ಕಲಘಟಗಿ: ದೇಶದ ಸಮಗ್ರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ದೇಶದ ಸಮಗ್ರ ಅಭಿವೃದ್ಧಿಯೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂಲ ಮಂತ್ರವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಅವರು ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ಮತ್ತು ಶಾಲಾ ಬ್ಯಾಗ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಿಎಸ್‌ಆರ್ ಅನುದಾನದಲ್ಲಿ ಪ್ರತಿ ವರ್ಷವೂ ಕಲಘಟಗಿ ತಾಲೂಕಿನ ಪ್ರತಿಯೊಂದು ಶಾಲೆಗೂ ಡೆಸ್ಕ್, ಸಮವಸ್ತ್ರ ಹಾಗೂ ಸ್ಕೂಲ್ ಬ್ಯಾಗ್ ಮತ್ತು ಶಾಲಾ ಕೊಠಡಿಗೆ ಬಣ್ಣ ಹಚ್ಚುವುದು ಮತ್ತು ಇನ್ನಿತರ ದುರಸ್ತಿ ಮಾಡಲಾಗುತ್ತಿದೆ. ಇದಲ್ಲದೇ ಕೆಂದ್ರ ಸರ್ಕಾರದ ಅನುದಾನದಲ್ಲಿ ಧಾರವಾಡ-ಕಲಘಟಗಿ, ಕಲಘಟಗಿ- ಬೇಗೂರ, ಕಲಘಟಗಿ - ಹಿಂಡಸಗೇರಿ ರಸ್ತೆಗಳಿಗೆ ಅನುದಾನ ನೀಡಲಾಗಿದೆ. ಪ್ರತಿಯೊಂದು ಚುನಾವಣೆಯಲ್ಲೂ ಈ ಗ್ರಾಮ ನನಗೆ ಅತಿ ಹೆಚ್ಚಿನ ಮತಗಳನ್ನು ನೀಡಿ ಆಶೀರ್ವದಿಸಿದೆ. ಈ ಜನರಿಗೆ ಯಾವಾಗಲೂ ಚಿರಋಣಿಯಾಗಿರುತ್ತೇನೆ ಎಂದರು. ನಂತರ ಕೇಂದ್ರದ ಅನುದಾನದಲ್ಲಿ ಮಂಜೂರಾದ ಕಾಮಗಾರಿಗಳನ್ನು ಪರಿಸೀಲಿಸಿದರು.
ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ದೇಶದ ಅಭಿವೃದ್ಧಿಗಾಗಿ ಪಕ್ಷ ಎಂದಿಗೂ ಶ್ರಮಿಸುತ್ತಿದೆ. ಸೈನಿಕರು ನಮ್ಮ ದೇಶದ ರಕ್ಷಣೆಗಾಗಿ ಗಡಿಯಲ್ಲಿ ಕಾಯುತ್ತಿದ್ದು, ಇಂತಹ ನಿರ್ಭೀತಿಯ ವಾತವರಣ ಸೃಷ್ಟಿಯಾಗಲು ಪ್ರಧಾನಿ ಮೋದಿಯವರ ಕಾರ್ಯ ದಕ್ಷತೆ ಹಾಗೂ ದೇಶಪ್ರೇಮದಿಂದ ಮಾತ್ರ ಸಾಧ್ಯವಾಗಿದೆ ಎಂದರು.ಈ ಕ್ಷೇತ್ರದ ಶಾಸಕರು ತಾಲೂಕಿನ ಅಭಿವೃದ್ಧಿ ಮರೆತು ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳು ಆವರಿಸಿದ್ದರೂ ರೈತರ ಹಾಗೂ ಜನಸಾಮಾನ್ಯರ ಸಮಸ್ಯೆಗಳನ್ನು ಕೇಳುವವರಿಲ್ಲದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಚನ್ನಪ್ಪ ಮುಗದ, ವಿನಾಯಕ ಧನಿಗೊಂಡ, ಶಂಕ್ರಪ್ಪ ಮನಗುಂಡಿ, ಶಿವಲಿಂಗಪ್ಪ ಯಲಿವಾಳ, ಕಿರಣ ಪಾಟೀಲ ಕುಲಕರ್ಣಿ, ಸಂತೋಷ ಜಿನ್ನಮ್ಮನವರ, ಶಿವರುದ್ರ ಗೋಕುಲ, ಮಾಲಾ ಗೋಕುಲ, ಗೀತಾ ಮರಲಿಂಗಣ್ಣವರ, ವಿಜಯಲಕ್ಷ್ಮೀ ಆಡಿನವರ, ಬಸವರಾಜ ಮಾದಿ, ನಿಂಗಪ್ಪ ಹುಲ್ಲಂಬಿ, ಚನ್ನಪ್ಪ ಕೊಟಗುಣಿಸಿ, ಬಸವರಾಜ ಉಳ್ಳಾಗಡ್ಡಿ, ಮಲ್ಲಪ್ಪ ಉಳ್ಳಾಗಡ್ಡಿ ಸೇರಿದಂತೆ ಹಲವರಿದ್ದರು.