ಗೃಹ ರಕ್ಷಕರ ಸೇವೆ ಶ್ಲಾಘನೀಯ: ಸಿರಾಜ್ ಹುಸೇನ್

| Published : Dec 27 2024, 12:46 AM IST

ಗೃಹ ರಕ್ಷಕರ ಸೇವೆ ಶ್ಲಾಘನೀಯ: ಸಿರಾಜ್ ಹುಸೇನ್
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಗೃಹ ರಕ್ಷಕರು ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ.

ಸಂಡೂರು: ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಗೃಹ ರಕ್ಷಕರು ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ಗೃಹ ರಕ್ಷಕರ ಸೇವೆ ಶ್ಲಾಘನೀಯವಾಗಿದೆ ಎಂದು ಪುರಸಭೆ ಅಧ್ಯಕ್ಷ ಎಸ್. ಸಿರಾಜ್ ಹುಸೇನ್ ಅಭಿಪ್ರಾಯಪಟ್ಟರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಗೃಹ ರಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಗೃಹ ರಕ್ಷಕರಿಗೆ ಕಚೇರಿ ವ್ಯವಸ್ಥೆ ಮಾಡಿಕೊಡುವ ಬೇಡಿಕೆ ಕುರಿತು ಮಾತನಾಡಿದ ಪುರಸಭೆ ಅಧ್ಯಕ್ಷರು, ಈ ಕುರಿತು ಒಂದು ಮನವಿಯನ್ನು ಕೊಡಿ. ಶಾಸಕರು ಹಾಗೂ ಸಂಸದರೊಂದಿಗೆ ಚರ್ಚಿಸಿ, ಗೃಹ ರಕ್ಷಕರಿಗೆ ಕಚೇರಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಬಿಎಸ್‌ಎಫ್ ನಿವೃತ್ತ ಯೋಧ ಮಂಜುನಾಥ್ ಹಾಗೂ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕ್ರೀಡಾ ವಿಭಾಗದ ಸಹಾಯಕ ನಿರ್ದೇಶಕ ಶಿವರಾಮಪ್ಪ ರಾಗಿ ಗೃಹ ರಕ್ಷಕರ ಸೇವೆಯನ್ನು ಶ್ಲಾಘಿಸಿದರಲ್ಲದೆ, ಅವರನ್ನು ಸರ್ಕಾರ ಪೊಲೀಸರಂತೆ ಪರಿಗಣಿಸಿ, ಅವರ ಸೇವೆ ಖಾಯಂಗೊಳಿಸಿ, ಸರ್ಕಾರಿ ನೌಕರರನ್ನಾಗಿ ಪರಿಗಣಿಸುವ ಅಗತ್ಯವಿದೆ. ಇದರಿಂದ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿರುವ ಗೃಹ ರಕ್ಷಕರಿಗೆ ತುಂಬ ಅನುಕೂಲವಾಗಲಿದೆ ಎಂದರು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಗೃಹ ರಕ್ಷಕರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿ, ಜಾಗೃತಿ ಮೂಡಿಸಲಾಯಿತು.

ಗೃಹ ರಕ್ಷಕ ದಳದ ಹೊಸಪೇಟೆ ಘಟಕಾಧಿಕಾರಿ ಎಸ್.ಎಂ. ಗಿರೀಶ್, ಪ್ರಥಮ ದರ್ಜೆ ಸಹಾಯಕ ಸಂತೋಷ್, ಸಂಡೂರು ಘಟಕಾಧಿಕಾರಿ ಎನ್. ಮಲ್ಲಿಕಾರ್ಜುನ, ಬೋಧಕ ಬಸವರಾಜ, ಅಧಿಕಾರಿ ಸುರೇಶ್ ಅವರು ಮಾತನಾಡಿ, ಗೃಹ ರಕ್ಷಕ ದಳದ ಸೇವೆ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ನರಸಿಂಹ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಾಲ್ಯಾನಾಯ್ಕ್ ಅವರು ಪ್ರಾರ್ಥಿಸಿದರು. ಬಸವರಾಜ ಅವರು ಸ್ವಾಗತಿಸಿದರು. ಗೃಹ ರಕ್ಷಕರು ಉಪಸ್ಥಿತರಿದ್ದರು.