ಅಡುಗೆ ಸಿಬ್ಬಂದಿಗಳಿಗೆ ಸುರಕ್ಷತಾ ತರಬೇತಿ

| Published : Jan 29 2024, 01:33 AM IST

ಸಾರಾಂಶ

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಿಕ್ಷಣ ಇಲಾಖೆ ಇಸಿಒ ಸುಚಿತ್ಚಂದ್ರ ಮಾತನಾಡಿ, ಅಡುಗೆ ಸಿಬ್ಬಂದಿ ಸುರಕ್ಷತೆಯೊಂದಿಗೆ ಸ್ವಚ್ಛತೆಗೂ ಪ್ರಾಮುಖ್ಯತೆ ನೀಡಬೇಕು. ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಿ ಎಸ್‌ಒಪಿ ಪಾಲನೆ ಮಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಕೊಪ್ಪ

ಪಟ್ಟಣದ ಕೆಪಿಎಸ್ ಪ್ರೌಢಶಾಲೆಯಲ್ಲಿ ಭಾನುವಾರ ಬಿಸಿಯೂಟ ತಯಾರಿಕಾ ಅಡುಗೆ ಸಿಬ್ಬಂದಿಗೆ ಸುರಕ್ಷತಾ ಮತ್ತು ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.

ಅಗ್ನಿಶಾಮಕ ದಳದ ಜೋಶ್ ಮತ್ತು ಮಲ್ಲೇಶ್‌ರವರು ಗ್ಯಾಸ್ ಸಿಲಿಂಡರ್ ಬಳಕೆ ಬಗ್ಗೆ, ಆಕಸ್ಮಾತ್ ಅಗ್ನಿ ಅವಘಡಗಳಾದಲ್ಲಿ ಅದನ್ನು ಆರಿಸುವ ಬಗ್ಗೆ ಪ್ರಾತ್ಯಕ್ಷಿಕ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಿಕ್ಷಣ ಇಲಾಖೆ ಇಸಿಒ ಸುಚಿತ್ಚಂದ್ರ ಮಾತನಾಡಿ, ಅಡುಗೆ ಸಿಬ್ಬಂದಿ ಸುರಕ್ಷತೆಯೊಂದಿಗೆ ಸ್ವಚ್ಛತೆಗೂ ಪ್ರಾಮುಖ್ಯತೆ ನೀಡಬೇಕು. ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಿ ಎಸ್‌ಒಪಿ ಪಾಲನೆ ಮಾಡಬೇಕು ಎಂದರು.

ಅಕ್ಷರ ದಾಸೋಹದ ತಾಲೂಕು ನಿರ್ದೇಶಕ ಎಲ್.ಅಂಜನಪ್ಪ ಮಾತನಾಡಿ, ಬಿಸಿಯೂಟ ತಯಾರಿಕೆಗೆ ಸರ್ಕಾರ ನೀಡುತ್ತಿರುವ ದಿನಸಿ ಸಾಮಾಗ್ರಿಗಳನ್ನು ಕಾಲಕಾಲಕ್ಕೆ ತಲುಪಿಸಲಾಗುತ್ತಿದೆ. ಗುಣಮಟ್ಟದ ಬಗ್ಗೆ ಅನುಮಾನಗಳಿದ್ದಲ್ಲಿ ನೇರವಾಗಿ ಇಲಾಖೆಗೆ ದೂರು ಸಲ್ಲಿಸಿ. ಅಡುಗೆಗೆ ಬಳಸುವ ಪಾತ್ರೆಗಳನ್ನು ಅಡುಗೆಗೂ ಮುನ್ನ ಮತ್ತೊಮ್ಮೆ ಶುದ್ಧೀಕರಿಸತಕ್ಕದ್ದು. ಬಿಸಿ ಅನ್ನ ಸಾಂಬಾರು ಒಲೆಯಿಂದ ಇಳಿಸಿದ ನಂತರ ಸುರಕ್ಷಿತ ಜಾಗದಲ್ಲಿ ಇಡತಕ್ಕದ್ದು. ಅಡುಗೆ ಮಾಡುವ ಸ್ಥಳದಲ್ಲಿ ಮಕ್ಕಳ ಓಡಾಟ ನಿರ್ಬಂಧಿಸುವುದು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಅದು ಅಡುಗೆ ಸಿಬ್ಬಂದಿ ಹೊಣೆಗಾರಿಕೆಯಾಗಿರಬೇಕು ಎಂದರು.

ತಾಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಅಡುಗೆ ಸಿಬ್ಬಂದಿ ಒಂದು ದಿನದಲ್ಲಿ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಹಿತಿ ಪಡೆದುಕೊಂಡರು.