್ತವ್ಯಕ್ಕೆ ಅವಕಾಶ ಇಲ್ಲದೆ ಪರದಾಡುವಂತಾಯಿತು.
ಅದರಲ್ಲೂ ಭಾನುವಾರ ಪೊಲೀಸ್ ಇಲಾಖೆಯ ಸಶಸ್ತ್ರ ಮೀಸಲು ಪಡೆ ಲಿಖಿತ ಪರೀಕ್ಷೆ ಇರುವುದರಿಂದ 5 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಕಾರವಾರಕ್ಕೆ ಆಗಮಿಸಿದ್ದು, ಕಾರವಾರದ ಹೊಟೇಲ್, ರೆಸಾರ್ಟಗಳು ಭರ್ತಿಯಾಗಿ ವಾಸ್ತವ್ಯಕ್ಕೆ ಅವಕಾಶ ಇಲ್ಲದೆ ಪರೀಕ್ಷಾರ್ಥಿಗಳು ಕಲ್ಯಾಣ ಮಂಟಪ, ಹಾಲ್ ಗಳಲ್ಲಿ ತಂಗುವಂತಾಯಿತು.ಪ್ರವಾಸಿಗರ ಭರಾಟೆಯಿಂದ ಬಸ್ ಗಳೂ ಪ್ರಯಾಣಿಕರಿಂದ ತುಂಬಿತ್ತು. ಕಾರು, ಟಿಟಿಗಳ ಓಡಾಟದ ಭರಾಟೆಯೂ ಜೋರಾಗಿತ್ತು. ಈಚಿನ ದಿನಗಳಲ್ಲಿ ಸಾಲಾಗಿ ರಜೆ ಬಂತೆಂದರೆ ಸಾಕು ಉತ್ತರ ಕನ್ನಡದ ಪ್ರವಾಸಿ ತಾಣಗಳಲ್ಲಿ ಜನರು ಸಾವಿರಾರು ಸಂಖ್ಯೆಯಲ್ಲಿ ಲಗ್ಗೆ ಇಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರವಾಸಿಗರಿಗೆ ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗದಂತಾಗಿದೆ.